*ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಪಡೆಯಲು ಸಮಯ ಕೇಳಿದ ಕೇಂದ್ರ ಸರ್ಕಾರ*

ಪ್ರಗತಿವಾಹಿನಿ ಸುದ್ದಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ ಖಂಡಿಸಿ ಸಿಜೆಪಿ ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆ ಮುಂದುವರೆಸುರುವ ನಡುವೆಯೇ ಕೇಂದ್ರ ಸರ್ಕಾರ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದೆ.
ಕೇಂದ್ರ ಸಚಿವರು ಹಾಗೂ ಸಿಜೆಪಿ ನಾಯಕರ ಸಂಧಾನ ಸಭೆ ನಡೆದಿದ್ದು, ಸಭೆಯಲ್ಲಿ ಸಿಜೆಪಿ ಪ್ರಮುಖವಾಗಿ ಮೂರು ಬೇಡಿಕೆಗಳನ್ನು ಇಟ್ಟಿದೆ. ಇದರಲ್ಲಿ ಪ್ರಮುಖವಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಪಡೆಯಬೇಕೆಂಬ ಬೇಡಿಕೆ ಇಟ್ಟಿದ್ದು, ಇದಕ್ಕೆ ಕೇಂದ್ರ ಸಚಿವರು ನಾಳೆ(ಜುಲೈ 25)ವರೆಗೂ ಸಮಯ ಕೇಳಿದ್ದಾರೆ.
ಈ ಸಂಬಂಧ ಸಭೆ ಬಳಿಕ ಸಿಜೆಪಿ ಮಾಹಿತಿ ಹಂಚಿಕೊಂಡಿದ್ದು, ಕೇಂದ್ರ ಸರ್ಕಾರದ ಮುಂದೆ ಮೂರು ಬೇಡಿಕೆಗಳನ್ನು ಇಡಲಾಗಿತ್ತು.ಈ ಪೈಕಿ ಕೇಂದ್ರ ಸರ್ಕಾರ ಎರಡು ಬೇಡಿಕೆಗಳನ್ನು ಪರಿಗಣಿಸಿದೆ. ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವ ಬಗ್ಗೆ ನಾಳೆವರೆಗೂ ಕಾಲಾವಕಾಶ ಕೇಳಿದೆ. ನಾಳೆ ಕೇಂದ್ರ ಸರ್ಕಾರದ ಜೊತೆ 3ನೇ ಸುತ್ತಿನ ಮಾತುಕತೆ ನಡೆಯಲಿದೆ ಎಂದು ತಿಳಿಸಿದೆ.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಸಚಿವ ಧರ್ಮೆಂದ್ರ ಪ್ರಧಾನ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ಸಿಜೆಪಿ ಪ್ರತಿನಿಧಿಗಳ ಜೊತೆ ಕೇಂದ್ರ ಸಚಿವದ್ವಯರು ನಡೆಸಿದ ಸಭೆ ಅಂತ್ಯವಾಗಿದೆ. ಇಂದು (ಜುಲೈ 24) ನವದೆಹಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್ ಆಫ್ ಇಂಡಿಯಾದಲ್ಲಿ ಕೇಂದ್ರ ಸಚಿವರಾದ ನಡ್ಡಾ, ಜಿತೇಂದ್ರ ಸಿಂಗ್ ಜೊತೆ ಸುಮಾರು ಒಂದು ಗಂಟೆಗಳ ಕಾಲ ಸಭೆ ನಡೆದಿದ್ದು, ಈ ವೇಳೆ ಸಿಜೆಪಿ ವಕ್ತಾರರಾದ ಸೌರವ್, ಅಶುತೋಷ್ ಅವರು ಕೆಲ ಬೇಡಿಕೆಗಳ ಮನವಿ ಪತ್ರ ಸಲ್ಲಿಸಿದ್ದಾರೆ.



