Belagavi NewsBelgaum NewsKannada NewsKarnataka News

*ಸ್ಫೂರ್ತಿದಾಯಕ ಮತ್ತು ಮಾದರಿ ಬದುಕು ನಮ್ಮದಾಗಬೇಕು; ಡಾ. ತೋಂಟದ ಸಿದ್ದರಾಮ ಶ್ರೀಗಳು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ; ನಮ್ಮ ಬದುಕು ಇತರರಿಗೆ ಸ್ಫೂರ್ತಿದಾಯಕವಾಗುವಂತಿರಬೇಕು ಸಮಾಜಕ್ಕೆ ಮಾದರಿಯಾಗುವಂತಿರಬೇಕು ಎಂದು ಗದುಗಿನ ತೋಂಟದಾರ್ಯ ಮಠದ ಜಗದ್ಗುರು ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ನುಡಿದರು. 

ಅವರು ಬೆಳಗಾವಿಯಲ್ಲಿ ಲಿಂಗೈಕ್ಯ. ಪದ್ಮಾವತಿ ಷಣ್ಮುಖಪ್ಪ ಅಂಗಡಿ ಅವರ ಸ್ಮರಣಾರ್ಥ ಜಿಲ್ಲಾ ಪಂಚಾಯತ ಮಾಜಿ ಸದಸ್ಯೆ ನೇಗಿನಹಾಳದ ರೋಹಿಣಿ ಬಾಬಾ ಸಾಹೇಬ್ ಪಾಟೀಲ್ ಅವರಿಗೆ “ಮಹಿಳಾ ರತ್ನ ” ಮತ್ತು ಬೆಳಗಾವಿ ಮಹಿಳಾ ಕಲ್ಯಾಣ ಸಂಸ್ಥೆಯ ಎಂ.ಎಸ್. ಚೌಗುಲಾ ಮತ್ತು ವೈಜಯಂತಿ ಚೌಗುಲಾ ಅವರುಗಳಿಗೆ “ಆದರ್ಶ ದಂಪತಿ” ಪ್ರಶಸ್ತಿಗಳನ್ನು ಪ್ರದಾನ ಮಾಡಿ ಆಶೀರ್ವಚನ ನೀಡುತ್ತಿದ್ದರು.

65 ವರ್ಷಗಳ ಹಿಂದೆ ಲಿಂಗೈಕ್ಯರಾದ ಪದ್ಮಾವತಿ ಷಣ್ಮುಖಪ್ಪ ಅಂಗಡಿಯವರು ಅಭಿಜಾತ ಪ್ರತಿಭೆಯುಳ್ಳವರು ಅಂದಿನ ಕಾಲದಲ್ಲಿ ಕೇವಲ 6ನೇ ತರಗತಿವರೆಗೆ ಓದಿದ್ದ ಅವರು ಸಾಮಾಜಿಕ ಕಳಕಳಿ ಉಳ್ಳವರಾಗಿದ್ದರು ಬಡವರಿಗೆ ಸಹಾಯ ಮಾಡುವುದು ಸಮಾಜ ಸೇವೆ ಸಾಹಿತ್ಯ ಸೇವೆ ತಮ್ಮ ಜೀವನದ ಗುರಿಯಾಗಿಸಿಕೊಂಡಿದ್ದರು. 

ಕರ್ನಾಟಕ ವಿಶ್ವವಿದ್ಯಾಲಯದ ಸ್ಥಾಪನೆಯಲ್ಲಿ ವಿಶೇಷ ಪಾತ್ರವಹಿಸಿ ಸೀನೇಟ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರೌಢ ಶಿಕ್ಷಣ ಮಂಡಳಿಯ ಸದಸ್ಯರಾಗಿ ಬೆಳಗಾವಿ ಪರಿಸರದಲ್ಲಿ ಕನ್ನಡ ಶಾಲೆಗಳ ಸ್ಥಾಪನೆಗೆ ವಿಶೇಷ ಶ್ರಮ ವಹಿಸಿದವರು. ಮುಂಬೈ ಸರ್ಕಾರದಿಂದ ಗೌರವ ನ್ಯಾಯಾಧೀಶರಾಗಿ ನೇಮಕಗೊಂಡು ಕಾರ್ಯ ನಿರ್ವಹಿಸಿದ್ದು ಚಿರಸ್ಮರಣೀಯ ಎಂದರು.

Home add -Advt

ಮಹಿಳಾ ಕಲ್ಯಾಣ ಸಂಸ್ಥೆ ಸ್ಥಾಪಿಸಿದ ಎಂ.ಎಸ್. ಚೌಗುಲಾ ಮತ್ತು ಅವರ ಪತ್ನಿ ವೈಜಯಂತಿ ಚೌಗುಲಾ ಅಲ್ಲದೆ ಅವರ ಸಂಪೂರ್ಣ ಕುಟುಂಬ ಮಹಿಳಾ ಕಲ್ಯಾಣಕ್ಕಾಗಿ ಸಲ್ಲಿಸಿದ ಸೇವೆ ಅಪಾರವಾಗಿದೆ. ಇದಲ್ಲದೆ ನಾಗನೂರು ಶ್ರೀಮಠದಿಂದ ನಡೆಸಲ್ಪಡುವ ವೃದ್ಧಾಶ್ರಮದ ಸಂಪೂರ್ಣ ಜವಾಬ್ದಾರಿ ಹೊಂದಿರುವ ಇವರಿಗೆ ರಾಜ್ಯ ಪ್ರಶಸ್ತಿ, ರಾಷ್ಟ್ರೀಯ ಪ್ರಶಸ್ತಿ, ಸಂಘ ಸಂಸ್ಥೆಗಳ 10 ಹಲವು ಪ್ರಶಸ್ತಿಗಳನ್ನು ಪಡೆದ ಇವರು ಸಂಗಾತಿ ಮತ್ತು ಸಾಂತ್ವನ ಕೇಂದ್ರಗಳ ಮೂಲಕ ಮಾಡಿದ ಸಮಾಜ ಸೇವೆ ವರ್ಣನೆಗೆ ಮೀರಿದ್ದು ಎಂದು ಅಭಿಪ್ರಾಯ ಪಟ್ಟರು.

ಮಹಿಳಾ ರತ್ನ ಪ್ರಶಸ್ತಿ ಪಡೆದ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಕಿತ್ತೂರು ಭಾಗದಲ್ಲಿ ಅಪಾರ ಸೇವೆ ಸಲ್ಲಿಸಿದ  ರೋಹಿಣಿ ಬಾಬಾ ಸಾಹೇಬ್ ಪಾಟೀಲ್ ಅವರ ಸಾಮಾಜಿಕ ಸೇವೆಯ ಫಲವೇ ಮುಂದೆ ಅವರ ಪತಿ ಬಾಬಾಸಾಹೇಬ್ ಪಾಟೀಲರು ಶಾಸಕರಾಗಿ ಆಯ್ಕೆಯಾಗಲು ಸಹಾಯವಾಯಿತು ಎಂದರೆ ತಪ್ಪಾಗಲಾರದು ಎಂದರು.

ಪ್ರೇಮಕ್ಕಾ ಅಂಗಡಿ ಮಾತನಾಡಿ  15ನೇ ವಯಸ್ಸಿಗೆ ಮದುವೆಯಾಗಿ 37ನೇ ವಯಸ್ಸಿಗೆ 11 ಮಕ್ಕಳ ತಾಯಿಯಾಗಿ 54ನೇ ವಯಸ್ಸಿಗೆ ಜೀವನ ಯಾತ್ರೆ ಮುಗಿಸಿ ಪದ್ಮಾವತಿ ಅಂಗಡಿಯವರ ಸಾಧನೆ ಅಪಾರ ಎಂದು ಬಣ್ಣಿಸಿದರು.

ನಾಗನೂರು ರುದ್ರಾಕ್ಷಿ ಮಠದ ಪೀಠಾಧಿಕಾರಿ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಕಾರ್ಯಕ್ರಮದ ನೇತೃತ್ವದಲ್ಲಿ ಉಪಸ್ಥಿತರಿದ್ದರು.

ಸನ್ಮಾನಕ್ಕೆ ಉತ್ತರಿಸಿದ ಶ್ರೀ.ಎಮ್.ಎಸ್. ಚೌಗುಲಾ ಜೀವನದುದ್ದಕ್ಕೂ ತಮ್ಮ ಬೆಂಗಾವಲಾಗಿ ನಿಂತ ಶ್ರೀಮಠದ ಎಲ್ಲಾ ಶ್ರೀಗಳಿಗೆ ಕೃತಜ್ಞತೆಗಳನ್ನು ತಿಳಿಸಿದರಲ್ಲದೆ ತಾವು ನಡೆದು ಬಂದ ದಾರಿಯನ್ನು ನೆನಪಿಸಿಕೊಂಡರು. 

ರೋಹಿಣಿ ಪಾಟೀಲ್ ಮಾತನಾಡಿ ತಮ್ಮೆಲ್ಲ  ಸಾಧನೆಗೆ ಪತಿ ಬಾಬಾಸಾಹೇಬ್ ಪಾಟೀಲರ ಸಂಪೂರ್ಣ ಬೆಂಬಲ ಮತ್ತು ಸಹಕಾರ ಅಲ್ಲದೆ ಕ್ಷೇತ್ರದ ಜನರ ಪ್ರೀತಿ, ಬೆಂಬಲ ಮತ್ತು ವಿಶ್ವಾಸವೇ ಕಾರಣ ಎಂದರು. 

ಪದ್ಮಾವತಿ ಅಂಗಡಿಯವರ ಪುತ್ರಿ ಉಜ್ವಲಾ ಹಿರೇಮಠ ಪ್ರಸ್ತಾವಿಕವಾಗಿ ಮಾತನಾಡಿದರು, ಮಹಾಪೌರ ಶ್ರೀಮತಿ. ಪ್ರೀತಿ ಕಾಮಕರ, ಉಪಮಹಪೌರ ಶ್ರೀ.ಹಣಮಂತ ಕೊಂಗಾಲಿ, ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಸ್.ಪಿ.ಹಿರೇಮಠ, ಜಾಗತಿಕ ಲಿಂಗಾಯಿತ ಮಹಾಸಭೆಯ ಬಸವರಾಜ ರೊಟ್ಟಿ, ಅಶೋಕ್ ಮಳಗಲಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

ಇದೇ ಸಂದರ್ಭದಲ್ಲಿ ಸಿದ್ರಾಮೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಹೆಚ್ಚು ಅಂಕಗಳಿಸಿ ವಿಶೇಷ ಸಾಧನೆ ಮಾಡಿದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿನಿಯರಾದ ಸಂಜನಾ ನಡುವಿನಮನಿ, ನಿಹಾರಿಕಾ ಈಟಿ, ಪ್ರತಿಕ್ಷ  ಪುಜಾರಿ, ಚೈತನ್ಯಾ ಕೇದಾರ, ಶ್ರೇಯಾ ಅಮಾತೆ, ಅಂಜನಾ ಜಾಯಿ ಮತ್ತು ರಾಧಿಕಾ ಲಮಾಣಿ ಇವರುಗಳಿಗೆ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.  ಡಾ. ಅನಿತಾ ಪಾಟೀಲ್ ಸ್ವಾಗತಿಸಿದರು, ರಾಜಶೇಖರ ಪಾಟೀಲ್ ಕಾರ್ಯಕ್ರಮ ನಿರ್ವಹಿಸಿದರು.

Related Articles

Back to top button