CrimeKannada NewsKarnataka NewsLatest

*ನಡುರಸ್ತೆಯಲ್ಲಿ ಯುವತಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ: ಯುವಕ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಬಂಟ್ವಾಳದ ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿ ನಡೆದ ಯುವತಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ ರೋಡ್ ನಲ್ಲಿ ಗುರುವಾರ ಸಂಜೆ ನಡು ರಸ್ತೆಯಲ್ಲಿಯೇ ವ್ಯಕ್ತಿಯೋರ್ವ ಯುವತಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದ. ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ. ಕಕ್ಕೆಪದವು ನಿವಾಸಿ ಲಾವಣ್ಯ (21) ಕೊಲೆಯಾದ ಯುವತಿ.

Home add -Advt

ತನ್ನ ಪ್ರೀತಿಯನ್ನು ಒಪ್ಪಿಕೊಳ್ಳಲಿಲ್ಲ ಎಂಬ ಕಾರಣಕ್ಕೆ ಆರೋಪಿ ಈ ಕೃತ್ಯ ಎಸಗಿದ್ದು, ಮಂಗಳೂರು ಹೊರವಲಯದ ವಾಮಂಜೂರು ಪಚ್ಚನಾಡಿ ಬಳಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಚೇತನ್ ಬಂಧಿತ ಆರೋಪಿ.

ಮೃತ ಲಾವಣ್ಯ ಕಲ್ಲಡ್ಕದ ಖಾಸಗಿ ನರ್ಸಿಂಗ್ ಹೋಮ್‌ನಲ್ಲಿ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಳು. ಆಕೆ ಮತ್ತು ಆರೋಪಿ ಚೇತನ್ ಇಬ್ಬರೂ ದೂರದ ಸಂಬಂಧಿಗಳಾಗಿದ್ದು, ಯುವತಿಯನ್ನು ಆರೋಪಿ ಏಕಮುಖವಾಗಿ ಇಷ್ಟಪಡುತ್ತಿದ್ದ ಎನ್ನಲಾಗಿದೆ. ಗುರುವಾರ ಸಂಜೆ ಸುಮಾರು 6 ಗಂಟೆಗೆ ಲಾವಣ್ಯ ಬಂಟ್ವಾಳದಿಂದ ಕಕ್ಕೆಪದವುಗೆ ತೆರಳುವ ಕೆಎಸ್‌ಆರ್‌ಟಿಸಿ ಬಸ್​ನಲ್ಲಿ ಕುಳಿತಿದ್ದಳು. ಈ ವೇಳೆ ಆರೋಪಿ ಆಕೆಯ ಪಕ್ಕದಲ್ಲಿ ಬಂದು ಕುಳಿತಿದ್ದ. ಇದನ್ನು ಗಮನಿಸಿದ ಯುವತಿ ಸಂಬಂಧಿಕರೊಬ್ಬರಿಗೆ ದೂರವಾಣಿ ಕರೆ ಮಾಡಿ, “ತನ್ನ ಪಕ್ಕದಲ್ಲಿ ಓರ್ವ ಯುವಕ ಕುಳಿತಿದ್ದಾನೆ” ಎಂದು ತಿಳಿಸಿದ್ದಳು. ಬಳಿಕ ಕರೆ ಸಂಪರ್ಕ ಕಡಿತಗೊಂಡಿದೆ ಎಂದು ಹೇಳಲಾಗಿದೆ.

ಯುವತಿ ಬಸ್‌ನಿಂದ ಕೆಳಗಿಳಿದ ತಕ್ಷಣ ಚೇತನ್ ಆಕೆಯನ್ನು ಬೆನ್ನಟ್ಟಿದ್ದಾನೆ. ಆರೋಪಿ ತನ್ನ ಬ್ಯಾಗ್‌ನಿಂದ ತಲ್ವಾರ್ ಹೊರತೆಗೆದಾಗ ಲಾವಣ್ಯ ಓಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾಳೆ. ಈ ವೇಳೆ ಲಾವಣ್ಯಳ ಮೇಲೆ ಮಾರಕ ಹಲ್ಲೆ ನಡೆಸಿ, ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಬಂಟ್ವಾಳ ಉಪವಿಭಾಗದ ಪೊಲೀಸ್ ಅಧಿಕಾರಿಗಳು, ನಗರ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡ ಲಾವಣ್ಯ ಅವರನ್ನು ತಕ್ಷಣವೇ ಬಂಟ್ವಾಳ ತಾಲೂಕು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಕೃತ್ಯ ಎಸಗಿದ ನಂತರ ಆರೋಪಿ ಚೇತನ್ ತನ್ನ ಆಲ್ಟೋ ಕಾರಿನಲ್ಲಿ ಮಂಗಳೂರಿನ ಕಡೆಗೆ ಪರಾರಿಯಾಗಿದ್ದಾನೆ. ಈ ಮಧ್ಯೆ ಆತ ಲಾವಣ್ಯ ತಂದೆಗೆ ಕರೆ ಮಾಡಿ, “ನಾನು ನಿಮ್ಮ ಮಗಳನ್ನು ಕೊಂದಿದ್ದೇನೆ, ಈಗ ನಾನೂ ಸಹ ಜೀವನ ಕೊನೆಗೊಳಿಸಿಕೊಳ್ಳುತ್ತೇನೆ” ಎಂದು ಹೇಳಿದ್ದ ಎನ್ನಲಾಗಿದೆ. ಈ ಮಾಹಿತಿ ಲಭ್ಯವಾಗುತ್ತಿದ್ದಂತೆ ಅಲರ್ಟ್ ಆದ ಬಂಟ್ವಾಳ ಉಪವಿಭಾಗದ ಪೊಲೀಸರು ವಿಶೇಷ ತಂಡವನ್ನು ರಚಿಸಿ ಕಾರ್ಯಾಚರಣೆ ನಡೆಸಿ, ಮೊಬೈಲ್ ನೆಟ್‌ವರ್ಕ್ ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ವಾಮಂಜೂರು ಪಚ್ಚನಾಡಿ ಬಳಿ ಆರೋಪಿಯನ್ನು ಕಾರು ಸಮೇತ ವಶಕ್ಕೆ ಪಡೆಯಲಾಗಿದೆ.

Related Articles

Back to top button