*ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ ನ ಐವರು ಹಾಗೂ ಬಿಜೆಪಿಯ ಇಬ್ಬರು ಅಭ್ಯರ್ಥಿಗಳು ಗೆಲುವು*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರು: ತೀವ್ರ ಕುತೂಹಲ ಮೂಡಿಸಿದ್ದ ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ. ಕಾಂಗ್ರೆಸ್ನ ಐವರು ಮತ್ತು ಬಿಜೆಪಿಯ ಇಬ್ಬರು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಜೆಡಿಎಸ್ನಿಂದ ಸ್ಪರ್ಧಿಸಿದ್ದ ಏಕೈಕ ಅಭ್ಯರ್ಥಿ ಸೋಲನುಭವಿಸಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ನಿಂದ ಕ್ರಾಸ್ ವೋಟಿಂಗ್ ಆಗಿರುವುದೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಕಾಂಗ್ರೆಸ್ನ 5ನೇ ಅಭ್ಯರ್ಥಿ ವಿನಯ್ ಕಾರ್ತಿಕ್ಗೆ 32 ಮತಗಳು ಬಂದಿದ್ದರೆ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಪರ 14 ಮತಗಳು ಬಿದ್ದಿವೆ.
ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ಗೆ 11 ಹೆಚ್ಚುವರಿ ಮತಗಳು ದೊರೆತಿವೆ. ಶಿವರಾಂ ಹೆಬ್ಬಾರ್, ಎಸ್.ಟಿ.ಸೋಮಶೇಖರ್ ಹೊರತುಪಡಿಸಿ ಬಿಜೆಪಿಯ 3 ಮತ್ತು ಜೆಡಿಎಸ್ನ 6 ಶಾಸಕರಿಂದ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ಚಲಾವಣೆಯಾಗಿದೆ. ಹೀಗಾಗಿ ಲಿಂಗರಾಜ ಪಾಟೀಲ್ ಗೆಲುವಿನ ಕೋಟಾ ತಲುಪಿರಲಿಲ್ಲ. ಪ್ರತಿ ಅಭ್ಯರ್ಥಿ ಗೆಲ್ಲಲು 27.63 ಮತ ಪಡೆಯಬೇಕು. ಆದರೆ ಲಿಂಗರಾಜ ಪಾಟೀಲ್ಗೆ ಕೇವಲ 27 ಮತಗಳು ಸಿಕ್ಕಿದ್ದವು. ಜೆಡಿಎಸ್ನ ಗೋವಿಂದರಾಜು 14 ಮತ ಪಡೆದಿದ್ದ ಹಿನ್ನೆಲೆಯಲ್ಲಿ ಎಲಿಮಿನೇಷನ್ ರೌಂಡ್ನಲ್ಲಿ ಲಿಂಗರಾಜ್ ಪಾಟೀಲ್ಗೆ ಜಯ ಸಿಕ್ಕಿದೆ.
ಇನ್ನು ಚಲಾವಣೆಗೊಂಡಿದ್ದ 222 ಮತಗಳ ಪೈಕಿ ಒಂದು ಮತ ಅಸಿಂಧುವಾಗಿದೆ. ನಂಬರ್ ಸರಿಯಾಗಿ ಬರೆಯದಿದ್ದಕ್ಕೆ 1 ಮತವನ್ನು ತಿರಸ್ಕರಿಸಲಾಗಿದೆ ಎಂದು ತಿಳಿದುಬಂದಿದೆ.


