*ಶಿಕ್ಷಕಿ ಬೈದಿದ್ದಕ್ಕೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ*

ಪ್ರಗತಿವಾಹಿನಿ ಸುದ್ದಿ: ಶಿಕ್ಷಕಿ ಬೈದರು ಎಂಬ ಕಾರಣಕ್ಕೆ ಮನನೊಂದ 8ನೇ ತರಗತಿ ವಿದ್ಯಾರ್ಥಿನಿಯೋರ್ವಳು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಮರಸೂರು ಮಡಿವಾಳದಲ್ಲಿ ಈ ಘಟನೆ ನಡೆದಿದೆ. ಮರಸೂರು ಶಾಲೆಯ ವಿಧ್ಯಾರ್ಥಿನಿ ಮಧುಶ್ರೀ ಮೃತ ದುರ್ದೈವಿ. ಮನೆಯಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆಗೂ ಮುನ್ನ ವಿದ್ಯಾರ್ಥಿನಿ ಬರೆದ ಡೆತ್ನೋಟ್ ಕೂಡ ಲಭ್ಯವಾಗಿದೆ. ಇದರಲ್ಲಿ ಹಲವು ವಿಚಾರಗಳನ್ನು ಆಕೆ ಉಲ್ಲೇಖಿಸಿದ್ದಾಳೆ. ಶಾಲೆಯಲ್ಲಿ ನಡೆದ ಘಟನೆ ತನಗೆ ಬಹಳ ನೋವು ತಂದಿದೆ. ತನ್ನ ಮೇಲೆ ಇಲ್ಲಸಲ್ಲದ ಅಪರಾಧವನ್ನ ಹೊರಿಸಿದ್ದಾರೆ. ಈ ಅವಮಾನವನ್ನು ಸಹಿಸಿಕೊಂಡು ಬದುಕಲು ತನ್ನಿಂದ ಆಗುತ್ತಿಲ್ಲ. ಮನಸ್ಸಿಗೆ ತೀವ್ರ ನೋವಾಗಿರುವ ಕಾರಣ ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ ಎಂದು ಬರೆದಿದ್ದಾಳೆ.
ಈ ವಿಚಾರದಲ್ಲಿ ಅಮ್ಮ, ಅಕ್ಕ, ತಂಗಿ ಮತ್ತು ತಮ್ಮ ಯಾರದ್ದು ಕೂಡ ತಪ್ಪಿಲ್ಲ. ಅವರನ್ನು ಚೆನ್ನಾಗಿ ನೋಡಿಕೊಳ್ಳಿ. ಅಮ್ಮನನ್ನು ಯಾರು ಕೂಡ ಬೈಯ್ಯಬೇಡಿ. ತನಗೆ ಈ ಭೂಮಿ ಮೇಲೆ ಬದುಕಲು ಆರ್ಹತೆ ಇಲ್ಲ. ಅಮ್ಮ ಮತ್ತು ಎಲ್ಲರೂ ನನ್ನನ್ನ ಕ್ಷಮಿಸಿ ಎಂದು ವಿಧ್ಯಾರ್ಥಿನಿ ಡೆತ್ನೋಟ್ನಲ್ಲಿ ಉಲ್ಲೇಖಿಸಿದ್ದಾಳೆ. ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



