*ಮರಾಠಿ ನಾಮಫಲಕ್ಕೆ ಅವಕಾಶ ನೀಡಿ; ನಾಡದ್ರೋಹಿ ಎಂಇಎಸ್‌ನಿಂದ ಆಗ್ರಹ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯಲ್ಲಿ ಕನ್ನಡ ನಾಮಫಲಕ ಕಡ್ಡಾಯಕ್ಕೆ ವಿರೋಧಿಸಿ, ಮರಾಠಿ ನಾಮಫಲಕ್ಕೆ ಅವಕಾಶ ನೀಡಬೇಕು ಎಂದು ನಾಡದ್ರೋಹಿ ಎಂಇಎಸ್ ಆಗ್ರಹಿಸಿದೆ.
ಇಂದು ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದ ಎಂಇಎಸ್ ವಿವಿಧ ಬೇಡಿಗೆ ಆಗ್ರಹಿಸಿದೆ. ಶೇ.60 ರಷ್ಟು ಕನ್ನಡದೊಂದಿಗೆ ಶೇ. 40 ಅನ್ಯ ಭಾಷೆ ಎಂಬ ಕರ್ನಾಟಕ ಸರ್ಕಾರ ಕಾನೂನು ಬೆಳಗಾವಿಯಲ್ಲಿಯೂ ಜಾರಿಯಾಗಲಿ. ಅಲ್ಲದೇ ಭಾಷಿಕ ಅಲ್ಪಸಂಖ್ಯಾತರ ಕಾನೂನಿನಡಿ ಸಿಗಬೇಕಾದ ಸೌಲಭ್ಯಗಳನ್ನು ಬೆಳಗಾವಿ ಜಿಲ್ಲಾಡಳಿತ ಜಾರಿಗೊಳಿಸಲಿ ಎಂದು ಆಗ್ರಹಿಸಿ ಇಂದು ಬೆಳಗಾವಿಯ ಜಿಲ್ಲಾಧಿಕಾರಿಗಳಿಗೆ ಮಹಾರಾಷ್ಟ್ರ ಏಕೀಕರಣ ಸಮಿತಿಯೂ ಮನವಿ ಮಾಡಿದೆ.
ಈ ವೇಳೆ ಬೆಳಗಾವಿ ಗಡಿಭಾಗದಲ್ಲಿ ಭಾಷಾ ಅಲ್ಪಸಂಖ್ಯಾತರ ಕಾನೂನುಗಳ ಜಾರಿ ಹಾಗೂ ಶಾಂತಿ ಸೌಹಾರ್ದತೆ ಕಾಪಾಡಲು ಮಹಾರಾಷ್ಟ್ರ ಮತ್ತು ಕರ್ನಾಟಕದ ಗಡಿಭಾಗದ ಸಮಸ್ಯೆಗಳ ಚರ್ಚೆಗೆ ಜಿಲ್ಲಾ ಮಟ್ಟದ ಸಮನ್ವಯ ಸಮಿತಿಯನ್ನು ಸ್ಥಾಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಮೊಹ್ಮದ್ ರೋಷನ್ ತಿಳಿಸಿದ್ದಾರೆ.
ಮಹಾರಾಷ್ಟ್ರ ಏಕೀಕರಣ ಸಮಿತಿಯ ಅಧ್ಯಕ್ಷರಾದ ಪ್ರಕಾಶ್ ಮರಗಾಳೆ, ಮುಖಂಡರಾದ ಮಾಜಿ ಶಾಸಕ ಮನೋಹರ ಕಿಣೇಕರ ಇನ್ನುಳಿದವರು ಇದ್ದರು.




