Belagavi NewsBelgaum NewsKannada NewsKarnataka NewsNational

*ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಆಯೋಜನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್‌ ಇಲಾಖೆ, ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಳಗಾವಿ ನೇತೃತ್ವದಲ್ಲಿ  ಮಹೇಶ್ವರಿ ಅಂಧ ಮಕ್ಕಳ ಶಾಲೆಯಲ್ಲಿ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿದ  ನಗರ ಪೊಲೀಸ್ ಆಯುಕ್ತ ಭೋರಸೆ ಭೂಷಣ ಗುಲಾಬರಾವ್ ಅವರು, ಪ್ರಸ್ತುತ ದಿನಗಳಲ್ಲಿ ಮಾನವ ಕಳ್ಳ ಸಾಗಾಣಿಕೆ ಹೆಚ್ಚುತ್ತಿದೆ. ಜೊತೆಗೆ ಸೈಬರ್‌ ಅಪರಾಧಗಳು, ಮಹಿಳೆ ಮೇಲೆ ವಿವಿಧ ತೆರನಾದ ಹಲ್ಲೆಗಳು, ಮಕ್ಕಳ ಮೇಲಿನ ದೌರ್ಜನ್ಯಗಳು ಹೀಗೆ ಹಲವಾರು ಪ್ರಕರಣಗಳು ದಾಖಲಾಗುತ್ತಿವೆ. ಈ ಸಮಸ್ಯೆಗಳಿಗೆ ಸ್ಪಂದಿಸುವ ಸಂಬಂಧ ಸರ್ಕಾರ ಮತ್ತು ಇಲಾಖೆ ವಿವಿಧ ತೆರನಾದ ತಂತ್ರಗಳ ಮೂಲಕ ನಿಯಂತ್ರಿಸಲು ಕ್ರಮವಹಿಸುತ್ತಿದೆ. ಅದರಲ್ಲಿ ಅಕ್ಕ ಪಡೆ, 112 ಸಹಾಯವಾಣಿ, ಮಹಿಳೆ ಮತ್ತು ಮಕ್ಕಳ ಸಹಾಯವಾಣಿ ಹೀಗೆ ಹಲವಾರು ಸಹಾಯವಾಣಿಗಳ ಮೂಲಕ ತುರ್ತು ಸೇವೆಗಳನ್ನು ಇಲಾಖೆಯು ನೀಡುತ್ತಿದೆ. ಸಾರ್ವಜನಿಕರು ಪೊಲೀಸ್‌ ಠಾಣೆಗೆ ಬರುವ ಬದಲು ಪೊಲೀಸರೇ ಸಾರ್ವಜನಿಕರ ಬಳಿ ಹೋಗಿ ಸೇವೆಯನ್ನು ನೀಡುತ್ತಿದ್ದಾರೆ.

ಕಾರ್ಯಕ್ರಮದ ಅತಿಥಿ ಭಾಷಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃ‍ದ್ಧಿ ಇಲಾಖೆಯ ಉಪನಿರ್ದೇಶಕರಾದ ಎಂ ಎನ್‌ ಚೇತನ್‌ ಕುಮಾರ್‌, ಇಲಾಖೆಯಲ್ಲಿ ಕಾವಲು ಸಮಿತಿಗಳ ಮೂಲಕ ಮಹಿಳೆ ಮತ್ತು ಮಕ್ಕಳ ಚಲನ ವಲನಗಳ ಮೇಲೆ ನಿಗಾ ಇಟ್ಟು, ಮಹಿಳೆ ಮತ್ತು ಮಕ್ಕಳು ಬಹಳ ದಿನಗಳ ನಂತರ ಆ ಪ್ರದೇಶಗಳಲ್ಲಿ ಕಂಡು ಬರದಿದ್ದರೆ ಪೊಲೀಸರಿಗೆ ಮಾಹಿತಿ ನೀಡುವುದು. ಗ್ರಾಮ ಮಟ್ಟಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯು ಕುಟುಂಬ ಸಮೀಕ್ಷೆ ಮಾಡುವ ಸಂದರ್ಭದಲ್ಲಿ, ಯಾವುದಾದರೂ ಕುಟುಂಬ ಬೇರೆ ಪ್ರದೇಶಕ್ಕೆ ಸ್ಥಳಾಂತರವಾಗಿದ್ದರೆ, ಯಾವ ಸ್ಥಳಕ್ಕೆ ಸ್ಥಳಾಂತರವಾಗಿದೆ ಎಂಬುವುದನ್ನು ಆ ಪ್ರದೇಶದ ಅಂಗನವಾಡಿ ಕಾರ್ಯಕರ್ತೆಗೆ ಮಾಹಿತಿ ನೀಡಲು ಇಲಾಖೆ ಕ್ರಮಕೈಗೊಳ್ಳುತ್ತಿದೆ. ಈ ಕುರಿತು ತಳಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ವಿವಿಧ ತರಬೇತಿ, ಕಾರ್ಯಾಗಾರ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಇಲಾಖೆಯು ಕ್ರಮವಹಿಸುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ   ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಎನ್‌ ಶಿವಕುಮಾರ, ಮಾನವ ಕಳ್ಳ ಸಾಗಾಣಿಕೆಯು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವುದು ವಿಷಾದನೀಯ ಸಂಗತಿಯಾಗಿದೆ. ವಿವಿಧ ತೆರನಾದ ಕಳ್ಳ ಸಾಗಾಣಿಕೆಗಳು ಕಂಡು ಬರುತ್ತವೆ. ಅವುಗಳಲ್ಲಿ ಮಾನವ ಕಳ್ಳ ಸಾಗಾಣಿಕೆಯು ಒಂದಾಗಿದೆ.  ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಮಕ್ಕಳು ಕಾಣೆಯಾದ ಪ್ರಕರಣಗಳು ಬಂದರೆ, ಅವರ ಪೂರ್ಣವಾದ ಮಾಹಿತಿಯನ್ನು ಇಲಾಖೆಗಳು ಪರಿಶೀಲಿಸಿ, ವಿಮರ್ಶಿಸಿದಾಗ ನೈಜ ಸಮಸ್ಯೆ ತಿಳಿದು ಬರುತ್ತದೆ. ಆದುದರಿಂದ ಮಹಿಳೆ ಮತ್ತು ಮಕ್ಕಳ ಯಾವುದೇ ಪ್ರಕರಣಗಳು ದಾಖಲಾದರೆ ಆ ಪ್ರಕರಣಗಳನ್ನು ತುಂಬಾ ಸೂಕ್ಚ್ಮವಾಗಿ ಪರಿಶೀಲನೆ ಮಾಡಬೇಕಾಗುತ್ತದೆ ಎಂದು ತಿಳಿಸಿದರು.

Home add -Advt

ಕಾರ್ಯಕ್ರಮದಲ್ಲಿ ಕಾರ್ಮಿಕ ಇಲಾಖೆಯ ಉಪನಿರ್ದೇಶಕ ಮಲ್ಲೀಕಾರ್ಜುನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಅಣ್ಣಪ್ಪ ಹೆಗಡೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಮಿತ್ರಾ ಡಿ ಬಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅನೀಲ ಕಾಂಬಳೆ ಹಾಜರಿದ್ದರು. ಶಿಲ್ಪಾ ದೇಸಾಯಿ ಕಾರ್ಯಕ್ರಮವನ್ನು ನಿರೂಪಿಸಿದರು.

Related Articles

Back to top button