
ಪ್ರಗತಿವಾಹಿನಿ ಸುದ್ದಿ: “ನಾನು ನಾಡಿನ ದೊರೆಯಲ್ಲ. ಯಾರೇ ಆಗಲಿ ನನ್ನನ್ನ ನಾಡಿನ ದೊರೆ ಎಂದು ಕರೆಯಬಾರದು. ನಾನು ನಿಮ್ಮೆಲ್ಲರ ಸೇವಕ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಮನವಿ ಮಾಡಿದರು.
ಬಸವಕಲ್ಯಾಣದ ಬಸವೇಶ್ವರ ದೇವಸ್ಥಾನದ ಬಳಿ ನಡೆದ ಸನ್ಮಾನ ಸಮಾರಂಭದಲ್ಲಿ ಹಾಗೂ ನೂತನ ಅನುಭವ ಮಂಟಪ ಕಾಮಗಾರಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಶಿವಕುಮಾರ್ ಅವರು ಮಾತನಾಡಿದರು.
“ಬಸವಣ್ಣನವರು ಕಾಯಕವೇ ಕೈಲಾಸ ಎಂದು ಹೇಳಿದ್ದಾರೆ. ಕಾಯಕದ ಮುಖಾಂತರ ಕೈಲಾಸ ನೋಡಬೇಕು ಎಂದು ನನ್ನ ಪ್ರವಾಸವನ್ನ ಈ ನೆಲದಿಂದ ಪ್ರಾರಂಭ ಮಾಡಿದ್ದೇನೆ. ಪರಮೇಶ್ವರ್ ಅವರು, ಸಚಿವರು ಜೊತೆಯಾಗಿದ್ದಾರೆ” ಎಂದು ಹೇಳಿದರು.
“ನೂರಾರು ವರ್ಷಗಳ ಹಿಂದೆ ಸ್ಥಾಪನೆಯಾದ ಅನುಭವ ಮಂಟಪ ಎನ್ನುವ ಸಂಸತ್ತಿಗೆ ಹೊಸ ರೂಪವನ್ನು ನೀಡಲು ನಾವು ಪ್ರಯತ್ನ ಮಾಡುತ್ತಿದ್ದೇವೆ. ಇತಿಹಾಸ ಮರೆತವನು ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ ಎಂದು ಬಾಬಾಸಾಹೇಬ್ ಅಂಬೇಡ್ಕರ್ ಹೇಳಿದ್ದಾರೆ. ಇತಿಹಾಸವನ್ನ ನಾವು ಯಾರೂ ಮರೆಯಲು ಸಾಧ್ಯವಿಲ್ಲ” ಎಂದರು.
“ಮುಖ್ಯಮಂತ್ರಿಯಾಗಿ ನೀವೆಲ್ಲಾ ನನ್ನನ್ನ ಆಯ್ಕೆ ಮಾಡಿದ್ದೀರಿ. ಇದು ನನ್ನ ಸರ್ಕಾರ ಅಲ್ಲ, ನಿಮ್ಮ ಸರ್ಕಾರ. ನನ್ನನ್ನ ಮುಖ್ಯಮಂತ್ರಿ ಅಥವಾ ನಾಡಿನ ಸೇವಕ ಎಂದು ಕರೆಯಿರಿ. ದೊರೆ ಅನ್ನೋ ಪದ ತೆಗೆದುಹಾಕಿ ಎಂದು ಮನವಿ ಮಾಡಿಕೊಳ್ಳುತ್ತೇನೆ. ಎಲ್ಲಾ ಶ್ರೀಗಳ ಪಾದಗಳಿಗೆ ನಮಸ್ಕರಿಸುತ್ತೇನೆ” ಎಂದರು.
ಬಡವರು ಗಾಬರಿಯಾಗದಿರಿ; ಬೀದಿ ಬದಿ ವ್ಯಾಪಾರಿಗಳಿಗೆ ಪಕ್ಕದ ರಸ್ತೆಗಳಲ್ಲಿ ಪರ್ಯಾಯ ವ್ಯವಸ್ಥೆ
ಬೆಂಗಳೂರಿನಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಬಗ್ಗೆ ಕೇಳಿದಾಗ, “ಬೆಂಗಳೂರು ನಗರದಲ್ಲಿ ಈಗಾಗಲೇ ನಾವು ರಸ್ತೆಗಳ ಬದಿಗಳಲ್ಲಿ ಬೀದಿ ವ್ಯಾಪಾರಿಗಳನ್ನು ತೆರವು ಮಾಡುತ್ತಿದ್ದೇವೆ. ಬಡವರು ಗಾಬರಿ ಪಡಬೇಕಾಗಿಲ್ಲ. ಎಲ್ಲರಿಗೂ ಪಕ್ಕದ ರಸ್ತೆಗಳಲ್ಲಿ ಪರ್ಯಾಯ ವ್ಯವಸ್ಥೆ ಮಾಡಿಕೊಡುತ್ತೇವೆ. ಈಗಾಗಲೇ ನೋಂದಣಿ ಮಾಡಿಸಿಕೊಂಡಿರುವ ಬೀದಿ ಬದಿ ವ್ಯಾಪಾರಿಗಳಿಗೆ ತಳ್ಳುವ ವಾಹನವನ್ನು ಕೂಡ ಒದಗಿಸಿಕೊಡುತ್ತೇವೆ. ಬಸವಣ್ಣನ ಅನುಭವ ಮಂಟಪದಲ್ಲಿ ಈ ಸಂದೇಶ ನೀಡುತ್ತಿದ್ದೇನೆ” ಎಂದರು.
“ನಮ್ಮ ಸರ್ಕಾರ ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿತ್ತು. ಬಸವಣ್ಣನವರ ಆಚಾರ ವಿಚಾರವನ್ನ ನಾವು ಹಾಗೂ ಇಡೀ ರಾಜ್ಯ ಒಪ್ಪಿದೆ. ನಾಡಿನ ಮುಖ್ಯಮಂತ್ರಿಯಾಗಿ ಪಕ್ಷ ಜವಾಬ್ದಾರಿ ಕೊಟ್ಟ ಮೇಲೆ ಪ್ರವಾಸವನ್ನ ಈ ಅನುಭವ ಮಂಟಪದಿಂದ ಪ್ರಾರಂಭ ಮಾಡಿದ್ದೇನೆ. ಎಲ್ಲಾ ಮಹಾನ್ ನಾಯಕರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದ್ದೇನೆ” ಎಂದರು.
ಅನುಭವ ಮಂಟಪ ನಿರ್ಮಾಣಕ್ಕೆ 480 ಕೋಟಿ ಬಿಡುಗಡೆ
“ಹಳೇ ಅನುಭವ ಮಂಟಪಕ್ಕೂ ಭೇಟಿ ಕೊಟ್ಟಿದ್ದೇನೆ. ನೂತನ ಅನುಭವ ಮಂಟಪದ ಕೆಲಸ ಬಹಳ ಚೆನ್ನಾಗಿ ನಡೆಯುತ್ತಿದೆ. ಅನುದಾನದ ಕೊರತೆ ಆಗದ ರೀತಿಯಲ್ಲಿ ಆದಷ್ಟು ಬೇಗ ಕಾಮಗಾರಿ ಮುಗಿಯಬೇಕು ಎಂದು ಸೂಚನೆ ನೀಡಲಾಗಿದೆ. ಸುಮಾರು 742 ಕೋಟಿ ರೂ. ಮೊತ್ತದ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ 480 ಕೋಟಿ ರೂ. ಅನುದಾನವನ್ನೂ ಬಿಡುಗಡೆ ಮಾಡಲಾಗಿದೆ” ಎಂದರು.
“ಇದು ಹಣದ ವಿಚಾರವಲ್ಲ. ಇದು ಸರ್ಕಾರದ ಕೆಲಸ. ದೇಶ, ಅಂತರರಾಷ್ಟ್ರೀಯ ಮಟ್ಟಕ್ಕೆ ಬಸವಣ್ಣನವರ ತತ್ವಗಳು ತಲುಪಬೇಕು. ಅವರ ಚಿಂತನೆಗಳು ನಾವೆಲ್ಲ ಅಳವಡಿಸಿಕೊಳ್ಳಬೇಕು. ಬಸವಣ್ಣ ಅವರ ತತ್ವಗಳನ್ನ ನಾವು ಪ್ರಚಾರ ಮಾಡಿ ಜನರಿಗೆ ನೆಮ್ಮದಿ ಶಾಂತಿ ಸಿಗುವಂತೆ ಮಾಡಬೇಕಿದೆ. ನಾನು ಅನುಭವ ಮಂಟಪದಲ್ಲಿ ಜ್ಞಾನ ಮಂದಿರ ವೀಕ್ಷಿಸಿದೆ. ಪ್ರತಿಯೊಬ್ಬರೂ ಕೂಡ ಇಲ್ಲಿಗೆ ಬಂದು ಆಧ್ಯಾತ್ಮ ಶಕ್ತಿಯನ್ನು ಅನುಭವಿಸಬಹುದು. ಇದು ನಮ್ಮ ಸಾಂಸ್ಕೃತಿಕ ಕೇಂದ್ರ, ಪ್ರವಾಸಿ ಕೇಂದ್ರ ಅದಕ್ಕೆ ಪ್ರೋತ್ಸಾಹ ನೀಡುತ್ತಿದ್ದೇವೆ” ಎಂದರು.
ಒಂದೇ ದಿನ ಬರ ಎಂದು ಘೋಷಿಸಲು ಸಾಧ್ಯವಿಲ್ಲ
ಉತ್ತರ ಕರ್ನಾಟಕದಲ್ಲಿ ಬರದ ಛಾಯೆ ಆವರಿಸಿದೆ. ಬರಗಾಲ ಎಂದು ಘೋಷಣೆ ಮಾಡುವಿರಾ ಎಂದು ಕೇಳಿದಾಗ, “ಇದರ ಬಗ್ಗೆ ನಾಳೆ (ಮಂಗಳವಾರ) ಸಭೆಯಿದೆ. ಒಂದೇ ದಿನಕ್ಕೆ ಬರ ಎಂದು ಘೋಷಣೆ ಮಾಡೋಕೆ ಆಗಲ್ಲ. ಕಣ್ಣಲ್ಲಿ ನೋಡಬೇಕು, ಕಿವಿಯಲ್ಲಿ ಕೇಳಬೇಕು, ಜನರ ಅಭಿಪ್ರಾಯ ಪಡೀಬೇಕು, ಸಮೀಕ್ಷೆ ಮಾಡಬೇಕು, ಮಾಹಿತಿ ತಿಳಿಬೇಕು” ಎಂದರು.




