*ಅಂತರ್ ಜಿಲ್ಲಾ ಬೈಕ್ ಕಳ್ಳನ ಬಂಧನ: 43 ಬೈಕ್ ವಶಕ್ಕೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಳೆದ ಒಂದು ತಿಂಗಳ ಹಿಂದೆ ನಡೆದಿದ್ದ ಬೈಕ್ ಕಳ್ಳತನವೊಂದರ ಪ್ರಕರಣದ ಬೆನ್ನತ್ತಿದ್ದ ಕಿತ್ತೂರು ಪೋಲಿಸರು ಸದ್ಯ ಅಂತರ್ ಜಿಲ್ಲಾ ಬೈಕ್ ಕಳ್ಳನನ್ನ ಬಂಧಿಸುವಲ್ಲಿ ಯಶಸ್ವಿ ಆಗಿದ್ದು, ಕಳ್ಳನಿಂದ 30 ಲಕ್ಷ ರೂ. ಮೌಲ್ಯದ 43 ಬೈಕ್ಗಳು ವಶಕ್ಕೆ ಪಡೆಯಲಾಗಿದೆ.
ಬೆಳಗಾವಿ, ಹುಬ್ಬಳ್ಳಿ, ಧಾರವಾಡ,ಗದಗ ಮತ್ತು ಉತ್ತರ ಕನ್ನಡ ಜಿಲ್ಲೆ ಸೇರಿ ಹಲವು ಕಡೆ ಹೀರೋ ಸ್ಪ್ಲೆಂಡರ್ ಬೈಕ್ ಗಳನ್ನು ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದ ಖತರ್ನಾಕ್ ಕಳ್ಳ ಕೊನೆಗೂ ಸಿಕ್ಕಿಬಿದ್ದಿದ್ದು ಚೆನ್ನಮ್ಮನ ಕಿತ್ತೂರು ಪೋಲಿಸ್ ಠಾಣೆಯ ಸಿಬ್ಬಂದಿಯ ತನಿಖೆಯಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಳ್ಳತನವಾಗಿದ್ದ ನಲವತ್ಮೂರು ಬೈಕ್ ಗಳು ಸದ್ಯ ಅವುಗಳ ಮೂಲ ಮಾಲೀಕರ ಕೈ ಸೇರಲಿವೆ.
ಖಾನಾಪೂರ ತಾಲೂಕಿನ ನಿಡಗಲ್ ಗ್ರಾಮದ ನಿವಾಸಿ ನಾರಾಯಣ ಮನೋಹರ ಕದಮ್ ಬಂಧಿತ ಆರೋಪಿಯಾಗಿದ್ದು ತನ್ನ ಪೋಷಕರೊಂದಿಗೆ ಕೃಷಿ ಕೆಲಸ ಮಾಡುತ್ತಿದ್ದು ಅವಕಾಶ ಸಿಕ್ಕಾಗೆಲ್ಲ ಮಾಸ್ಟರ್ ಕೀ ಬಳಸಿ ಬೈಕ್ ಗಳನ್ನು ಎಗರಿಸುತ್ತಿದ್ದ
ಇನ್ನೂ ಆರೋಪಿಯು ತಾನು ಕದ್ದ ಬೈಕ್ ಗಳನ್ನ ಗ್ರಾಮೀಣ ಭಾಗದ ಕೃಷಿ ನಿರತ ಕೂಲಿ ಕಾರ್ಮಿಕರಿಗೆ ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದ್ದರಿಂದ ಅಸಲಿ ದಾಖಲೆಗಳನ್ನು ಕೇಳುವ ಗೋಜಿಗೆ ಜನರು ಹೋಗದೆ ಕಳೆದ ಎರಡು ವರ್ಷಗಳಿಂದ ಬೈಕ್ ಕಳ್ಳತನ ಮಾಡುತ್ತಿದ್ದ ಎಂದು ತಿಳಿದುಬಂದಿದ್ದು ಸಾರ್ವಜನಿಕರು ವಾಹನಗಳ ದಾಖಲೆ ಪರಿಶೀಲನೆ ಮಾಡದೆ ಸೆಕೆಂಡ್ ಹ್ಯಾಂಡ್ ಬೈಕ್ ಮತ್ತು ಕಾರುಗಳನ್ನು ಖರೀದಿಸದಂತೆ ಬೆಳಗಾವಿ ಎಸ್ ಪಿ ಕೆ ರಾಮ ರಾಜನ್ ಎಚ್ಚರಿಕೆ ನೀಡಿದ್ದಾರೆ.



