*ಹುಣಶೀಕಟ್ಟಿಯಲ್ಲಿ ರುದ್ರಮುನಿ ಶಿವಯೋಗಿ ಮಠದ ಶಿಲಾಮೂರ್ತಿ ಪ್ರಾಣ ಪ್ರತಿಷ್ಠಾಪನೆ*

ದೇವರು, ಧರ್ಮಗುರುಗಳ ಆಶೀರ್ವಾದದಿಂದ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಸಾಧ್ಯ: ಚನ್ನರಾಜ ಹಟ್ಟಿಹೊಳಿ
ಪ್ರಗತಿವಾಹಿನಿ ಸುದ್ದಿ: ಸಮಾಜದಲ್ಲಿ ಶಾಂತಿ, ನೆಮ್ಮದಿ ಹಾಗೂ ಸೌಹಾರ್ದತೆ ನೆಲೆಸಲು ದೇವರು ಮತ್ತು ಧರ್ಮಗುರುಗಳ ಆಶೀರ್ವಾದ ಅತ್ಯಂತ ಅಗತ್ಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು.
ಹುಣಶೀಕಟ್ಟಿ ಗ್ರಾಮದ ಶ್ರೀ ರುದ್ರಮುನಿ ಶಿವಯೋಗಿ ಮಠದಲ್ಲಿ ಭಾನುವಾರ ನಡೆದ ನೂತನ ಶಿಲಾಮೂರ್ತಿಯ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವ ಹಾಗೂ ಧರ್ಮಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಧಾರ್ಮಿಕ ಆಚರಣೆಗಳು ಹಾಗೂ ಮಠ-ಮಂದಿರಗಳು ಕೇವಲ ಪೂಜಾ ಸ್ಥಳಗಳಾಗಿ ಉಳಿಯದೆ, ಸಮಾಜದಲ್ಲಿ ಮಾನವೀಯ ಮೌಲ್ಯಗಳು, ಭಕ್ತಿ, ಸಂಸ್ಕಾರ ಮತ್ತು ಪರಸ್ಪರ ಸಹೋದರತ್ವವನ್ನು ಬೆಳೆಸುವ ಕೇಂದ್ರಗಳಾಗಬೇಕು. ಧರ್ಮಗುರುಗಳು ಜನರಲ್ಲಿ ಶಾಂತಿ, ಸಹಬಾಳ್ವೆ ಹಾಗೂ ಉತ್ತಮ ಜೀವನ ಮೌಲ್ಯಗಳನ್ನು ಬಿತ್ತುವ ಮೂಲಕ ಸಮಾಜವನ್ನು ಸನ್ಮಾರ್ಗದತ್ತ ಕೊಂಡೊಯ್ಯುತ್ತಿದ್ದಾರೆ ಎಂದು ಅವರು ಹೇಳಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರ ನೇತೃತ್ವದಲ್ಲಿ ಕಳೆದ ಎಂಟು ವರ್ಷಗಳಲ್ಲಿ 150ಕ್ಕೂ ಹೆಚ್ಚು ಮಠ-ಮಂದಿರಗಳ ನಿರ್ಮಾಣ ಹಾಗೂ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಕ್ಷೇತ್ರದ ಹಲವು ಗ್ರಾಮಗಳಲ್ಲಿ ಜನರ ಧಾರ್ಮಿಕ ಭಾವನೆಗಳಿಗೆ ಸ್ಪಂದಿಸಿ ದೇವಸ್ಥಾನಗಳು ಹಾಗೂ ಮಠಗಳ ಅಭಿವೃದ್ಧಿಗೆ ಅಗತ್ಯ ಸಹಕಾರ ನೀಡಲಾಗಿದೆ. ಕೆಲವು ಗ್ರಾಮಗಳಲ್ಲಿ ಎರಡು-ಮೂರು ದೇವಸ್ಥಾನಗಳ ನಿರ್ಮಾಣವೂ ನಡೆದಿದ್ದು, ಇದರಿಂದ ಗ್ರಾಮೀಣ ಭಾಗದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಮತ್ತಷ್ಟು ಉತ್ತೇಜನ ದೊರೆತಿದೆ ಎಂದು ಚನ್ನರಾಜ ಹಟ್ಟಿಹೊಳಿ ಹೇಳಿದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದ ವಿಶೇಷತೆ ಎಂದರೆ ಇಲ್ಲಿ ಎಲ್ಲ ಜಾತಿ, ಧರ್ಮ ಹಾಗೂ ಸಮುದಾಯಗಳ ಜನರು ಪರಸ್ಪರ ಗೌರವದಿಂದ ಹಾಗೂ ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ಈ ಸಹಬಾಳ್ವೆಯ ಪರಂಪರೆಯನ್ನು ಮತ್ತಷ್ಟು ಬಲಪಡಿಸುವುದು ಎಲ್ಲರ ಜವಾಬ್ದಾರಿಯಾಗಿದೆ. ಧರ್ಮದ ಹೆಸರಿನಲ್ಲಿ ವಿಭಜನೆಗಿಂತ ಧರ್ಮದ ಮೂಲಕ ಸಮಾಜವನ್ನು ಒಗ್ಗೂಡಿಸುವ ಕೆಲಸ ನಡೆಯಬೇಕು ಎಂದು ಅವರು ಕರೆ ನೀಡಿದರು.
ಶ್ರಾವಣ ಮಾಸವು ಧಾರ್ಮಿಕವಾಗಿ ಅತ್ಯಂತ ಪವಿತ್ರವಾದ ಅವಧಿಯಾಗಿದೆ. ಇಂತಹ ಶುಭ ಸಂದರ್ಭದಲ್ಲಿ ಶ್ರೀ ರುದ್ರಮುನಿ ಶಿವಯೋಗಿ ಮಠದಲ್ಲಿ ನೂತನ ಶಿಲಾಮೂರ್ತಿಯ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವ ನಡೆಯುತ್ತಿರುವುದು ಭಕ್ತರಿಗೆ ವಿಶೇಷ ಸಂತಸದ ಸಂಗತಿಯಾಗಿದೆ. ಶ್ರೀ ರುದ್ರಮುನಿ ಶಿವಯೋಗಿಗಳ ಕೃಪೆಯಿಂದ ನಾಡಿನ ಜನತೆಗೆ ಆಯುಷ್ಯ, ಆರೋಗ್ಯ, ಸುಖ, ಶಾಂತಿ ಮತ್ತು ಸಮೃದ್ಧಿ ದೊರೆಯಲಿ. ಪ್ರತಿಯೊಂದು ಕುಟುಂಬವೂ ನೆಮ್ಮದಿಯಿಂದ ಬದುಕುವಂತಾಗಲಿ ಹಾಗೂ ಸಮಾಜದಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಸಹೋದರತ್ವ ಮತ್ತಷ್ಟು ಗಟ್ಟಿಯಾಗಲಿ ಎಂದು ಅವರು ಪ್ರಾರ್ಥಿಸಿದರು.
ಧಾರ್ಮಿಕ ಕಾರ್ಯಕ್ರಮಗಳು ಗ್ರಾಮೀಣ ಭಾಗದ ಜನರನ್ನು ಒಂದೆಡೆ ಸೇರಿಸುವುದರ ಜೊತೆಗೆ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮಹತ್ವದ ಕಾರ್ಯವನ್ನು ಮಾಡುತ್ತವೆ. ಯುವಜನತೆ ನಮ್ಮ ಧಾರ್ಮಿಕ, ಸಾಂಸ್ಕೃತಿಕ ಪರಂಪರೆ ಹಾಗೂ ಹಿರಿಯರು ತೋರಿಸಿಕೊಟ್ಟ ಮಾನವೀಯ ಮೌಲ್ಯಗಳನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಮಠಾಧೀಶರು, ಗಣ್ಯರು, ಭಕ್ತರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಭಾಗವಹಿಸಿ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವ ಹಾಗೂ ಧರ್ಮಸಭೆಯ ಧಾರ್ಮಿಕ ಕಾರ್ಯಕ್ರಮಗಳಿಗೆ ಸಾಕ್ಷಿಯಾದರು.




