
ಪ್ರಗತಿವಾಹಿನಿ ಸುದ್ದಿ: ಶಾಸಕರು ಹಾಗೂ ಸಂಸದರಾಗಿ ಚುನಾವಣೆಗೆ ಸ್ಪರ್ಧಿಸಲು ಪ್ರಸ್ತುತ ಇರುವ ಕನಿಷ್ಠ ವಯೋಮಿತಿಯನ್ನು 25 ರಿಂದ 21 ವರ್ಷಕ್ಕೆ ಇಳಿಸಲು ತೆಲಂಗಾಣ ಸಿಎಂ ಎ. ರೇವಂತ್ ರೆಡ್ಡಿ ನೇತೃತ್ವದ ಸರ್ಕಾರ ಮಹತ್ವದ ಯೋಜನೆ ರೂಪಿಸಿದೆ.
ಹೈದರಾಬಾದ್‌ನಲ್ಲಿ ನಡೆದ ಬೃಹತ್ ಯುವ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಬರುವ ಆಗಸ್ಟ್ ಮೊದಲ ವಾರದಲ್ಲಿ ರಾಜ್ಯ ಶಾಸನಸಭೆ ಹಾಗೂ ವಿಧಾನ ಪರಿಷತ್ತಿನ ವಿಶೇಷ ಅಧಿವೇಶನ ಕರೆಯಲಾಗುವುದು. ಈ ವಿಶೇಷ ಅಧಿವೇಶನದಲ್ಲಿ ವಯೋಮಿತಿ ಇಳಿಕೆಯ ಕುರಿತು ವಿಸ್ತ್ರತವಾಗಿ ಚರ್ಚಿಸಿ, ಮಹತ್ವದ ನಿರ್ಣಯವನ್ನು ಅಂಗೀಕರಿಸಿ ಕೇಂದ್ರ ಪ್ರಧಾನಮಂತ್ರಿಗೆ ಕಳುಹಿಸಿಕೊಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
“21 ವರ್ಷ ತುಂಬಿದ ಯುವಕ ಅಥವಾ ಯುವತಿ ಸಿವಿಲ್ ಸೇವಾ ಪರೀಕ್ಷೆ ಬರೆದು ಐಎಎಸ್ ಅಥವಾ ಐಪಿಎಸ್ ಅಧಿಕಾರಿಯಾಗಬಹುದು, ಜಿಲ್ಲೆಗಳನ್ನು ನಿರ್ವಹಿಸಬಹುದು ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದಾದರೆ, ಶಾಸಕ ಅಥವಾ ಸಂಸದನಾಗಿ ಶಾಸನಸಭೆ ಪ್ರವೇಶಿಸಲು ಏಕೆ ಸಾಧ್ಯವಿಲ್ಲ.
ದೇಶದ ಒಟ್ಟು ಜನಸಂಖ್ಯೆಯಲ್ಲಿ ‘ಜೆನ್ ಝಿ’ ಯುವಕರ ಪಾಲು ಶೇಕಡಾ 30 ರಷ್ಟಿದ್ದರೂ, ಸಂಸತ್ತಿನಲ್ಲಿ ಅವರ ಪ್ರಾತಿನಿಧ್ಯ ಶೇಕಡಾ 1 ಕ್ಕಿಂತಲೂ ಕಡಿಮೆಯಿದೆ. ಈ ಅಸಮಾನತೆಯನ್ನು ಸರಿಪಡಿಸಲು ಸಂಸತ್ತಿನಲ್ಲಿ ಈ ಪ್ರಸ್ತಾವನೆ ಮಾಡಲಾಗುತ್ತಿದೆ.
ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಿಗೆ ಸ್ಪರ್ಧಿಸಲು ಕನಿಷ್ಠ ವಯಸ್ಸು 25 ವರ್ಷ ಹಾಗೂ ರಾಜ್ಯಸಭೆ ಮತ್ತು ವಿಧಾನ ಪರಿಷತ್ತಿಗೆ 30 ವರ್ಷಗಳಾಗಿದೆ. ಆದರೆ, ಈ ವಯೋಮಿತಿಯನ್ನು 21 ವರ್ಷಕ್ಕೆ ಇಳಿಸಲು ತೆಲಂಗಾಣ ಸರ್ಕಾರ ಪ್ರಸ್ತಾವನೆ ಸಿದ್ಧಪಡಿಸಿದೆ.
ಜರ್ಮನಿ ಮತ್ತು ಗ್ರೇಟ್ ಬ್ರಿಟನ್‌ನಂತಹ ದೇಶಗಳಲ್ಲಿ 18 ವರ್ಷ ತುಂಬಿದವರು ಶಾಸನಸಭೆಗೆ ಆಯ್ಕೆಯಾಗುವುದಲ್ಲದೆ ಪ್ರಧಾನಿ ಹಾಗೂ ಅಧ್ಯಕ್ಷರಾಗಬಹುದು. ಸಿಂಗಾಪುರದಲ್ಲಿ 21 ವರ್ಷ ಮೇಲ್ಪಟ್ಟವರು ಪ್ರಧಾನಿಯಾಗಲು ಅರ್ಹತೆ ಪಡೆಯುತ್ತಾರೆ.
ಹಾಗಾಗಿ ಆಗಸ್ಟ್ ಮೊದಲ ವಾರದಲ್ಲಿ ವಿಧಾನಮಂಡಲದ ಉಭಯ ಸೌಧಗಳಲ್ಲಿ ವಿಸ್ತ್ರತ ಚರ್ಚೆ ನಡೆಸಿ ನಿರ್ಣಯ ಅಂಗೀಕರಿಸಲಾಗುವುದು. ಈ ನಿರ್ಣಯವನ್ನು ಕೇಂದ್ರ ಪ್ರಧಾನಮಂತ್ರಿಗೆ ರವಾನಿಸಲಾಗುವುದು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಮಾರ್ಗದರ್ಶನದಲ್ಲಿ ಈ ಕಾಯ್ದೆಗೆ ಸಂಸತ್ತಿನಲ್ಲಿ ಅನುಮೋದನೆ ಸಿಗುವಂತೆ ಶ್ರಮಿಸುವುದಾಗಿ ರೆವಂತ ರೆಡ್ಡಿ ಅವರು ಭರವಸೆ ನೀಡಿದರು.


