*BREAKING: ವಿಧಾನಸಭಾ ನೂತನ ಸ್ಪೀಕರ್ ಆಗಿ ಜಿ.ಎಸ್.ಪಾಟೀಲ್ ಅವಿರೋಧ ಆಯ್ಕೆ*

ಪ್ರಗತಿಚಾಹಿನಿ ಸುದ್ದಿ: ವಿಧಾನಸಭಾ ಸ್ಪೀಕರ್ ಆಗಿ ಗದಗ ಜಿಲ್ಲೆಯ ರೋಣ ಕ್ಷೇತ್ರದ ಹಿರಿಯ ಶಾಸಕ ಜಿ.ಎಸ್.ಪಾಟೀಲ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ವಿಧಾನಸಭಾ ಕಲಾಪ ಆರಂಭವಾಗುತ್ತಿದ್ದಂತೆಯೇ ಸ್ಪೀಕರ್ ಆಯ್ಕೆ ಚುನಾವಣೆ ಪ್ರಕ್ರಿಯೆ ನಡೆಸುವಂತೆ ಹಂಗಾಮಿ ಸ್ಪೀಕರ್ ಟಿ.ಬಿ.ಜಯಚಂದ್ರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸೂಚಿಸಿದರು. ಸ್ಪೀಕರ್ ಸ್ಥಾನಕ್ಕೆ ಸಿಎಂ ಡಿ.ಕೆ.ಶಿವಕುಮಾರ್, ಗದಗ ಜಿಲ್ಲೆಯ ರೋಣ ಕ್ಷೇತ್ರದ ಶಾಸಕ ಜಿ.ಎಸ್.ಪಾಟೀಲ್ ಹೆಸರು ಸೂಚಿಸಿದರು.
ಈ ವೇಳೆ ಸ್ಪೀಕರ್ ಆಯ್ಕೆ ಚುನಾವಣಾ ಪ್ರಕ್ರಿಯೆಯನ್ನು ಬಹಿಷ್ಕರಿಸಿದ ಬಿಜೆಪಿ- ಜೆಡಿಎಸ್ ಶಾಸಕರು ಸದನದಿಂದ ಹೊರನಡೆದರು. ಸಿಎಂ ಡಿ.ಕೆ.ಶಿವಕುಮಾರ್ ವಿಧಾನಸಭಾ ಸ್ಪೀಕರ್ ಆಗಿ ಜಿ.ಎಸ್.ಪಾಟೀಲ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಘೋಷಿಸಿದರು. ಈ ವೇಳೆ ಡಿಸಿಎಂ ಪರಮೇಶ್ವರ್ ನೂತನ ಸ್ಪೀಕರ್ ಜಿ.ಎಸ್.ಪಾಟೀಲ್ ಹೆಸರು ಅನುಮೋದಿಸಿದರು.
ನೂತನ ಸ್ಪೀಕರ್ ಆಗಿ ಜಿ.ಎಸ್.ಪಾಟೀಲ್ ಆಯ್ಕೆ ಬೆನ್ನಲ್ಲೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಡಿಸಿಎಂ ಪರಮೇಶ್ವರ್, ವಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಸ್ಪೀಕರ್ ಯು,ಟಿ.ಖಾದರ್ ಸೇರಿದಂತೆ ಹಲವು ನಾಯಕರು ಜಿ.ಎಸ್.ಪಾಟೀಲ್ ಅವರಿಗೆ ಅಭಿನಂದಿಸಿ ಸ್ಪೀಕರ್ ಪೀಠಕ್ಕೆ ಕರೆತಂದರು.


