*60 ರಿಂದ 99 ವರ್ಷಗಳ ಸ್ನೇಹದ ಬಂಧವನ್ನು ಮತ್ತೆ ಗಟ್ಟಿಗೊಳಿಸಿದ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ*

ಪ್ರಗತಿವಾಹಿನಿ ಸುದ್ದಿ: ಕಾಗವಾಡ ತಾಲೂಕಿನ ಉಗಾರ ಬುದ್ರುಕ್ ಗ್ರಾಮದ ಸರಕಾರಿ ಹಿರಿಯ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಹಿರಿಯ ವಿದ್ಯಾರ್ಥಿಗಳ ಅಪೂರ್ವ ‘ಸ್ನೇಹ ಸಮ್ಮಿಲನ–2026’ ಕಾರ್ಯಕ್ರಮ ಭಾನುವಾರ ಭಾವಪೂರ್ಣ ಹಾಗೂ ಉತ್ಸಾಹಭರಿತವಾಗಿ ಜರುಗಿತು.
1927ರಿಂದ 1966ರವರೆಗೆ ಇದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಹಿರಿಯ ವಿದ್ಯಾರ್ಥಿಗಳು ದಶಕಗಳ ಬಳಿಕ ಒಂದೇ ವೇದಿಕೆಯಲ್ಲಿ ಒಂದಾಗಿ ಸೇರಿ, ತಮ್ಮ ಬಾಲ್ಯದ ಸುವರ್ಣ ಕ್ಷಣಗಳನ್ನು ನೆನಪಿಸಿಕೊಂಡರು. “ವಯಸ್ಸು ಬರೀ ಸಂಖ್ಯೆ, ಹುಮ್ಮಸ್ಸಿಗ್ಯಾವ ಅಂಕೆ?” ಎಂಬ ಘೋಷವಾಕ್ಯ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಯಿತು.
ಕಾರ್ಯಕ್ರಮದ ಅಂಗವಾಗಿ ಭಾಗವಹಿಸಿದ ಹಿರಿಯರಿಗೆ ಪರಂಪರೆಯ ಟಾವೆಲ್ ಹಾಗೂ ಗಾಂಧಿ ಟೋಪಿ ಧರಿಸಿ ಗ್ರಾಮದ ಪದ್ಮಾವತಿ ವೃತ್ತ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ವಾದ್ಯಗೋಷ್ಠಿಯೊಂದಿಗೆ ಅದ್ಧೂರಿ ಮೆರವಣಿಗೆ ನಡೆಸಲಾಯಿತು. ಈ ಮೆರವಣಿಗೆ ಗ್ರಾಮಸ್ಥರ ಗಮನ ಸೆಳೆಯಿತು.
ಹಲವಾರು ವರ್ಷಗಳ ಬಳಿಕ ಭೇಟಿಯಾದ ಸ್ನೇಹಿತರು ಪರಸ್ಪರ ಆತ್ಮೀಯವಾಗಿ ಬರಮಾಡಿಕೊಂಡು ಹಳೆಯ ನೆನಪುಗಳನ್ನು ಹಂಚಿಕೊಂಡು ಭಾವುಕರಾದ ಕ್ಷಣಗಳು ಕಂಡುಬಂದವು. ತಮ್ಮ ಬಾಲ್ಯವನ್ನು ಹಾಗೂ ಗುರುಗಳನ್ನು ಸ್ಮರಿಸಿದ ಅವರು, ಜೀವನದಲ್ಲಿ ಶಾಲೆಯ ಪಾತ್ರವನ್ನು ಕೃತಜ್ಞತೆಯಿಂದ ನೆನಪಿಸಿಕೊಂಡರು. ಕೆಲವರು ತಮ್ಮ ಸಾಧನೆಗೆ ಈ ಶಾಲೆಯೇ ಅಡಿಪಾಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಎಲ್ಲರಿಗೂ ಟಾವೆಲ್ ಮತ್ತು ಗಾಂಧಿ ಟೊಪ್ಪಿ ನೀಡಿ ಸನ್ಮಾನಿಸಲಾಯಿತು. ಇಪ್ಪತ್ತು ವರ್ಷಗಳ ಹಿಂದಿನ ಜೀವನ ಪದ್ಧತಿಯನ್ನು ತೋರಿಸುವ ವಿಡಿಯೋ ಪ್ರದರ್ಶನ ಮಾಡಲಾಗಿದ್ದು, ಭಾಗವಹಿಸಿದವರು ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿದರು. ನಂತರ ಎಲ್ಲರಿಗೂ ಸಿಹಿ ಸ್ನೇಹಭೋಜನ ವ್ಯವಸ್ಥೆ ಮಾಡಲಾಗಿತ್ತು.
ಕಾರ್ಯಕ್ರಮದ ಕೊನೆಯಲ್ಲಿ ಪ್ರತಿಯೊಬ್ಬರಿಗೂ ಸಸಿ ವಿತರಣೆ ಮಾಡಿ ಪರಿಸರ ಸಂರಕ್ಷಣೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಗ್ರಾಮದ ಗಣ್ಯರು ಹಾಗೂ ಯುವ ಪೀಳಿಗೆಯವರು ಸಹ ಈ ಸಮ್ಮಿಲನಕ್ಕೆ ಸಾಕ್ಷಿಯಾಗಿ ಹಿರಿಯರ ಸ್ನೇಹಭಾವಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಒಗ್ಗಟ್ಟು ಮತ್ತು ಮೌಲ್ಯಗಳನ್ನು ಉಳಿಸಲು ಸಹಕಾರಿಯಾಗುತ್ತವೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಒಟ್ಟಿನಲ್ಲಿ, ವಯಸ್ಸು ಎಷ್ಟೇ ಆಗಲಿ ಸ್ನೇಹದ ನೆನಪುಗಳು ಎಂದಿಗೂ ಮಂಕಾಗುವುದಿಲ್ಲ ಎಂಬುದನ್ನು ಉಗಾರ ಬುದ್ರುಕ್ ಯುವಕರ ಬಳಗ ಮತ್ತೊಮ್ಮೆ ಸಾಬೀತುಪಡಿಸಿದೆ. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಮೋಹನ್ ಶಹಾ ಸೇರಿದಂತೆ ನಿವೃತ್ತ ನೌಕರರು, ವ್ಯಾಪಾರಸ್ಥರು ಹಾಗೂ ರೈತರು ಭಾಗವಹಿಸಿ ಸಂತೋಷ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮವನ್ನು ಗೆಳೆಯರ ಬಳಗದ ಸದಸ್ಯರಾದ ಶೀತಲ್ ಕುಂಬಾರ, ಸಚಿನ್ ಕಾಂಬಳೆ, ಪುರಂದರ ತಳವಾರ, ಅಶೋಕ ಕೋರೆ, ಶೇಖರ್ ಕಾಟಗಾರ, ಭಗವಂತ ತಳವಾರ, ಬುಡ್ಡು ಜಮಖಾನೆ, ಬಂಡು ತಮದಡ್ಡಿ, ದಿಲೀಪ್ ಕುಸನಾಳೆ, ಪ್ರಕಾಶ್ ಹನಗಂಡಿ ಸೇರಿದಂತೆ ಇತರರ ಸಹಕಾರದಿಂದ ಆಯೋಜಿಸಿ ಯಶಸ್ವಿಗೊಳಿಸಲಾಯಿತು. ಕಾರ್ಯಕ್ರಮವನ್ನು ಈಶ್ವರ ಪಟಗಾರ ನಿರೂಪಿಸಿ ವಂದಿಸಿದರು.



