*ಮೃತ ವ್ಯಕ್ತಿಯ ನಕಲಿ ಸಹಿ ಬಳಸಿ ಆಸ್ತಿ ಮಾರಾಟ: 67 ವರ್ಷದ ಆರೋಪಿ ಬಂಧನ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಮಾಲೀಕರ ಮರಣದ ನಂತರವೂ ಅವರೇ ಮಾಲೀಕರಾಗಿದ್ದಾರೆಂದು ಬಿಂಬಿಸಿ, ಮೃತ ವ್ಯಕ್ತಿಯ ನಕಲಿ ಸಹಿ ಬಳಸಿ ಆಸ್ತಿಯನ್ನು ಮಾರಾಟ ಮಾಡಿ ವಂಚನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ನಗರದ ಮಾರ್ಕೆಟ್ ಪೊಲೀಸ್ ಠಾಣೆ ಪೊಲೀಸರು 67 ವರ್ಷದ ಆರೋಪಿಯನ್ನು ಬಂಧಿಸಿದ್ದಾರೆ.
ಕುರುಬರ ಗಲ್ಲಿ, ಹೊನ್ನಿಹಾಳ ನಿವಾಸಿ ಬಸಯ್ಯಾ ಬಾಳಯ್ಯ ಪೂಜೇರಿ ಅವರು 25 ಆಗಸ್ಟ್ 2025ರಂದು ಮಾರ್ಕೆಟ್ ಪೊಲೀಸ್ ಠಾಣೆಗೆ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿತ್ತು. ಪ್ರಕರಣ ಸಂಖ್ಯೆ 179/2025ರ ಅಡಿಯಲ್ಲಿ ಭಾರತೀಯ ದಂಡ ಸಂಹಿತೆಯ ಕಲಂ 193, 420, 423, 465, 468, 471 ಹಾಗೂ 149ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ಪ್ರಕರಣದ ತನಿಖೆ ವೇಳೆ ಆರೋಪಿ ವಿಷ್ಣು ಕೃಷ್ಣರಾವ್ ಪಾಟೀಲ್ (67), ಲಕ್ಷ್ಮೀ ನಗರ, ಬಾಳೇಕುಂದ್ರಿ, ಬೆಳಗಾವಿ ತಾಲೂಕು ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ದೂರುದಾರರ ಅಜ್ಜ ದಿವಂಗತ ದುಂಡಯ್ಯಾ ಬಸಲಿಂಗಯ್ಯಾ ಪೂಜೇರಿ ಅವರ ಹೆಸರಿನಲ್ಲಿ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಹೋಬಳಿಯ ಹೊನ್ನಿಹಾಳ ಗ್ರಾಮದಲ್ಲಿದ್ದ ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದಂತೆ ವಂಚನೆ ನಡೆಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಸರ್ವೆ ನಂಬರ್ 65/1ರ 37 ಗುಂಟೆ ಹಾಗೂ ಸರ್ವೆ ನಂಬರ್ 65/4ರ 35 ಗುಂಟೆ ಜಮೀನನ್ನು ಕಬಳಿಸುವ ಉದ್ದೇಶದಿಂದ ಆರೋಪಿ, ಸುಮಾರು 60 ವರ್ಷಗಳ ಹಿಂದೆಯೇ ಮೃತಪಟ್ಟಿದ್ದ ದೂರುದಾರರ ಅಜ್ಜನ ನಕಲಿ ಸಹಿಗಳನ್ನು ಸೃಷ್ಟಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ 08 ಏಪ್ರಿಲ್ 2024ರಂದು ಬೆಳಗಾವಿ ದಕ್ಷಿಣ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನಕಲಿ ದಾಖಲೆಗಳ ಆಧಾರದ ಮೇಲೆ ಖರೀದಿ ಪತ್ರ ಸಿದ್ಧಪಡಿಸಿ, ದೂರುದಾರರಿಗೆ ಸೇರಿದ ಕೃಷಿ ಜಮೀನನ್ನು ಮತ್ತೊಬ್ಬರಿಗೆ ಮಾರಾಟ ಮಾಡಿ ವಂಚನೆ ನಡೆಸಿರುವುದು ತನಿಖೆಯಿಂದ ಪತ್ತೆಯಾಗಿದೆ.
ತನಿಖೆಯಲ್ಲಿ ಆರೋಪಿಯ ವಿರುದ್ಧದ ಆರೋಪಗಳು ದೃಢಪಟ್ಟ ಹಿನ್ನೆಲೆಯಲ್ಲಿ ಆತನನ್ನು ಆಗಸ್ಟ್ 22ರಂದು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಪ್ರಕರಣದ ಕಾರ್ಯಾಚರಣೆಯಲ್ಲಿ ಮಾರ್ಕೆಟ್ ಪೊಲೀಸ್ ಠಾಣೆಯ ಪಿಐ ಜೆ.ಎಂ. ಕಾಲಿವರ್ಮಿ, ಪಿಎಸ್ಐ ಮಣಿಕಂಠ ಪೂಜಾರಿ ಹಾಗೂ ಸಿಬ್ಬಂದಿ ಕಾರ್ಯನಿರ್ವಹಿಸಿದ್ದಾರೆ. ಇವರ ಕಾರ್ಯವನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರು ಹಾಗೂ ಡಿಸಿಪಿಯವರು ಶ್ಲಾಘಿಸಿದ್ದಾರೆ.




