Film & EntertainmentKannada NewsKarnataka NewsLatest

*ಗಾನ ನಿಲ್ಲಿಸಿದ ಗಾನ ಕೋಗಿಲೆ: ಎಸ್.ಜಾನಕಿ ಇನ್ನಿಲ್ಲ*

ಪ್ರಗತಿವಾಹಿನಿ ಸುದ್ದಿ: ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. 20ಕ್ಕೂ ಹೆಚ್ಚು ಭಾಷೆಗಳಲ್ಲಿ 48 ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ್ದರು. ಅವರ ಸಾವು ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.

ಗಾನ ಕೋಗಿಲೆ ಎಸ್.ಜಾನಕಿ ನಿಧನಕ್ಕೆ ಗಣ್ಯಾತಿ ಗಣ್ಯರು ಕಂಬನಿ ಮಿಡಿದಿದ್ದಾರೆ. ಇಡೀ ಭಾರತೀಯ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಈ ವರ್ಷ ಜನವರಿಯಲ್ಲಿ ಜಾನಕಿ ಅವರ ಪುತ್ರ ಮುರಳಿ ಕೃಷ್ಣ ನಿಧನ ಹೊಂದಿದ್ದರು. ಆ ಬಳಿಕ ಪುತ್ರ ಶೋಕ ಅತಿಯಾಗಿ ಕಾಡಿತ್ತು. ಇದರಿಂದ ಅವರ ಆರೋಗ್ಯ ಹದಗೆಟ್ಟಿತ್ತು. ಈಗ ಚಿಕಿತ್ಸೆ ಫಲಕಾರಿಯಾಗದೆ ಅವರು ಮೈಸೂರಿನಲ್ಲಿ ಕೊನೆಯುಸಿರೆಳೆದಿದ್ದಾರೆ.

Home add -Advt

ಎಸ್.ಜಾನಕಿ ಅವರು ಮೂಲತಃ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯವರು. 1938ರ ಏಪ್ರಿಲ್ 23ರಂದು ಜನಿಸಿದರು. ಅವರು ತೆಲುಗಿನಲ್ಲಿ ಹೆಚ್ಚು ಪ್ರಸಿದ್ಧಿ ಪಡೆದು ಕನ್ನಡಿಗರ ಮನೆಮನಗಳಿಗೆ ಹತ್ತಿರವಾದದ್ದು ಕನ್ನಡ ಹಾಡುಗಳ ಮೂಲಕ. ಕನ್ನಡ ಭಾಷೆಯನ್ನು ಅತ್ಯಂತ ಸ್ಪಷ್ಟವಾಗಿ ಉಚ್ಚರಿಸುತ್ತಾ, ಇಲ್ಲಿನದ್ದೇ ಧ್ವನಿ ಎನ್ನುವಂತೆ ಅವರು ಸಾವಿರಾರು ಸೂಪರ್ ಹಿಟ್ ಹಾಡುಗಳನ್ನು ನೀಡಿದ್ದಾರೆ.

70-80ರ ದಶಕದಲ್ಲಿ ಜಾನಕಿ ಅವರು ಸಾಕಷ್ಟು ಹಾಡುಗಳನ್ನು ಹಾಡಿದರು. ಅವರಷ್ಟು ಜನಪ್ರಿಯತೆ ಪಡೆದ ಮತ್ತೊಬ್ಬರು ಕನ್ನಡದಲ್ಲಿ ಇರಲಿಲ್ಲ. ವರನಟ ಡಾ. ರಾಜ್‌ಕುಮಾರ್ ಹಾಗೂ ಎಸ್. ಜಾನಕಿ ಅವರ ಕಾಂಬಿನೇಷನ್ ಕನ್ನಡ ಚಿತ್ರರಂಗದ ಗೋಲ್ಡನ್ ಎರಾ ಎಂದು ಕರೆಯಲಾಗುತ್ತದೆ.

ಗಾನ ಗಂಧರ್ವ ಎಸ್‌ಪಿ ಬಾಲ ಸುಬ್ರಹ್ಮಣ್ಯಂ-ಜಾನಕಿ ಮ್ಯಾಜಿಕ್: ಗಾನಗಂಧರ್ವ ಎಸ್‌ಪಿ ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಧ್ವನಿಯಲ್ಲಿ ಮೂಡಿಬಂದ ರೋಮ್ಯಾಂಟಿಕ್ ಹಾಡುಗಳು ಇಂದಿಗೂ ಯುವಕರ ನೆಚ್ಚಿನ ಹಾಡುಗಳಾಗಿವೆ.

ಗಾನಕೋಗಿಲೆ ಎಸ್. ಜಾನಕಿ ಅವರಿಗೆ ಇರುವ ಅತಿ ದೊಡ್ಡ ವಿಶೇಷ ಶಕ್ತಿಯೆಂದರೆ ಅದು ಧ್ವನಿ ಬದಲಾವಣೆ . ಸಣ್ಣ ಮಗುವಿನ ಧ್ವನಿಯಿಂದ ಹಿಡಿದು ಪ್ರೌಢ ಮಹಿಳೆಯ ಧ್ವನಿಯವರೆಗೆ, ಕೇವಲ ಗಾಯನದ ಮೂಲಕವೇ ನಟನೆಯ ಭಾವನೆಗಳನ್ನು ತರುತ್ತಿದ್ದ ಅದ್ಭುತ ಗಾಯಕಿ. ಕನ್ನಡ ಚಿತ್ರರಂಗದಲ್ಲಿ ಅವರು ಹಾಡಿದ ಗೀತೆಗಳಿಗೆ ಕರ್ನಾಟಕ ಸರ್ಕಾರವು ಹಲವು ಬಾರಿ ‘ಅತ್ಯುತ್ತಮ ಹಿನ್ನೆಲೆ ಗಾಯಕಿ’ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದೆ. ಇಷ್ಟೇ ಅಲ್ಲದೆ, ಎಸ್​. ಜಾನಕಿ ಅವರಿಗೆ 4 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, 33 ವಿವಿಧ ರಾಜ್ಯ ಚಲನಚಿತ್ರ ಪ್ರಶಸ್ತಿ, ಗೌರವ ಡಾಕ್ಟರೇಟ್, ತಮಿಳುನಾಡು ರಾಜ್ಯ ಸರ್ಕಾರದಿಂದ ಕಲೈಮಾಮಣಿ ಪ್ರಶಸ್ತಿ, ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಹಾಗೂ 2013ರಲ್ಲಿ ಪದ್ಮಭೂಷಣ ಪ್ರಶಸ್ತಿ ದೊರಕಿದೆ.


Related Articles

Back to top button