*ಬೆಳಗಾವಿಯಲ್ಲಿ ಭೀಕರ ದುರಂತ: ಮನೆಯ ಛಾವಣಿ ಏಕಾಏಕಿ ಕುಸಿದು ಇಬ್ಬರ ಸಾವು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹಳೆಯ ಮನೆಯೊಂದರ ದುರಸ್ತಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಮೇಲ್ಬಾಗದ ಮಣ್ಣಿನ ಛಾವಣಿ ಏಕಾಏಕಿ ಕುಸಿದು ಬಿದ್ದ ಪರಿಣಾಮ, ಅದರ ಅಡಿಯಲ್ಲಿ ಸಿಲುಕಿದ್ದ ಇಬ್ಬರು ಕೂಲಿ ಕಾರ್ಮಿಕರು ಸಾವನ್ನಪ್ಪಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಈ ದುರ್ಘಟನೆ ನಡೆದಿದ್ದು, ಘಟನೆ ವೇಳೆ ಕಾರ್ಮಿಕರನ್ನು ಕೂಡಲೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೂ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಕಾರ್ಮಿಕರು ಆಸ್ಪತ್ರೆಯಲ್ಲಿ ದುರ್ಮರಣ ಹೊಂದಿದ್ದಾರೆ.
ಕೂಟ್ಟಲಗಿ ಗ್ರಾಮದ ನಿವಾಸಿಯಾದ ಲಕ್ಷ್ಮೀಬಾಯಿ ಬಸಪ್ಪ ನಂದಗೊಂಡ ಎಂಬ ವೃದ್ಧೆ ತಮಗೆ ಸೇರಿದ ಹಳೆಯ ಮಣ್ಣಿನ ಮನೆಯಲ್ಲಿ ಒಬ್ಬರೇ ವಾಸವಿದ್ದರು. ಮನೆ ತುಂಬಾ ಹಳೆಯದಾಗಿದ್ದರಿಂದ ಮಳೆಗಾಲದಲ್ಲಿ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಅದರ ದುರಸ್ತಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿತ್ತು.
ಎಂದಿನಂತೆ ಇಂದು ಬೆಳಿಗ್ಗೆ ಗ್ರಾಮದ ನಿವಾಸಿಗಳಾದ ಮಾದೇವ್ ಕೃಷ್ಣಪ್ಪ ಬಡಿಗೇರ್ (48) ಹಾಗೂ ಸೈಯದ್ ಕೆಂಪವಾಡಿ (32) ಎಂಬ ಕಾರ್ಮಿಕರು ಮನೆಯ ಮೇಲ್ಮುದ್ದೆಯನ್ನು ಕತ್ತರಿಸಿ ಸರಿಪಡಿಸುವ ಕೆಲಸದಲ್ಲಿ ನಿರತರಾಗಿದ್ದರು. ಆದರೆ ದುರಾದೃಷ್ಟವಶಾತ್, ಜರ್ಜರಿತವಾಗಿದ್ದ ಮನೆಯ ಮೇಲ್ಬಾಗ ಇಡೀ ಮಣ್ಣಿನ ರಾಶಿಯೊಂದಿಗೆ ಏಕಾಏಕಿ ಇವರ ಮೈಮೇಲೆಯೇ ಕುಸಿದು ಬಿದ್ದಿದೆ.
ಮನೆಯ ಮೇಲ್ಬಾಗ ಕುಸಿಯುತ್ತಿದ್ದಂತೆ ಭಾರಿ ಸದ್ದು ಕೇಳಿಬಂದಿದ್ದು, ತಕ್ಷಣವೇ ಅಲರ್ಟ್ ಆದ ಸುತ್ತಮುತ್ತಲಿನ ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಮಣ್ಣಿನ ದಿಬ್ಬದ ಅಡಿಯಲ್ಲಿ ಉಸಿರುಗಟ್ಟಿ ಸಿಲುಕಿಕೊಂಡಿದ್ದ ಇಬ್ಬರು ಕಾರ್ಮಿಕರನ್ನು ಸ್ಥಳೀಯರು ಹರಸಾಹಸ ಪಟ್ಟು ಹೊರತೆಗೆದಿದ್ದಾರೆ.
ಘಟನೆಯ ಮಾಹಿತಿ ಸಿಗುತ್ತಿದ್ದಂತೆ ಐಗಳಿ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ತಕ್ಷಣವೇ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.



