*ಕನಕಪುರ ದೇಗುಲ ಮಠದ ನಿ.ಪ್ರ.ಸ್ವ.ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಅವರ ಲಿಂಗೈಕ್ಯಕ್ಕೆ ಸಿಎಂ ಡಿ.ಕೆ.ಶಿವಕುಮಾರ್ ಸಂತಾಪ*

ಪ್ರಗತಿವಾಹಿನಿ ಸುದ್ದಿ: “ಕನಕಪುರ ದೇಗುಲ ಮಠದ ನಿ.ಪ್ರ.ಸ್ವ.ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿಯವರು ಲಿಂಗೈಕ್ಯರಾದ ಸುದ್ದಿ ತಿಳಿದು ತೀವ್ರ ದುಃಖಿತನಾಗಿದ್ದೇನೆ” ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ತಿಳಿಸಿದ್ದಾರೆ.
“ಸ್ಥಾವರಕ್ಕೆ ಅಳಿವುಂಟು ಜಂಗಮಕ್ಕೆ ಅಳಿವಿಲ್ಲ ಎನ್ನುವ ಮಾತನ್ನು ನಾವು ಕೇಳಿದ್ದೇವೆ. ಈ ಮಾತಿಗೆ ಅನ್ವರ್ಥದಂತೆ ಶರಣ ತತ್ವದ ಏಳಿಗೆಗೆ ದುಡಿದವರು ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಯವರು. ಪರಮ ಪೂಜ್ಯರ ಅಗಲಿಕೆ ಅತ್ಯಂತ ನೋವಿನ ಸಂಗತಿ ಎಂದು ಕಂಬನಿ ಮಿಡಿದಿದ್ದಾರೆ.
“ಜನನ, ಮರಣ ದೇಹಕ್ಕೆ ಹೊರತು ಜಂಗಮಕ್ಕಲ್ಲ. ಶರಣರ ಗುಣವನ್ನು ಮರಣದಲ್ಲಿ ಕಾಣಬೇಕು” ಎಂದು ವಚನಕಾರರು ಹೇಳಿದ್ದಾರೆ. ಪೂಜ್ಯ ಮಹಾ ಸ್ವಾಮೀಜಿಯವರು ಕನಕಪುರದ ದೇಗುಲ ಮಠದ ಮೂಲಕ ಬೆಂಗಳೂರು ದಕ್ಷಿಣ ಜಿಲ್ಲೆ ಸೇರಿದಂತೆ ಹಳೇ ಮೈಸೂರು ಭಾಗ ಹಾಗೂ ಕರ್ನಾಟಕದಾದ್ಯಂತ ಶರಣರ, ಬಸವಣ್ಣನವರ ತತ್ವ, ಆದರ್ಶಗಳನ್ನು ಪಸರಿಸಿದವರು. ಆಧ್ಯಾತ್ಮದ ಅರಿವು ಮೂಡಿಸಿದವರು ಎಂದು ಕೊಂಡಾಡಿದ್ದಾರೆ.
ಸುಮಾರು 700 ವರ್ಷಗಳ ಇತಿಹಾಸವಿರುವ ಶ್ರೀಮಠದ ಪೀಠಾಧ್ಯಕ್ಷರಾಗಿ ಸರ್ವರಿಗೂ ಸಮಪಾಲು, ಸಮಬಾಳು ತತ್ವವನ್ನು ಮಠದ ಭಕ್ತಾಧಿಗಳು ಹಾಗೂ ಎಲ್ಲಾ ಜನರಿಗೂ ಮನವರಿಕೆ ಮಾಡಿದವರು. ಮಠದಲ್ಲಿ ತ್ರಿವಿದ ದಾಸೋಹ ಆರಂಭಿಸಿ “ಅನ್ನ, ಅಕ್ಷರ, ಆಶ್ರಯದ” ಮೂಲಕ ಸಾವಿರಾರು ವಿದ್ಯಾರ್ಥಿಗಳ ಜೀವನ ರೂಪಿಸುವುದರಲ್ಲಿ ಶ್ರೀಗಳ ಪಾತ್ರ ತುಂಬಾ ದೊಡ್ಡದು. ಆಯುಷ್ಯ ತೀರಲು ಮರಣ ಎನ್ನುವುದು ನಮ್ಮಂತಹ ಸಾಮಾನ್ಯ ಮನುಷ್ಯರಿಗೆ. ಶ್ರೀಗಳು ದೇಗುಲ ಮಠದ ಮೂಲಕ ಸಮಾಜಕ್ಕೆ ಹಲವಾರು ಕೊಡುಗೆ ನೀಡಿದ್ದಾರೆ. ಆ ಮೂಲಕ ಎಲ್ಲರ ಮನದಲ್ಲಿ ಚಿರಸ್ಥಾಯಿಯಾಗಿದ್ದಾರೆ ಎಂದು ಸಿಎಂ ಅವರು ಸ್ಮರಿಸಿದ್ದಾರೆ.
ಬೆಂಗಳೂರು ದಕ್ಷಿಣ ಜಿಲ್ಲೆಯ ಬಹುದೊಡ್ಡ ಆಧ್ಯಾತ್ಮಿಕ ಕೊಂಡಿ ಕಳಚಿ ಹೋಗಿದೆ. ಕ್ಷೇತ್ರದ ಅಭಿವೃದ್ಧಿಯ ವಿಚಾರದಲ್ಲಿ ಶ್ರೀಗಳು ನೀಡುತ್ತಿದ್ದ ಅನೇಕ ಸಲಹೆಗಳು ನಮ್ಮ ಅರಿವನ್ನು ಜಾಗೃತಗೊಳಿಸಿದ್ದವು. ಇಂತಹ ಹಿರಿಯರ ಅಗಲಿಕೆ ದೊಡ್ಡ ನಿರ್ವಾತವನ್ನು ಸೃಷ್ಟಿಸಿದೆ. ಪರಮಪೂಜ್ಯರ ಅಗಲಿಕೆಯಿಂದ ಉಂಟಾದ ದುಃಖವನ್ನು ಭರಿಸುವ ಶಕ್ತಿಯನ್ನು ಮಠದ ಭಕ್ತಾದಿಗಳಿಗೆ ಆ ದೇವರು ನೀಡಲಿ. ಶ್ರೀಗಳ ಆತ್ಮಕ್ಕೆ ಶಾಂತಿ ಲಭಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಿಎಂ ಅವರು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.



