*ಎಸ್.ಡಿ.ಎಂ ಸ್ನಾತಕೋತ್ತರ ಎಂಸಿಜೆ ವಿಭಾಗದ ಮುಖ್ಯಸ್ಥರಾಗಿ ಡಾ.ಹಂಪೇಶ್ ಕೆ.ಎಸ್ ನೇಮಕ*

ಪ್ರಗತಿವಾಹಿನಿ ಸುದ್ದಿ: ಉಜಿರೆ : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾಗಿ ಸಹ ಪ್ರಾಧ್ಯಾಪಕರಾಗಿ ಡಾ.ಹಂಪೇಶ್ ಕೆ.ಎಸ್ ನಿಯುಕ್ತಗೊಂಡಿದ್ದಾರೆ. ಕಾಲೇಜಿನ ಪ್ರಾಂಶುಪಾಲ ಪ್ರೊ.ವಿಶ್ವನಾಥ ಪಿ ಅವರು ಮುಖ್ಯಸ್ಥ ಹುದ್ದೆಯ ಆದೇಶ ಪ್ರತಿಯನ್ನು ಗುರುವಾರ ಹಸ್ತಾಂತರಿಸಿದರು.
ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ೨೦೦೯ರಲ್ಲಿ ವಿಭಾಗದಲ್ಲಿ ಕಾರ್ಯಾರಂಭಿಸಿ, ಮೂರು ವರ್ಷಗಳ ಹಿಂದೆ ಸಹ ಪ್ರಾಧ್ಯಾಪಕರಾಗಿ ಬಡ್ತಿ ಹೊಂದಿದ ಇವರದ್ದು ೧೭ ವರ್ಷಗಳ ಸೇವಾನುಭವ. ಬೋಧನೆ, ಸಂಶೋಧನೆ ಮತ್ತು ಸಮೂಹ ಸಂವಹನ ಪ್ರಾಯೋಗಿಕ ತರಬೇತಿ ನಿರ್ವಹಣೆಯ ಮೂಲಕ ಎಸ್.ಡಿ.ಎಂ ಸ್ನಾತಕೋತ್ತರ ವಿಭಾಗದ ಬಲವರ್ಧನೆಯಲ್ಲಿ ಪ್ರಮುಖಪಾತ್ರವಹಿಸಿದವರು.
ನ್ಯಾಷನಲ್ ಇನ್ಸ್ಟಿಟ್ಯೂಟ್ ರ್ಯಾಂಕಿಂಗ್ ಫ್ರೇಮ್‌ವರ್ಕ್ (ನಿರ್ಫ್) ಸಮೀಕ್ಷೆ, ಪ್ರತಿಷ್ಠಿತ ‘ಇಂಡಿಯಾ ಟುಡೇ’ ನಿಯತಕಾಲಿಕೆಗಳ ವಾರ್ಷಿಕ ಸಮೀಕ್ಷೆಗಳಲ್ಲಿ ವಿಭಾಗವು ರಾಷ್ಟçಮಟ್ಟದಲ್ಲಿ ಮುಂಚೂಣಿ ರ‍್ಯಾಂಕ್ ಗಳಿಸಿಕೊಳ್ಳುವುದಕ್ಕೆ ಪೂರಕ ಪಾರದರ್ಶಕ ವಿವರಗಳನ್ನು ದಾಖಲಿಸುವಲ್ಲಿ ಇವರ ಶ್ರಮ ಮಹತ್ವದ್ದು. ನ್ಯಾಷನಲ್ ಅಸೆಸ್‌ಮೆಂಟ್ ಅಕ್ರೆಡಿಷನ್ ಕೌನ್ಸಿಲ್ (ನ್ಯಾಕ್) ಪರಿಶೀಲನೆ ಸೇರಿದಂತೆ ಆಂತರಿಕ ಮತ್ತು ಬಾಹ್ಯ ಆಡಳಿತಾತ್ಮಕ, ಶೈಕ್ಷಣಿಕ ಪರಿಶೀಲನೆಯ ನಿಯಮಾವಳಿಗಳಿಗೆ ಅನುಗುಣವಾದ ಸಮಗ್ರ ವಿವರಗಳನ್ನು ಇವರು ರಚನಾತ್ಮಕವಾಗಿ ಸಂಯೋಜಿಸಿದ ಕಾರಣಕ್ಕಾಗಿ ವಿಭಾಗಕ್ಕೆ ರಾಷ್ಟç ಮತ್ತು ರಾಜ್ಯ ಮಟ್ಟದಲ್ಲಿ ವಿಶೇಷ ಮಾನ್ಯತೆ ಲಭ್ಯವಾಗಿದೆ.
ಅಭಿವೃದ್ಧಿ ಸಂವಹನ ಮತ್ತು ನೂತನ ಮಾಧ್ಯಮ ತಂತ್ರಜ್ಞಾನಕ್ಕ ಸಂಬಂಧಿಸಿದಂತೆ ವಿಶೇಷ ಪರಿಣತಿ ಗಳಿಸಿರುವ ಇವರು ‘ರೋಲ್ ಆಫ್ ಕಮ್ಯುನಿಕೇಷನ್ ಇನ್ ರೂರಲ್ ಡೆವಲಪ್‌ಮೆಂಟ್; ಎ ಸ್ಟಡಿ ಆಫ್ ಸೆಲೆಕ್ಟ್ ಡಿಸ್ಟ್ರಿಕ್ಟ್ಸ್ ಇನ್ ಕರ್ನಾಟಕ’ ಶೀರ್ಷಿಕೆಯಡಿ ಪ್ರೊ.ಸತೀಶ್‌ಕುಮಾರ್ ಮಾರ್ಗದರ್ಶನದಲ್ಲಿ ಸಲ್ಲಿಸಿದ ಮಹಾಪ್ರಬಂಧಕ್ಕಾಗಿ ಕುವೆಂಪು ವಿಶ್ವವಿದ್ಯಾಲಯದಿಂದ ೨೦೧೪ರಲ್ಲಿ ಡಾಕ್ಟರೇಟ್ ಪದವಿ ಪಡೆದರು.
ಇವರು ವಿಭಾಗಕ್ಕೆ ಸೇರ್ಪಡೆಯಾದ ನಂತರ ಸಮಕಾಲೀನ ಮಹತ್ವವುಳ್ಳ ಸಮೂಹ ಸಂವಹನ ತಾಂತ್ರಿಕತೆ, ಹೊಸ ಕಾಲದಲ್ಲಿ ಸೃಷ್ಟಿಯಾಗಿರುವ ಅವಕಾಶಗಳು, ಸವಾಲುಗಳು, ಮಾಧ್ಯಮ ವೃತ್ತಿಪರತೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳ ರೂಪುರೇಷೆ ಸಿದ್ಧಪಡಿಸಿ ಸಂಘಟಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಪ್ರತಿವರ್ಷವೂ ಮುದ್ರಣ, ಶ್ರವ್ಯ ಮತ್ತು ದೃಶ್ಯ ಮಾಧ್ಯಮಕ್ಕೆ ಸಂಬಂಧಿಸಿದ ತಾಂತ್ರಿಕ, ಭಾಷಿಕ ಮತ್ತು ಕೌಶಲ್ಯಾಧಾರಿತ ತರಬೇತಿ ಕಾರ್ಯಾಗಾರಗಳನ್ನೂ ಸಂಯೋಜಿಸಿ ಏರ್ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇವರ ೨೪ ಸಂಶೋಧನಾ ಬರಹಗಳು ಪ್ರತಿಷ್ಠಿತ ಸಂಶೋಧನಾ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ. ‘ಸೋಷಿಯಲ್ ಮೀಡಿಯಾ; ಬೂನ್ ಆರ್ ಬೇನ್’ ಶೀರ್ಷಿಕೆಯ ಕೃತಿ ಮತ್ತು ‘ಸಿನಿ ಚಿಂತನೆ’ ಇವರ ಸಂಪಾದಿತ ಕೃತಿಗಳು. ‘ಪತ್ರಿಕೋದ್ಯಮ: ವಿವಿಧ ಆಯಾಮ’, ‘ರೋಲ್ ಆಫ್ ಕಮ್ಯುನಿಕೇಷನ್ ಇನ್ ರೂರಲ್ ಡೆವಲಪ್‌ಮೆಂಟ್’ ಮತ್ತು ‘ಸಂಪಾದನೆ’ ಇವರ ಸ್ವತಂತ್ರ ಕೃತಿಗಳು. ಹೊಸ ಕಾಲದ ತಾಂತ್ರಿಕತೆಗೆ ಅನುಗುಣವಾಗಿ ಗ್ರಾಮೀಣ ಮತ್ತು ನಗರ ವಲಯಗಳ ಅಭಿವೃದ್ಧಿ ಸಾಧ್ಯತೆಗಳನ್ನು ಶೋಧಿಸಿದ ಇವರ ಬರಹಗಳು ಎಂಟು ಸಂಪಾದಿತ ಕೃತಿಗಳಲ್ಲಿ ಪ್ರಕಟವಾಗಿವೆ.
ಇವರು ಐದು ಅಂತರರಾಷ್ಟ್ರೀಯ ಮತ್ತು ೧೨ ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಸಮೂಹ ಮಾಧ್ಯಮ ಮತ್ತು ತಾಂತ್ರಿಕತೆ ಸಂಬಂಧಿತ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ. ಅಭಿವೃದ್ಧಿಯ ಹಾದಿಯಲ್ಲಿ ಸಮೂಹ ಸಂವಹನ ತಾಂತ್ರಿಕತೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಅವಕಾಶಗಳನ್ನು ವಿಸ್ತರಿಸುವ ಬಗೆ ಹೊಳೆಸುವಲ್ಲಿ ಅವರ ಸಂಶೋಧನೆ ದಿಗ್ದರ್ಶಕವಾಗಿದೆ.


