Belagavi NewsBelgaum NewsKannada NewsKarnataka NewsLatest

*ಮಳೆಯನ್ನು ಲೆಕ್ಕಿಸದೆ ನಿಪ್ಪಾಣಿಯಲ್ಲಿ ಭವ್ಯ ‘ಹರ್ ಘರ್ ತಿರಂಗಾ’ ರ್ಯಾಲಿ* *ರಾಷ್ಟ್ರಧ್ವಜ ಎತ್ತಿ ಹಿಡಿದು ವಿಕಸಿತ ಭಾರತದೆಡೆಗೆ ಒಂದಾಗಿ ಮುನ್ನಡೆಯೋಣ: ಶಶಿಕಲಾ ಜೊಲ್ಲೆ*

  • ಮಳೆಯನ್ನು ಲೆಕ್ಕಿಸದೆ ನಿಪ್ಪಾಣಿಯಲ್ಲಿ ಭವ್ಯ ‘ಹರ್ ಘರ್ ತಿರಂಗಾ’ ರ್ಯಾಲಿ
  • ರಾಷ್ಟ್ರಧ್ವಜ ಎತ್ತಿ ಹಿಡಿದು ವಿಕಸಿತ ಭಾರತದೆಡೆಗೆ ಒಂದಾಗಿ ಮುನ್ನಡೆಯೋಣ: ಶಶಿಕಲಾ ಜೊಲ್ಲೆ
  • ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ: ಕೇಂದ್ರ ಸರ್ಕಾರದ ‘ಹರ್ ಘರ್ ತಿರಂಗಾ’ ಅಭಿಯಾನದ ಅಂಗವಾಗಿ ನಿಪ್ಪಾಣಿ ನಗರದಲ್ಲಿ ಮಂಗಳವಾರ ಸಂಜೆ ಶಾಸಕಿ ಶಶಿಕಲಾ ಜೊಲ್ಲೆ ಅವರ ನೇತೃತ್ವದಲ್ಲಿ ಭವ್ಯ ತಿರಂಗಾ ರ್ಯಾಲಿ ನಡೆಯಿತು. ಮಳೆಯ ನಡುವೆಯೂ ನೂರಾರು ನಾಗರಿಕರು ರಾಷ್ಟ್ರಧ್ವಜ ಹಿಡಿದು ರ್ಯಾಲಿಯಲ್ಲಿ ಪಾಲ್ಗೊಂಡು ದೇಶಭಕ್ತಿ ಮೆರೆದರು.
  • ನಗರದ ಚನ್ನಮ್ಮ ವೃತ್ತದಿಂದ ಆರಂಭಗೊಂಡ ರ್ಯಾಲಿಯಲ್ಲಿ ಮಹಿಳೆಯರು, ಯುವಕರು, ಹಿರಿಯರು ಸೇರಿದಂತೆ ವಿವಿಧ ವರ್ಗದ ಜನರು ಉತ್ಸಾಹದಿಂದ ಭಾಗವಹಿಸಿದರು. ಪ್ರತಿಯೊಬ್ಬರ ಕೈಯಲ್ಲೂ ತ್ರಿವರ್ಣ ಧ್ವಜ ರಾರಾಜಿಸುತ್ತಿದ್ದು, ‘ಭಾರತ ಮಾತಾ ಕೀ ಜೈ’, ‘ವಂದೇ ಮಾತರಂ’ ಘೋಷಣೆಗಳು ಮೊಳಗಿದವು. ಇದರಿಂದ ನಿಪ್ಪಾಣಿ ನಗರದಲ್ಲಿ ದೇಶಭಕ್ತಿಯ ವಾತಾವರಣ ನಿರ್ಮಾಣವಾಯಿತು.
  • ಚನ್ನಮ್ಮ ವೃತ್ತದಿಂದ ಆರಂಭವಾದ ರ್ಯಾಲಿಯು ಅಶೋಕ ನಗರ, ಕೊಠಿವಾಲೆ ಕಾರ್ನರ್, ನೆಹರು ಚೌಕ, ಚಾಟೆ ಮಾರ್ಕೆಟ್, ಹಳೇ ಬಸ್ ನಿಲ್ದಾಣ, ನಗರಸಭೆ, ಸಾಖರವಾಡಿ, ಧರ್ಮವೀರ ಸಂಭಾಜಿ ಸರ್ಕಲ್, ನಿಪ್ಪಾಣಿ ಮೆಡಿಕಲ್ ಸೇರಿದಂತೆ ನಗರದ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಪುನಃ ಚನ್ನಮ್ಮ ವೃತ್ತದಲ್ಲಿ ಸಮಾರೋಪಗೊಂಡಿತು.
  • ಈ ಸಂದರ್ಭದಲ್ಲಿ ಮಾತನಾಡಿದ ಶಾಸಕಿ ಶಶಿಕಲಾ ಜೊಲ್ಲೆ, ದೇಶದ ಪ್ರಗತಿಯಲ್ಲಿ ಪ್ರತಿಯೊಬ್ಬ ನಾಗರಿಕನೂ ತನ್ನದೇ ಆದ ಕೊಡುಗೆ ನೀಡಬೇಕು. ರಾಷ್ಟ್ರಧ್ವಜವು ದೇಶದ ಹೆಮ್ಮೆ, ಏಕತೆ ಹಾಗೂ ಸ್ವಾಭಿಮಾನದ ಸಂಕೇತವಾಗಿದ್ದು, ಪ್ರತಿಯೊಂದು ಮನೆಯ ಮೇಲೂ ತಿರಂಗಾ ಹಾರಿಸುವ ಮೂಲಕ ದೇಶಾಭಿಮಾನವನ್ನು ವ್ಯಕ್ತಪಡಿಸಬೇಕು ಎಂದು ಕರೆ ನೀಡಿದರು.
  • ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿದ್ದು, ದೇಶವನ್ನು ಜಾಗತಿಕ ಮಟ್ಟದಲ್ಲಿ ಮಹತ್ವದ ರಾಷ್ಟ್ರವನ್ನಾಗಿಸುವ ಪ್ರಯತ್ನ ನಡೆಯುತ್ತಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸೇನಾನಿಗಳ ತ್ಯಾಗ ಮತ್ತು ಬಲಿದಾನದ ಬಗ್ಗೆ ಯುವ ಪೀಳಿಗೆಗೆ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದು ಹೇಳಿದರು.
  • ‘ಹರ್ ಘರ್ ತಿರಂಗಾ’ ಅಭಿಯಾನವು ಆ.13ರಿಂದ 15ರವರೆಗೆ ನಡೆಯಲಿದ್ದು, ತಾಲ್ಲೂಕಿನ ಪ್ರತಿಯೊಬ್ಬರೂ ತಮ್ಮ ಮನೆಗಳ ಮೇಲೆ ತಿರಂಗಾ ಹಾರಿಸಿ ದೇಶಭಕ್ತಿಯ ಸಂದೇಶ ಸಾರಬೇಕು. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಸ್ಮರಿಸುತ್ತಾ ದೇಶದ ಏಕತೆ ಮತ್ತು ಅಖಂಡತೆಯನ್ನು ಮತ್ತಷ್ಟು ಬಲಪಡಿಸೋಣ. ರಾಷ್ಟ್ರಧ್ವಜವನ್ನು ಎತ್ತಿ ಹಿಡಿದು ವಿಕಸಿತ ಭಾರತದೆಡೆಗೆ ಎಲ್ಲರೂ ಒಂದಾಗಿ ಮುನ್ನಡೆಯೋಣ ಎಂದು ಶಶಿಕಲಾ ಜೊಲ್ಲೆ ಕರೆ ನೀಡಿದರು.
  • ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮೀಣ ಅಧ್ಯಕ್ಷ ಬಾಳಾಸಾಹೇಬ ಕದಂ, ನಗರ ಅಧ್ಯಕ್ಷ ರಾಜು ಗುಂದೇಶಾ, ಮಹಿಳಾ ಮೋರ್ಚಾ ಅಧ್ಯಕ್ಷೆ ಯೋಗಿತಾ ಘೋರಪಡೆ, ಲಕ್ಷ್ಮೀ ಖೋತ, ಹಾಲಶುಗರ್ ಉಪಾಧ್ಯಕ್ಷೆ ಗೀತಾ ಪಾಟೀಲ, ಜಯವಂತ ಭಾಟಲೆ, ಸುನೀಲ ಪಾಟೀಲ, ಮಹಾಲಿಂಗೇಶ ಕೊಠಿವಾಲೆ, ಪ್ರಕಾಶ ಶಿಂಧೆ, ಸಂತೋಷ ಸಾಂಗಾವಕರ, ದೀಪಕ ಮಾನೆ, ಬಂಡಾ ಘೋರಪಡೆ, ಸಾಗರ ಮಿರಜೆ, ರವೀಂದ್ರ ಇಂಗವಲೆ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಪಾಲ್ಗೊಂಡಿದ್ದರು.

Related Articles

Back to top button