
ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ಮತಪಟ್ಟಿ ಪರಿಷ್ಕರಣೆ (SIR) ಫಾರ್ಮ್‌ಗಳಲ್ಲಿ ನಾಗರಿಕರು ತಮ್ಮ ಹಾಗೂ ತಮ್ಮ ಪೂರ್ವಜರ 2002ರ ವಿವರಗಳನ್ನು ಭರ್ತಿ ಮಾಡುವುದು ಕಡ್ಡಾಯವಲ್ಲ ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದರುವ ಅವರು, ಡಿಜಿಟಲೀಕರಣ ಪ್ರಕ್ರಿಯೆಯನ್ನು ಸುಲಭಗೊಳಿಸಲು ಆಗಸ್ಟ್ 8ರ ಒಳಗೆ ಸಾರ್ವಜನಿಕರು ಫಾರ್ಮ್‌ಗಳನ್ನು ಸಲ್ಲಿಸಬೇಕು. 2002ರ ಮಾಹಿತಿ ಲಭ್ಯವಿಲ್ಲದಿದ್ದರೂ ಫಾರ್ಮ್ ಸಲ್ಲಿಸಬಹುದು. ಅಂತಹ ಸಂದರ್ಭಗಳಲ್ಲಿ ಮತದಾರರ ನೋಂದಣಾಧಿಕಾರಿಗಳು (ERO) ನಂತರದ ಹಂತದಲ್ಲಿ ಸೂಚಿಸಲಾದ 12 ಅಧಿಕೃತ ದಾಖಲೆಗಳಲ್ಲಿ ಒಂದನ್ನು ಕೋರಿ ನೋಟಿಸ್ ನೀಡಲಿದ್ದಾರೆ. ಈ ವಿಷಯದಲ್ಲಿ EROಗಳ ನಿರ್ಧಾರವೇ ಅಂತಿಮವಾಗಿರುತ್ತದೆ ಎಂದು ತಿಳಿಸಿದ್ದಾರೆ.
ಜುಲೈ 22 ರವರೆಗಿನ ಅಂಕಿಅಂಶಗಳ ಪ್ರಕಾರ, ರಾಜ್ಯದಲ್ಲಿ ಒಟ್ಟು 5,53,70,473 (98.89%) ಫಾರ್ಮ್‌ಗಳನ್ನು ವಿತರಿಸಲಾಗಿದ್ದು, ಇನ್ನು ಒಂದೆರಡು ದಿನಗಳಲ್ಲಿ ಶೇ 100ರಷ್ಟು ಸಾಧನೆಯಾಗಲಿದೆ. ಇದುವರೆಗೆ ಒಟ್ಟು 3,67,81,041 (66.35%) ಫಾರ್ಮ್‌ಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ಒಟ್ಟು 5,93,787 (1.07%) ಫಾರ್ಮ್‌ಗಳು ಆನ್‌ಲೈನ್ ಮೂಲಕ ಸಲ್ಲಿಕೆಯಾಗಿವೆ. ಸಂಗ್ರಹಿಸಿದ ಫಾರ್ಮ್‌ಗಳಲ್ಲಿ ಶೇ 28.14 ಸ್ವಯಂ ಮ್ಯಾಪ್ (Self-mapped) ಆಗಿದ್ದರೆ, ಶೇ 34.87 ರಷ್ಟು ಸಲ್ ಸಂತತಿಯ ಆಧಾರದಲ್ಲಿ (Progeny) ಮ್ಯಾಪ್ ಆಗಿವೆ.



