Karnataka NewsLatestPolitics

*ಕ್ವಾರಿ ದುರಂತ; ಅಧಿಕೃತ ವರದಿ ಬಂದ ಬಳಿಕ ಕ್ರಮಗಳ ಬಗ್ಗೆ ತೀರ್ಮಾನ: ಸಿಎಂ ಡಿ.ಕೆ.ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: “ಮಾಗಡಿ ರಸ್ತೆ ಬಳಿ ಎರಡು ಕ್ವಾರಿಯಲ್ಲಿ ಕುಸಿತವಾಗಿದ್ದು 7 ಮಂದಿ ಮೃತಪಟ್ಟಿರುವ ಪ್ರಕರಣದ ಬಗ್ಗೆ ಅಧಿಕೃತ ಮಾಹಿತಿ ಪಡೆದ ನಂತರ ಕೈಗೊಳ್ಳಬೇಕಾಗಿರುವ ಅಗತ್ಯ ಕ್ರಮಗಳ ಬಗ್ಗೆ ತೀರ್ಮಾನ ಮಾಡಲಾಗುವುದು” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.

ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಗುರುವಾರ ಪ್ರತಿಕ್ರಿಯೆ ನೀಡಿದರು.

“ಪೊಲೀಸ್ ಅಧಿಕಾರಿಗಳು, ಗಣಿ ಹಾಗೂ ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ದುರಂತ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸ್ಫೋಟದಿಂದಾಗಿ ಇದು ಸಂಭವಿಸಿಲ್ಲ ಎಂಬ ಮಾಹಿತಿ ಬಂದಿದ್ದು, ಈ ಕ್ವಾರಿ ಕಾನೂನುಬದ್ಧವಾಗಿ ನಡೆಸಲಾಗುತ್ತಿದೆಯೇ ಇಲ್ಲವೇ ಎಂಬ ವರದಿಯನ್ನು ಪಡೆದು ನಂತರ ಕ್ರಮ ಕೈಗೊಳ್ಳಲಾಗುವುದು. ಕ್ವಾರಿ ನಡೆಸುವಾಗ ಅದರದೇ ಆದ ನಿಯಮಗಳಿದ್ದು, ಅವುಗಳ ಪಾಲನೆಯಾಗುತ್ತಿವೆಯೇ ಇಲ್ಲವೇ ಎಂಬ ಪರಿಶೀಲನೆ ಮಾಡಲಾಗುವುದು” ಎಂದು ತಿಳಿಸಿದರು.

Home add -Advt

ಕಳೆದ ಬಾರಿ ಸ್ಫೋಟದ ವೇಳೆ ಚಿರತೆ ಸತ್ತಿತ್ತು ಈ ಹಿಂದೆ ತನಿಖೆ ಮಾಡದೇ ಪ್ರಕರಣ ಮುಚ್ಚಿಹಾಕಲಾಗಿತ್ತು ಎಂಬ ಸ್ಥಳೀಯ ಶಾಸಕರ ಆರೋಪದ ಬಗ್ಗೆ ಕೇಳಿದಾಗ, “ಶಾಸಕರು ನಮಗೆ ಮಾಹಿತಿ ನೀಡಿದ್ದು, ಅಧಿಕೃತ ವರದಿ ತರಿಸಿಕೊಂಡು ನಂತರ ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತೇನೆ” ಎಂದರು.

ಪರಿಹಾರದ ವಿಚಾರವಾಗಿ ಕೇಳಿದಾಗ, “ಮೊದಲು ಎಷ್ಟು ಜನ ಸತ್ತಿದ್ದಾರೆ ಎಂಬ ಮಾಹಿತಿಗಳು ಬರಲಿ, ಆನಂತರ ಪರಿಹಾರದ ಬಗ್ಗೆ ತೀರ್ಮಾನ ಮಾಡೋಣ. ತರಾತುರಿಯಲ್ಲಿ ಪರಿಹಾರ ಘೋಷಿಸಿದ ಮಾತ್ರಕ್ಕೆ ಸತ್ತವರು ಮರಳಿ ಬರುವುದಿಲ್ಲ. ಇದಕ್ಕೆಲ್ಲಾ ಅದರದೇ ಆದ ಪ್ರಕ್ರಿಯೆಗಳಿವೆ. ಖಂಡಿತವಾಗಿ ಸಂತ್ರಸ್ತರಿಗೆ ಪರಿಹಾರ ನೀಡಲಾಗುವುದು. ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ಎಚ್ಚರಿಕೆ ವಹಿಸುವುದು ಬಹಳ ಮುಖ್ಯ” ಎಂದು ತಿಳಿಸಿದರು.

Related Articles

Back to top button