Belagavi NewsBelgaum NewsKannada NewsKarnataka NewsLatest

*ಕನ್ನಡ ಸಾಹಿತ್ಯ ಕಣಜವನ್ನು ಶ್ರೀಮಂತಗೊಳಿಸಿದವರು ಡಾ. ಸರಜೂ ಕಾಟ್ಕರ್ : ಡಾ. ಬಸವರಾಜ ಜಗಜಂಪಿ*

*ಕನ್ನಡ ಸಾಹಿತ್ಯ ಕಣಜವನ್ನು ಶ್ರೀಮಂತಗೊಳಿಸಿದವರು ಡಾ. ಸರಜೂ ಕಾಟ್ಕರ್ : ಡಾ. ಬಸವರಾಜ ಜಗಜಂಪಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮರಾಠಿ ಶಿಕ್ಷಕರ ಮಗ ಸರಜೂ ಕಾಟ್ಕರ್ ಹುಬ್ಬಳ್ಳಿಯಿಂದ ಬೆಳಗಾವಿಗೆ ಬಂದು  ಕನ್ನಡ ಸಾಹಿತ್ಯ ಕಣಜವನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಹಿರಿಯ ವಿದ್ವಾಂಸ ಬಸವರಾಜ ಜಗಜಂಪಿ ಹೇಳಿದರು.

Home add -Advt

ನೃಪತುಂಗ ಪ್ರಶಸ್ತಿಗೆ ಭಾಜನರಾಗಿರುವ ಹಿರಿಯ ಸಾಹಿತಿ ಡಾ.ಸರಜೂ ಕಾಟ್ಕರ್ ಅವರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

ಬೆಳಗಾವಿ ಬಹಳಷ್ಟು ಸಾಹಿತಿಗಳನ್ನು ಬೆಳೆಸಿದೆ. ಇಂತಹ ಬೆಳಗಾವಿಗೆ ಬಂದ ಅವರು ಸಾಹಿತ್ಯ ಲೋಕದ ಸವ್ಯಸಾಚಿ ಎನಿಸಿದ್ದಾರೆ. ಹಲವಾರು ಹಿರಿ ಕಿರಿಯ ಸಾಹಿತಿಗಳನ್ನು ಬೆಳೆಸಿದ್ದಾರೆ ಎಂದರು. 

ಹಿರಿಯ ಕವಿ ಎಂ.ಎಸ್. ಇಂಚಲ ಕಾರ್ಯಕ್ರಮ ಉದ್ಘಾಟಿಸಿದರು. ಸರಜೂ ಕಾಟ್ಕರ್ ಅವರು ಸಾಹಿತ್ಯದ ಎಲ್ಲ ಪ್ರಕಾರಗಳನ್ನೂ ಬೆಳೆಸಿದ್ದಾರೆ. ಅವರಿಗೆ ಇನ್ನಷ್ಟು ಪ್ರಶಸ್ತಿಗಳು ಬರಲಿ ಎಂದು ಇಂಚಲ ಹೇಳಿದರು.

ಹಿರಿಯ ಸಾಹಿತಿ ಬಿ.ಎಸ್.ಗವಿಮಠ ಮಾತನಾಡಿ, 80 ಕೃತಿಗಳನ್ನು ಬರೆದಿರುವ ಸರಜೂ ಕಾಟ್ಕರ್ 35ಕ್ಕೂ ಹೆಚ್ಚು ಆಯ್ಕೆ ಸಮಿತಿಗಳಲ್ಲಿ ಕೆಲಸ ಮಾಡಿದ ಅಪರೂಪದ ಸಾಹಿತಿ, ಅವರಿಂದ ಸಾಹಿತ್ಯ ಲೋಕ ಇನ್ನಷ್ಟು ಬೆಳಗಲಿ ಎಂದರು.

ಹಿರಿಯ ಸಾಹಿತಿ ಎಲ್.ಎಸ್.ಶಾಸ್ತ್ರಿ, ಸಾಹಿತ್ಯ ಮತ್ತು ಪತ್ರಿಕೋದ್ಯಮ ಎರಡೂ ಕ್ಷೇತ್ರಗಳಲ್ಲಿ ಕೆಲಸ ಮಾಡಿರುವ ವಿಶಿಷ್ಟ ಸಾಹಿತಿ ಸರಜೂ ಕಾಟ್ಕರ್. ಪ್ರಶಸ್ತಿಗಳನ್ನೆ ಅನುಮಾನಿಸುವ ಸಂದರ್ಭದಲ್ಲಿ ಸರಜೂ ಕಾಟ್ಕರ್ ಅಂಥವರಿಗೆ ಪ್ರಶಸ್ತಿ ಬಂದರೆ ಪ್ರಶಸ್ತಿಯ ಮೌಲ್ಯ ಹೆಚ್ಚುತ್ತದೆ ಎಂದರು.

ಸನ್ಮಾನಕ್ಕೆ ಪ್ರತಿಕ್ರಿಯಿಸಿ ಡಾ.ಸರಜೂ ಕಾಟ್ಕರ್ ಮಾತನಾಡಿದರು, ಕನ್ನಡ ಸಾಹಿತ್ಯದ ಶ್ರೇಷ್ಠ ಪ್ರಶಸ್ತಿ ಎನಿಸಿರುವ ನೃಪತುಂಗ ಪ್ರಶಸ್ತಿ ಬಂದಿರುವುದನ್ನು ಕೇಳಿ ಮೊದಲು ನಂಬಲಾಗಲಿಲ್ಲ ಎಂದರು.

ಬೆಳಗಾವಿ ನನಗೆ ಎಲ್ಲವನ್ನೂ ನೀಡಿ ಬೆಳೆಸಿದೆ. ಜ್ಞಾನ ಪೀಠ ಪ್ರಶಸ್ತಿಯಷ್ಟೇ ಮಹತ್ವದ ನೃಪತುಂಗ ಪ್ರಶಸ್ತಿ ಸಿಕ್ಕಿದ್ದು ಅತ್ಯಂತ ಸಂತಸ ನೀಡಿದೆ ಎಂದರು.

ಹಿರಿಯ ನ್ಯಾಯವಾದಿ ಎಸ್.ಎಂ.ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಸರಜೂ ಕಾಟ್ಕರ್ ಬೆಳಗಾವಿಯ ಹೆಮ್ಮೆ. ಇಂತಹ ಸಾಹಿತಿಗಳನ್ನು ಸನ್ಮಾನಿಸಿದ್ದು ಖುಷಿ ತಂದಿದೆ ಎಂದು ಅವರು ಹೇಳಿದರು.

ಖುಷಿ ಡವಳಿ ಪ್ರಾರ್ಥನೆ ಹಾಡಿದರು. ಚಂದ್ರಕಾಂತ ಕುಸನೂರ ಪ್ರತಿಷ್ಠಾನದ ಅಧ್ಯಕ್ಷ ರವಿ ಕೊಟಾರಗಸ್ತಿ ಸ್ವಾಗತಿಸಿದರು. ರಂಗತಜ್ಞ ರಾಮಕೃಷ್ಣ ಮರಾಠೆ ಪ್ರಾಸ್ತಾವಿಕ ಮಾತನಾಡಿದರು. ಡಾ.ಸರಜೂ ಕಾಟ್ಕರ್ ಮತ್ತು ಸುಮಾ ಕಾಟ್ಕರ್ ಅವರನ್ನು ಅಭಿಮಾನಿಗಳ ಪರವಾಗಿ ಸನ್ಮಾನಿಸಲಾಯಿತು. ಆರ್.ಬಿ.ಕಟ್ಟಿ ಹಾಗೂ ಎಂ.ಕೆ.ಜೈನಾಪುರ ವೇದಿಕೆಯಲ್ಲಿದ್ದರು.  ಶಿರೀಶ ಜೋಶಿ ಕಾರ್ಯಕ್ರಮ ನಿರೂಪಿಸಿದರು. ಪಿ.ಜಿ.ಕೆಂಪಣ್ಣವರ್ ವಂದಿಸಿದರು .

ಚಂದ್ರಕಾಂತ ಕುಸನೂರ ಪ್ರತಿಷ್ಠಾನ, ಕನ್ನಡ ಸಾಹಿತ್ಯ ಭವನ ವಿಶ್ವಸ್ಥ ಮಂಡಳಿ ಹಾಗೂ ಎಂ.ಕೆ.ಪಬ್ಲಿಸಿಟಿ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

Related Articles

Back to top button