
ಪ್ರಗತಿವಾಹಿನಿ ಸುದ್ದಿ : ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ವಾಹನಕ್ಕೆ ಪ್ಯಾಸೆಂಜರ್ ರೈಲು ಡಿಕ್ಕಿ ಹೊಡೆದ ಪರಿಣಾಮ ಮೂವರು ಶಾಲಾ ಮಕ್ಕಳು ಸೇರಿದಂತೆ ಒಟ್ಟು ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಪಶ್ಚಿಮ ಬಂಗಾಳದ ಬಹರಂಪುರ ವಲಯದಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ.
ಇಂದು ಬೆಳಿಗ್ಗೆ ಸುಮಾರು 7 ಗಂಟೆಯ ಸುಮಾರಿಗೆ ಖಾಸಗಿ ಶಾಲೆಯ ವಿದ್ಯಾರ್ಥಿಗಳು ತಮ್ಮ ಶಾಲಾ ವಾಹನದಲ್ಲಿ ಶಾಲೆಗೆ ತೆರಳುತ್ತಿದ್ದರು. ಅಜಿಮ್ಗಂಜ್-ಕಟ್ಟಾ ಮಾರ್ಗದಲ್ಲಿರುವ ಕರ್ಣಸುಬರ್ನ ನಿಲ್ದಾಣದ ಸಮೀಪದ ಗೋಬಿಂದಪುರ ರೈಲ್ವೇ ಗೇಟ್ ಬಳಿ ಈ ದುರಂತ ನಡೆದಿದೆ.
ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯರು ಧಾವಿಸಿ ಬಂದು ನಜ್ಜುಗುಜ್ಜಾಗಿದ್ದ ವಾಹನದಿಂದ ಮಕ್ಕಳನ್ನು ಹೊರತೆಗೆದಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಇತರ ಮೂವರು ವಿದ್ಯಾರ್ಥಿಗಳು ಹಾಗೂ ಶಾಲಾ ವಾಹನದ ಚಾಲಕನನ್ನು ಚಿಕಿತ್ಸೆಗಾಗಿ ಬಹರಂಪುರದಲ್ಲಿರುವ ಮುರ್ಷಿದಾಬಾದ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಗೇಟ್ಮ್ಯಾನ್ನ ಭೀಕರ ನಿರ್ಲಕ್ಷ್ಯವೇ ಈ ದುರಂತಕ್ಕೆ ನೇರ ಕಾರಣ ಎನ್ನಲಾಗಿದೆ. ಹೌರಾ ಕಡೆಗೆ ಸಾಗುವ ನಬದ್ವೀಪ್ ಎಕ್ಸ್ಪ್ರೆಸ್ ರೈಲು ಹೋದ ನಂತರವೂ ರೈಲ್ವೇ ಗೇಟನ್ನು ಮುಚ್ಚಿರಲಿಲ್ಲ. ಗೇಟ್ ತೆರೆದಿರುವುದನ್ನು ಕಂಡು ಶಾಲಾ ವಾಹನದ ಚಾಲಕ ಹಳಿ ದಾಟಲು ಮುಂದಾಗಿದ್ದಾನೆ. ಆದರೆ ಅದೇ ಸಮಯದಲ್ಲಿ ಮತ್ತೊಂದು ಹಳಿಯಲ್ಲಿ ವಿರುದ್ಧ ದಿಕ್ಕಿನಿಂದ ವೇಗವಾಗಿ ಬಂದ ನಿಮಿತಾ-ಕಟ್ಟಾ ಸ್ಥಳೀಯ ರೈಲು ಶಾಲಾ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಘಟಬೆ ಬಗ್ಗೆ ತನಿಖೆಗೆ ರೈಲ್ವೆ ಇಲಾಖೆ ಆದೇಶಿಸಿದೆ.



