Karnataka NewsLatestPolitics

*ಶಾಸಕರ ಭವನದ ಕಾರುಗಳ ದುರ್ಬಳಕೆಗೆ ತಡೆ: ಆಪ್ತ ಸಹಾಯಕರು, ಅತಿಥಿಗಳಿಗೆ ವಾಹನ ನೀಡದಂತೆ ಹೊಸ ಗೈಡ್ ಲೈನ್ ಪ್ರಕಟ*

ಪ್ರಗತಿವಾಹಿನಿ ಸುದ್ದಿ: ಶಾಸಕರ ಭವನದಲ್ಲಿ ಜನಪ್ರತಿನಿಧಿಗಳಿಗಾಗಿ ಮೀಸಲಿಟ್ಟಿರುವ ಸರ್ಕಾರಿ ವಾಹನಗಳು ದುರ್ಬಳಕೆಯಾಗುತ್ತಿರುವುದನ್ನು ತಡೆಯಲು ಕರ್ನಾಟಕ ವಿಧಾನಸಭೆ ಸಚಿವಾಲಯವು ಕಠಿಣ ಕ್ರಮ ಕೈಗೊಂಡಿದೆ. ಇನ್ಮುಂದೆ ಶಾಸಕರು ತಮ್ಮ ಆಪ್ತ ಸಹಾಯಕರು, ಅತಿಥಿಗಳು ಅಥವಾ ಪರಿಚಯಸ್ಥರಿಗೆ ಈ ವಾಹನಗಳನ್ನು ಶಿಫಾರಸು ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಅವರು ಈ ಸಂಬಂಧ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ. ಶಾಸಕರ ಭವನದ ವಾಹನಗಳನ್ನು ಕೇವಲ ‘ಗ್ರೇಟರ್ ಬೆಂಗಳೂರು ಅಥಾರಿಟಿ’ (GBA) ಅಂದರೆ ಬೆಂಗಳೂರು ನಗರದ ಗಡಿಯೊಳಗೆ ಮಾತ್ರ ಬಳಸಲು ಅವಕಾಶವಿರುತ್ತದೆ. ಕೇವಲ ವಿಮಾನ ನಿಲ್ದಾಣಕ್ಕೆ ಹೋಗಲು ಮಾತ್ರ ವಿನಾಯಿತಿ ನೀಡಲಾಗಿದೆ. ತುರ್ತು ಸಂದರ್ಭಗಳಲ್ಲಿ ವಾಹನಗಳನ್ನು ಬೆಂಗಳೂರಿನಿಂದ ಹೊರಗೆ ಕೊಂಡೊಯ್ಯಬೇಕಾದರೆ ಖುದ್ದು ವಿಧಾನಸಭಾ ಸ್ಪೀಕರ್ ಅವರ ಪೂರ್ವಾನುಮತಿ ಪಡೆಯಬೇಕು ಎಂದು ಕಟ್ಟುನಿಟ್ಟಿನ ಆದೇಶವನ್ನು ನೀಡಲಾಗಿದೆ.

ಶಾಸಕರ ಹೆಸರಿನಲ್ಲಿ ಅವರ ಬೆಂಬಲಿಗರು, ಪಕ್ಷದ ಕಾರ್ಯಕರ್ತರು ಮತ್ತು ಅತಿಥಿಗಳು ಶಿಫಾರಸು ಪತ್ರಗಳನ್ನು ನೀಡಿ ಹೊರಜಿಲ್ಲೆಗಳಿಗೆ ಪ್ರವಾಸ ಮಾಡಲು ಈ ಕಾರುಗಳನ್ನು ಬಳಸುತ್ತಿದ್ದರು ಎಂಬ ದೂರುಗಳು ಕೇಳಿಬಂದಿದ್ದವು. ಇದರಿಂದಾಗಿ ಬೆಂಗಳೂರಿಗೆ ಬರುವ ಶಾಸಕರಿಗೆ ತುರ್ತು ಸಂದರ್ಭಗಳಲ್ಲಿ ವಾಹನಗಳು ಸಿಗದೆ ತೀವ್ರ ಕೊರತೆ ಎದುರಾಗುತ್ತಿತ್ತು.

ಸದ್ಯ ವಿಧಾನಸಭಾ ಸದಸ್ಯರಿಗಾಗಿ ಸುಮಾರು 80 ವಾಹನಗಳು ಹಾಗೂ ವಿಧಾನ ಪರಿಷತ್ ಸದಸ್ಯರು ಮತ್ತು ಮಾಜಿ ಸದಸ್ಯರಿಗಾಗಿ 40 ವಾಹನಗಳು ಲಭ್ಯವಿವೆ. ವಾಹನ ಹಾಗೂ ಚಾಲಕರ ಕೊರತೆ ಇರುವುದರಿಂದ ಈ ಕಠಿಣ ನಿರ್ಧಾರ ಕೈಗೊಳ್ಳಲಾಗಿದೆ.

Home add -Advt

Related Articles

Back to top button