Karnataka NewsLatestNationalPolitics

*ಸೋನಿಯಾ ಗಾಂಧಿಯನ್ನು ‘ಜರ್ಸಿ ಹಸು’ ಎಂದು ನಿಂದಿಸಿದಾಗ, ಚೌಧರಿ ನಗು ‘ಶೂರ್ಪನಖಿ’ಗೆ ಹೋಲಿಸಿದಾಗ, ಸುನಂದಾರನ್ನು’50 ಕೋಟಿ ಗರ್ಲ್‌ಫ್ರೆಂಡ್’ ಎಂದು ಹೀಯಾಳಿಸಿದಾಗ ತಾಯಿ, ಸಹೋದರಿ, ಮಹಿಳಾ ಮರ್ಯಾದೆ ಪ್ರವಚನ ಯಾವ ಗುಹೆಯಲ್ಲಿ ತಪಸ್ಸು ಮಾಡುತ್ತಿತ್ತು? *

ಪ್ರಧಾನಿ ಮೋದಿಗೆ ಬಿ.ಕೆ.ಹರಿಪ್ರಸಾದ್ ಪ್ರಶ್ನೆ

ಪ್ರಗತಿವಾಹಿನಿ ಸುದ್ದಿ: ದೆಹಲಿಯ ಜಂತರ್-ಮಂತರ್ ನಲ್ಲಿ ನಡೆದ ಪ್ರತಿಭಟನೆ ವೇಳೆ ನೊಯ್ಡಾದ ಯುವತಿಯೊಬ್ಬಳು ಪ್ರಧಾನಿ ಮೋದಿ ವಿರುದ್ಧ ನಿಂದನಾತ್ಮಕ ಹೇಳಿಕೆ ನೀಡಿರುವುದನ್ನು ತಾನು ಕ್ಷಮಿಸಿದ್ದೇನೆ. ಯುವಕರು ದಾರಿ ತಪ್ಪಿದ್ದಾರೆ ಅವರನ್ನು ಸರಿದಾರಿಯಲ್ಲಿ ನಡೆಸಿ, ಮಾರ್ಗದರ್ಶನ ಮಾಡುವುದು ನಮ್ಮ ಕರ್ತವ್ಯ ಎಂದು ಮಧ್ಯರಾತ್ರಿ ವಿಡಿಯೋ ಸಂದೇಶ ರಾವಾನಿಸಿರುವ ಪ್ರಧಾನಿ ಮೋದಿ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿ ಪ್ರಸಾದ್ ತೀಕ್ಷ್ಣವಾಗಿ ಟೀಕಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿರುವ ಬಿ.ಕೆ.ಹರಿಪ್ರಸಾದ್, ”ತಾನು ಮಾಡಿದರೆ ರಾಜತಂತ್ರ, ಬೇರೆಯವರು ಮಾಡಿದರೆ ಅಪರಾಧ” ಎನ್ನುವ ಹೊಸ ರಾಜಕೀಯ ಗಾದೆಗೆ ಪ್ರಧಾನಿ ನರೇಂದ್ರ ಮೋದಿಯೇ ಜೀವಂತ ಉದಾಹರಣೆ! ಎಂದು ಕಿಡಿಕಾರಿದ್ದಾರೆ.

ನಿನ್ನೆ ರಾತ್ರಿ ಸಾಮಾಜಿಕ ಜಾಲತಾಣದಲ್ಲಿ ರೀಲೊಂದನ್ನು ಬಿಡುಗಡೆ ಮಾಡಿ, “ನನ್ನನ್ನೂ, ನನ್ನ ತಾಯಿಯನ್ನೂ ನಿಂದಿಸಿದ ದಾರಿ ತಪ್ಪಿದ ಮಕ್ಕಳನ್ನು ಕ್ಷಮಿಸಿದ್ದೇನೆ” ಎಂದು ಭಾವುಕ ಅಭಿನಯ ಮಾಡಿದ್ದೀರಲ್ಲ ಪ್ರಧಾನಿಗಳೇ, ದಶಕಗಳ ಕಾಲ ಮಹಿಳೆಯರನ್ನು ತುಚ್ಛವಾಗಿ ಜರಿದು, ವಿರೋಧಿಗಳ ಕುಟುಂಬಗಳ ಮೇಲಿನ ನಿಂದನೆಗೆ ಮೌನಸಮ್ಮತಿ ನೀಡಿದವರು ಇಂದು ಮಾತೃಗೌರವದ ಪ್ರವಚನ ಮಾಡುತ್ತಿರುವುದು ನೋಡಿದರೆ “ಬೆಂಕಿ ಹಚ್ಚಿದವನೇ ಬಕೆಟ್ ಹಿಡಿದು ಅಗ್ನಿಶಾಮಕನಂತೆ ಪೋಸ್ ಕೊಟ್ಟ ಹಾಗಿದೆ!” ಎಂದು ಲೇವಡಿ ಮಾಡಿದ್ದಾರೆ.

Home add -Advt

ಅಜ್ಜಿ ಇಂದಿರಾ ಗಾಂಧಿಯವರ ದೇಹವನ್ನು ಗುಂಡುಗಳಿಂದ ಛಿದ್ರಗೊಳಿಸಿದ ಹತ್ಯೆಯ ನೋವು; ತಂದೆಯ ದೇಹವನ್ನೇ ಛಿದ್ರಗೊಳಿಸಿದ ಭೀಕರ ನೋವನ್ನು ಅನುಭವಿಸಿದ ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರು, “ನನಗೆ ಯಾರ ಮೇಲೂ ಕೋಪ ಅಥವಾ ದ್ವೇಷವಿಲ್ಲ; ನಾನು ಕ್ಷಮಿಸಿದ್ದೇನೆ” ಎಂದು ಬಹಿರಂಗವಾಗಿ ಹೇಳಿದ್ದಾರೆ. ತಂದೆಯ ಹಂತಕಿಯನ್ನೇ ಜೈಲಿನಲ್ಲೇ ಭೇಟಿಯಾದ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಪ್ರತೀಕಾರಕ್ಕಿಂತ ಮಾನವೀಯತೆಯನ್ನು ಆರಿಸಿಕೊಂಡರು. ಅದು ಕ್ಯಾಮೆರಾ ಮುಂದೆ ನಿರ್ಮಿಸಿದ ರೀಲ್ ಅಲ್ಲ; ತಮ್ಮ ಬದುಕನ್ನೇ ಛಿದ್ರಗೊಳಿಸಿದ ದುರಂತದ ನಡುವೆಯೂ ದ್ವೇಷವನ್ನು ನಿರಾಕರಿಸಿದ ಸಂಸ್ಕಾರ ಎಂದು ತಿಳಿಸಿದ್ದಾರೆ.

ಸೋನಿಯಾ ಗಾಂಧಿಯವರನ್ನು “ಜರ್ಸಿ ಹಸು” ಎಂದು ನಿಂದಿಸಿದಾಗ ನಿಮ್ಮ ಆತ್ಮಸಾಕ್ಷಿ ಎಲ್ಲಿತ್ತು? ತುಂಬಿದ ಸಂಸತ್ತಿನಲ್ಲಿ ಸಂಸದೆ ರೇಣುಕಾ ಚೌಧರಿಯವರ ನಗುವನ್ನು “ಶೂರ್ಪನಖಿ” ಪಾತ್ರದ ನಗುವಿಗೆ ಹೋಲಿಸಿ ಇಡೀ ಸದನವನ್ನು ನಗಿಸಿದಾಗ ಮಹಿಳೆಯ ಗೌರವ ನೆನಪಾಗಲಿಲ್ಲವೇ? ಸುನಂದಾ ಪುಷ್ಕರ್ ಅವರನ್ನು “₹50 ಕೋಟಿಯ ಗರ್ಲ್‌ಫ್ರೆಂಡ್” ಎಂದು ಸಾರ್ವಜನಿಕ ಸಭೆಯಲ್ಲಿ ಹೀಯಾಳಿಸಿದಾಗ ತಾಯಿ, ಸಹೋದರಿ, ಮಹಿಳಾ ಮರ್ಯಾದೆಯ ಪ್ರವಚನಗಳು ಯಾವ ಗುಹೆಯಲ್ಲಿ ತಪಸ್ಸು ಮಾಡುತ್ತಿದ್ದವು ಪ್ರಧಾನಿಗಳೇ? ಎಂದು ಪ್ರಶ್ನಿಸಿದ್ದಾರೆ.

2014ರ ನಂತರ ನಿಮ್ಮ ಹೆಸರಿನಲ್ಲಿ ಬೆಳೆದ ಸಾಮಾಜಿಕ ಜಾಲತಾಣದ ಅಂಧಭಕ್ತ ಪಡೆ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ವಿರೋಧ ಪಕ್ಷದ ನಾಯಕರ ತಾಯಿ, ಪತ್ನಿ ಮತ್ತು ಮಕ್ಕಳ ಚಿತ್ರಗಳನ್ನು ಮಾರ್ಫ್ ಮಾಡಿ, ಅತ್ಯಂತ ಕೀಳು ಭಾಷೆಯಲ್ಲಿ ನಿಂದಿಸುತ್ತಲೇ ಬಂದಿದೆ. ಆ ವಿಕೃತಿಗಳಿಗೆ ಎಂದಾದರೂ ಒಂದು ಕಿವಿಮಾತು ಹೇಳಿದ್ದೀರಾ? “ಮಹಿಳೆಯರನ್ನು ನಿಂದಿಸಬೇಡಿ” ಎಂದು ನಿಮ್ಮ ಭಕ್ತರಿಗೆ ಒಂದೇ ಒಂದು ರೀಲ್ ಮಾಡಿದ್ದೀರಾ? ಎಂದು ಟುಕಿದ್ದಾರೆ.

ನೋಟು ಅಮಾನ್ಯೀಕರಣದ ಸಂಕಷ್ಟದಲ್ಲಿ ಬ್ಯಾಂಕಿನ ಸಾಲಿನಲ್ಲಿ ನಿಂತಿದ್ದ ನಿಮ್ಮ ವಯೋವೃದ್ಧ ತಾಯಿಯ ಚಿತ್ರವೂ ರಾಜಕೀಯ ಪ್ರಚಾರದ ಸರಕಾಯಿತು. ಈಗ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಲಾಗದೆ, ಅವರ ಮೇಲಿನ ಲಾಠಿ, ಬಂಧನ, ಪ್ರಕರಣ ಮತ್ತು ಶಿಕ್ಷಣ ವ್ಯವಸ್ಥೆಯ ವೈಫಲ್ಯದಿಂದ ಗಮನ ಬೇರೆಡೆ ಸೆಳೆಯಲು ಮತ್ತೆ ತಾಯಿಯ ಹೆಸರನ್ನೇ ಭಾವನಾತ್ಮಕ ಗುರಾಣಿಯನ್ನಾಗಿ ಬಳಸುತ್ತಿದ್ದೀರಿ. ತಾಯಿಯ ಮೇಲಿನ ಪ್ರೀತಿ ಪವಿತ್ರ; ಆದರೆ ತಾಯಿಯ ಹೆಸರನ್ನು ಪ್ರತಿಯೊಂದು ರಾಜಕೀಯ ಸಂಕಷ್ಟದಲ್ಲೂ ಮತಗಳ ಮೈಲೇಜ್‌ಗಾಗಿ ಬಳಸುವುದು ಪ್ರೀತಿಯಲ್ಲ ಅದು ಅತ್ಯಂತ ನಿರ್ದಯವಾದ ರಾಜಕೀಯ ವ್ಯಾಪಾರ ಎಂದು ಕಟು ಶಬ್ಧಗಳಿಂದ ಟೀಕಿಸಿದ್ದಾರೆ.

ವಿದ್ಯಾರ್ಥಿಗಳ ಭವಿಷ್ಯವನ್ನೇ ನಾಶ ಮಾಡಿರುವ ಬಿಜೆಪಿ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಕ್ಷಮೆಯ ಅಗತ್ಯವೂ ಇಲ್ಲ, ಅನಿವಾರ್ಯತೆಯೂ ಇಲ್ಲ. ನಿಮ್ಮ ನಾಟಕೀಯವನ್ನು ಯುವಜನತೆ ತಿರಸ್ಕಾರ ಮಾಡಿಯಾಗಿದೆ. ಕೂಡಲೇ ವಿದ್ಯಾರ್ಥಿಗಳ ಮೇಲಿನ ಪ್ರಕರಣಗಳನ್ನು ಹಿಂಪಡೆಯಿರಿ; ಪೊಲೀಸರ ದೌರ್ಜನ್ಯಕ್ಕೆ ಹೊಣೆ ಹೊತ್ತುಕೊಂಡು ದೇಶದ ವಿದ್ಯಾರ್ಥಿಗಳ ಎದರುರು ಕ್ಷಮೆ ಕೇಳಿ.
ಕ್ಯಾಮೆರಾ ಮುಂದೆ ಕಣ್ಣೀರು ಸುರಿಸುವುದು ಕ್ಷಮೆಯಲ್ಲ, ಅಧಿಕಾರದ ಕ್ರೌರ್ಯವನ್ನು ನಿಲ್ಲಿಸುವುದೇ ಕ್ಷಮೆ. ತನ್ನ ನಾಲಿಗೆಯಿಂದ ಮಹಿಳೆಯರನ್ನು ಅವಮಾನಿಸಿ, ತನ್ನ ಭಕ್ತರ ನಾಲಿಗೆಯ ವಿಷಕ್ಕೆ ಮೌನವಾಗಿದ್ದು, ಈಗ ಮಾತೃಭಕ್ತಿಯ ಮುಖವಾಡ ಧರಿಸುವ ಈ ಭಂಡತನವನ್ನು ದೇಶ ಗುರುತಿಸಿದೆ ಪ್ರಧಾನಿಗಳೇ. ನಿಮ್ಮ ರೀಲ್‌ಗಳಿಗೆ ಅಂಧಭಕ್ತರು ಮೆಚ್ಚಬಹುದು; ಆದರೆ ಇತಿಹಾಸ ಮಾತ್ರ ಕ್ಷಮಿಸುವುದಿಲ್ಲ! ಎಂದು ಗುಡುಗಿದ್ದಾರೆ.

Related Articles

Back to top button