Belagavi NewsBelgaum NewsHealthKannada NewsKarnataka News

*ಡೆಂಗ್ಯೂ ವಿರೋಧಿ ಮಾಸಾಚರಣೆ: ಬೆಳಗಾವಿ ನಗರದಲ್ಲಿ ಲಾರ್ವಾ ಸಮೀಕ್ಷೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಳೆಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ಸೊಳ್ಳೆಗಳಿಂದ ಹರಡುವ ರೋಗಗಳು ಹೆಚ್ಚಾಗುವ ಸಾಧ್ಯತೆ ಇದ್ದು, ಮನೆ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡರೆ ಡೆಂಗ್ಯೂ ಅಂತಹ ರೋಗಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು ಎಂದು ಬೆಳಗಾವಿ ಮಹಾನಗರ ಪಾಲಿಕೆಯ ಮಹಾಪೌರರಾದ ಪ್ರೀತಿ ವಿ ಕಾಮಕರ್ ಅವರು ತಿಳಿಸಿದರು.

ಬೆಳಗಾವಿ ತಾಲೂಕಾ ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಳಗಾವಿ, ಮಹಾನಗರ ಪಾಲಿಕೆ ಹಾಗೂ ಕೆಎಲ್‌ಇ ಸಂಸ್ಥೆಯ ಯಳ್ಳೂರು ನಸಿರ್ಂಗ್ ಕಾಲೇಜಿನ ವಿದ್ಯಾರ್ಥಿಗಳ ಸಹಯೋಗದಲ್ಲಿ ಡೆಂಗ್ಯೂ ವಿರೋಧಿ ಮಾಸಾಚರಣೆ ಅಂಗವಾಗಿ ಶುಕ್ರವಾರ(ಜುಲೈ 31) ಲಾರ್ವಾ ಸಮೀಕ್ಷೆ ಹಾಗೂ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಡೆಂಗ್ಯೂ ರೋಗವು ಈಡಿಸ್ ಸೊಳ್ಳೆ ಕಚ್ಚುವುದರಿಂದ ಹರಡುವುದರಿಂದ ಸೊಳ್ಳೆಗಳ ಉತ್ಪತ್ತಿ ತಾಣಗಳನ್ನು ನಾಶಪಡಿಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಸಾರ್ವಜನಿಕರು ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಿ ಡೆಂಗ್ಯೂ ನಿಯಂತ್ರಣ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಕರೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಜಗದೀಶ್ ಜಿಂಗಿ, ಜಿಲ್ಲೆಯಲ್ಲಿ ಪ್ರಸ್ತುತ ಒಂದು ಮಲೇರಿಯಾ, ಆರು ಡೆಂಗ್ಯೂ ಹಾಗೂ ನಾಲ್ಕು ಚಿಕೂನ್ಗುನ್ಯಾ ಪ್ರಕರಣಗಳು ವರದಿಯಾಗಿವೆ ಎಂದು ತಿಳಿಸಿದರು. ರೋಗ ನಿಯಂತ್ರಣಕ್ಕಾಗಿ ತಾಲೂಕು ಆರೋಗ್ಯ ಇಲಾಖೆ ಸಿಬ್ಬಂದಿ, ಕ್ಷೇತ್ರ ಮಟ್ಟದ ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ನಗರದಲ್ಲಿ ನಿರಂತರವಾಗಿ ಲಾರ್ವಾ ಸಮೀಕ್ಷೆ, ಜ್ವರ ಸಮೀಕ್ಷೆ ಮತ್ತು ಮನೆ-ಮನೆ ಭೇಟಿ ಮೂಲಕ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

Home add -Advt

ಸದರಿ ಕಾರ್ಯಕ್ರಮದ ಅಂಗವಾಗಿ ಕೆಎಲ್‌ಇ ಯಳ್ಳೂರು ನಸಿರ್ಂಗ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳಿಂದ ಜಾಗೃತಿ ಜಾಥಾ ನಡೆಸಿ, ಸಾರ್ವಜನಿಕರಿಗೆ ಡೆಂಗ್ಯೂ ತಡೆಗಟ್ಟುವ ಕ್ರಮಗಳು ಹಾಗೂ ಲಾರ್ವಾ ನಿರ್ಮೂಲನೆಯ ಮಹತ್ವದ ಕುರಿತು ಅರಿವು ಮೂಡಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ. ಐ.ಪಿ. ಗಡಾದ್, ತಾಲೂಕು ಆರೋಗ್ಯಾಧಿಕಾರಿಗಳಾದ ಡಾ. ಸಂಜೀವ್ ನಾಂದ್ರೆ, ಕ್ಷಯರೋಗ ನಿಯಂತ್ರಣ ಅಧಿಕಾರಿಗಳಾದ ಡಾ. ಚಾಂದನಿ ದೆವಡಿ, ಬೆಳಗಾವಿ ವಲಯ ಕೀಟಶಾಸ್ತ್ರಜ್ಞರಾದ ಗಣಪತಿ ವಾರ್ಕಿ, ಜಿಲ್ಲಾ ಆರೋಗ್ಯ ಮತ್ತು ಕು.ಕ ಅಧಿಕಾರಿಗಳ ಕಚೇರಿಯ ಐ.ಇ.ಸಿ ವಿಭಾಗದ ಅಧಿಕಾರಿ ಪ್ರಕಾಶ ಜಿ. ಮಾನೆ, ಆರೋಗ್ಯ ಇಲಾಖೆ ಮೇಲ್ವಿಚಾರಕರು, ಕೆಎಲ್‌ಇ ನಸಿರ್ಂಗ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ಕಾರ್ಯಕ್ರಮದ ನಂತರ ತಾಲೂಕು ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿ ಆರೋಗ್ಯ ಇಲಾಖೆಯ ಕ್ಷೇತ್ರ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಗೂ ಕೆಎಲ್‌ಇ ನಸಿರ್ಂಗ್ ಕಾಲೇಜಿನ ವಿದ್ಯಾರ್ಥಿಗಳು ಬೆಳಗಾವಿ ನಗರದ ವಿವಿಧ ಪ್ರದೇಶಗಳಲ್ಲಿ ಮನೆ-ಮನೆಗೆ ಭೇಟಿ ನೀಡಿ ಲಾರ್ವಾ ಸಮೀಕ್ಷೆ ನಡೆಸಿ, ಡೆಂಗ್ಯೂ ನಿಯಂತ್ರಣ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು.

Related Articles

Back to top button