*ಕೌಶಲ್ಯ ಇಲ್ಲದ ಶಿಕ್ಷಣ ಪ್ರಯೋಜನಕ್ಕೆ ಬಾರದು: ಪ್ರೊ.ಟಿ.ಜಿ.ಸೀತಾರಾಂ*

ವಿಟಿಯುನಲ್ಲಿ ಮೂರು ಲ್ಯಾಬ್‌ಗಳಿಗೆ ಚಾಲನೆ: ವಿದ್ಯಾರ್ಥಿಗಳ ಪ್ರಯೋಗಿಕ ಕಲಿಕೆ ಒತ್ತು
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿದ್ಯಾರ್ಥಿಗಳು ಕೌಶಲ್ಯ ಶಿಕ್ಷಣ ಪಡೆದುಕೊಳ್ಳದ ಹೊರತು, ತಾವು ಪಡೆಯುವ ಅಂಕಪಟ್ಟಿಗೆ ಮೌಲ್ಯವಿರುವುದಿಲ್ಲ ಎಂಬುದನ್ನು ಅರಿತುಕೊಳ್ಳಬೇಕೆಂದು ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್(ಎಐಸಿಟಿಇ) ಮಾಜಿ ಅಧ್ಯಕ್ಷರಾದ ಪ್ರೊ.ಟಿ.ಜಿ.ಸೀತಾರಾಂ ಹೇಳಿದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ(ವಿಟಿಯು), ಸಂಶೋಧನೆ ಮತ್ತು ಅಭಿವೃದ್ಧಿ ಕೋಶ ಜ್ಞಾನ ಸಂಗಮದ ಕೇಂದ್ರದಲ್ಲಿ ಆಯೋಜಿಸಿದ್ದ “ರೀವರ್ಸ್ ಎಂಜಿನಿಯರಿಂಗ್ ಮತ್ತು ಎಐಸಿಟಿಇ ಐಡಿಯಾ ಲ್ಯಾಬ್, ಸ್ನೈಡರ್ ಎಲೆಕ್ಟ್ರಿಕ್ ಲ್ಯಾಬ್” ಸೇರಿದಂತೆ ಮೂರು ಲ್ಯಾಬ್‌ಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಉನ್ನತ ಶಿಕ್ಷಣ ವ್ಯಾಸಂಗಕ್ಕೆ ಪ್ರವೇಶ ಬಯಸುತ್ತಿರುವ ೪.೫ ಕೋಟಿ ವಿದ್ಯಾರ್ಥಿಗಳ ಪೈಕಿ ಶೇ.೨೮ ವಿದ್ಯಾರ್ಥಿಗಳು ಮಾತ್ರವೇ ಎಂಜಿನಿಯರಿಂಗ್ ಕ್ಷೇತ್ರ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಭಾರತದಲ್ಲಿ ೪ ಸಾವಿರಕ್ಕೂ ಹೆಚ್ಚು ಎಂಜಿನಿಯರಿಂಗ್ ಕಾಲೇಜುಗಳಿವೆ. ತಂತ್ರಜ್ಞಾನ ವೇಗಗತಿಯಲ್ಲಿ ಬೆಳವಣಿಗೆ ಸಾಧಿಸುತ್ತಿದೆ. ಇಂದು ಇದ್ದ ತಂತ್ರಜ್ಞಾನ ನಾಳೆಗೆ ಇರುವುದಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಕೇವಲ ಅಂಕಪಟ್ಟಿಗಾಗಿ ವ್ಯಾಸಂಗ ಮಾಡಿದರೆ, ಯಾವುದೇ ಪ್ರಯೋಜನವಿಲ್ಲ ಎಂಬುದನ್ನು ಅರಿತುಕೊಳ್ಳಬೇಕು” ಎಂದರು.
ವಿದ್ಯಾರ್ಥಿಗಳಿಗೆ ಕೌಶಲ್ಯ ಶಿಕ್ಷಣ ಸಿಗಬೇಕಾದಲ್ಲಿ, ಈ ರೀತಿಯ ಪ್ರಯೋಗಾಲಯಗಳ ಅವಶ್ಯಕತೆ ಹೆಚ್ಚಿದೆ. ಈ ಲ್ಯಾಬ್‌ನಲ್ಲಿ ಎಲ್ಲ ವಿಭಾಗದ ವಿದ್ಯಾರ್ಥಿಗಳು ಕಲಿಯಬಹುದಾಗಿದೆ. ಅತ್ಯಾಧುನಿಕ ತಂತ್ರಜ್ಞಾನದ ಜತೆಗೆ ಇದನ್ನು ರೂಪಿಸಿರುವುದರಿಂದ ವಿದ್ಯಾರ್ಥಿಗಳು ಪದವಿ ಮುಗಿಸುವ ವೇಳೆ ಉದ್ಯೋಗಕ್ಕೆ ಸಿದ್ಧರಾಗಿ ಹೊರಹೊಮ್ಮಬಹುದಾಗಿದೆ. ಈ ರೀತಿಯ ಲ್ಯಾಬ್‌ಗಳ ಅವಶ್ಯಕತೆ ಹೆಚ್ಚಿದೆ ಎಂದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ(ವಿಟಿಯು) ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಮಾತನಾಡಿ, “ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಶಿಕ್ಷಣವನ್ನು ನೀಡುವ ಉದ್ದೇಶದಿಂದ ನಾವು ಸೆಂಟರ್ ಆಫ್ ಎಕ್ಸಲೆನ್ಸ್‌ಗಳನ್ನು ನಿರ್ಮಾಣ ಮಾಡಿದ್ದೇವೆ. ರೀವರ್ಸ್ ಎಂಜಿನಿಯರಿಂಗ್ ಲ್ಯಾಬ್ ಅನ್ನು ಮುಂದಿನ ದಿನಗಳಲ್ಲಿ ಮುದ್ದೇನಹಳ್ಳಿ ಕ್ಯಾಂಪಸ್‌ನಲ್ಲಿಯೂ ಆರಂಭಿಸುತ್ತೇನೆ. ದಿನ ೨೪ ಗಂಟೆ ಲ್ಯಾಬ್ ತೆರೆಯಲಿದ್ದು, ವಿದ್ಯಾರ್ಥಿಗಳು ತಮಗೆ ಅನುಕೂಲವಾಗುವ ವೇಳೆಯಲ್ಲಿ ಆಗಮಿಸಿ ಅಧ್ಯಯನ ಮಾಡಬಹುದಾಗಿದೆ. ನಾವು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದ್ದು, ಇದರ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದರು”
“ಇಂದು ಉದ್ಯೋಗವಕಾಶಗಳ ಕೊರತೆ ಇಲ್ಲ. ಬದಲಾಗಿ ಕೈಗಾರಿಕೆಗಳು ಬಯಸುವ ರೀತಿಯಲ್ಲಿ ವಿದ್ಯಾರ್ಥಿಗಳು ಸಿದ್ಧರಾಗುತ್ತಿಲ್ಲ ಎಂಬ ಕೂಗು ಹೆಚ್ಚಾಗಿ ಕೇಳಿಬರುತ್ತಿದೆ. ಈ ಸಮಸ್ಯೆಯನ್ನು ನೀಗಿಸುವ ಸಲುವಾಗಿ ನಾವು ಈ ಲ್ಯಾಬ್‌ಗಳನ್ನು ತೆರೆದಿದ್ದೇವೆ. ಇಲ್ಲಿ ವಿದ್ಯಾರ್ಥಿಗಳು ತಮ್ಮ ಆಲೋಚನೆಗಳಿಗೆ ತಕ್ಕಂತೆ ಯೋಜನೆಗಳನ್ನು ರೂಪಿಸಬಹುದು ಎಂದರು.
ಲ್ಯಾಬ್ ಕುರಿತು
ಈ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ವಿವಿಧ ಕ್ಷೇತ್ರದಲ್ಲಿ ಲ್ಯಾಬ್‌ಗಳಿವೆ. ಇವು 3ಡಿ ಪ್ರಿಟಿಂಗ್ ಮಿಷನ್, ಡಿಸೈನಿಂಗ್, ನವ ತಂತ್ರಜ್ಞಾನವನ್ನು ಒಳಗೊಂಡಿದೆ. ಎಲ್ಲಾ ವಿಭಾಗದ ವಿದ್ಯಾರ್ಥಿಗಳು ಇದರಲ್ಲಿ ಕಲಿಯಬಹುದಾಗಿದೆ.
ಈ ವೇಳೆ ಐ ವ್ಯಾಲ್ಯೂ ಸಿಟಿಒ ಅರುಣ್ ಕುಮಾರ್, ವಿಟಿಯು ಕಾರ್ಯಕಾರಿ ಪರಿಷತ್‌ನ ಸದಸ್ಯರಾದ ಪ್ರೊ.ವಿ.ಕೇಶವ ಮೂರ್ತಿ, ವಿಟಿಯು ಕುಲಸಚಿವ(ಆಡಳಿತ) ಪ್ರೊ.ಪ್ರಸಾದ ಬಿ.ರಾಂಪುರೆ, ಕುಲಸಚಿವ (ಮೌಲ್ಯಮಾಪನ) ಪ್ರೊ.ಯು.ಜೆ. ಉಜ್ವಲ್, ವಿತ್ತಾಧಿಕಾರಿ ಡಾ.ಜಿ.ಪ್ರಶಾಂತ್ ನಾಯಕ್, ವಿಟಿಯು ಅಭಿವೃದ್ಧಿ ಮತ್ತು ಸಂಶೋಧನಾ ವಿಭಾಗದ ನಿರ್ದೇಶಕ ಡಾ.ಕೆ.ಎನ್.ಭರತ್ ಸೇರಿದಂತೆ ಇತರರು ಭಾಗವಹಿಸಿದ್ದರು.



