*ತಹಶಿಲ್ದಾರ್ ಕಚೇರಿಯ ಶೌಚಾಲಯವನ್ನು ಸ್ವಚ್ಛಗೊಳಿಸಿದ ಸಚಿವ*

ಪ್ರಗತಿವಾಹಿನಿ ಸುದ್ದಿ: ತಹಶಿಲ್ದಾರ್ ಕಚೇರಿಗೆ ದಿಢೀರ್ ಭೇಟಿ ನೀಡಿದ ಸಚಿವರೊಬ್ಬರು ಅಲ್ಲಿರುವ ಅವ್ಯವಸ್ಥೆ, ಸ್ವಲ್ಪವೂ ಸ್ವಚ್ಛವಿಲ್ಲದ ವಾತಾವರನ ಕಂಡು ಅಧಿಕಾರಿಗಳನ್ನು, ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಶೌಚಾಲಯಕ್ಕೆ ಭೇಟಿ ನೀಡಿದ ಸಚಿವರು ಅಲ್ಲಿದ್ದ ಕೊಳಕನ್ನು ಕಂಡು ಸ್ವತಃ ತಾವೇ ಸ್ವಚ್ಛಗಿಳಿಸಿರುವ ಘಟನೆ ನಡೆದಿದೆ.
ತೆಲಂಗಾಣ ಸಚಿವ ಜೂಪಲ್ಲಿ ಕೃಷ್ಣರಾವ್, ಪೆಂಟ್ಲವೆಲ್ಲಿ ತಹಶೀಲ್ದಾರ್ ಕಚೇರಿಗೆ ಅನಿರೀಕ್ಷಿತ ಭೇಟಿ ನೀಡಿದ್ದಾರೆ. ಈ ವೇಳೆ ಕಚೇರಿಯ ಕೊಳಕು ವಾತಾವರಣ ಮತ್ತು ಆಸ್ವಚ್ಛ ಶೌಚಾಲಯವನ್ನು ಕಂಡು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ತಹಶೀಲ್ದಾರ್ ಕಚೇರಿಯ ಶೌಚಾಲಯ ತೀರಾ ಕೊಳಕಾಗಿರುವುದನ್ನು ಕಂಡು ಕೆಂಡಾಮಂಡಲರಾದ ಸಚಿವರು, ಅಧಿಕಾರಿಗಳಿಗೆ ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಲ್ಲದೇ ತಾವೇ ಸ್ವತಃ ನೀರು ಸುರಿದು ಶೌಚಾಲಯವನ್ನು ಸ್ವಚ್ಛಗೊಳಿಸುವ ಮೂಲಕ ಅಧಿಕಾರಿಗಳಿಗೆ ಸ್ವಚ್ಛತೆ ಬಗ್ಗೆ ಪಾಠ ಮಾಡಿದ್ದಾರೆ.
ಇದು ಸಾರ್ವಜನಿಕರು ಬಂದು ಹೋಗುವ ಸರ್ಕಾರಿ ಕಚೇರಿ. ಇಷ್ಟೊಂದು ಕೊಳಕಾಗಿಟ್ಟುಕೊಂಡರೆ ಹೇಗೆ? ಎಂದು ಪ್ರಶ್ನಿಸಿದ್ದಾರೆ. ತಕ್ಷಣದಿಂದಲೇ ಕಚೇರಿಯ ಸ್ವಚ್ಛತೆಯನ್ನು ಕಾಪಾಡುವಂತೆ ಖಡಕ್ ಸೂಚನೆ ನೀಡಿದರು.
ಬಳಿಕ ಕಚೇರಿಯಲ್ಲಿದ್ದ ಕಂದಾಯ ಇಲಾಖೆಯ ಬಾಕಿ ಕಡತಗಳು ಹಾಗೂ ಸಾರ್ವಜನಿಕರ ಅರ್ಜಿಗಳನ್ನು ಪರಿಶೀಲಿಸಿದ ಸಚಿವರು, ಅರ್ಜಿ ವಿಲೇವಾರಿಯಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸಾರ್ವಜನಿಕ ಸೇವೆಗಳನ್ನು ಸಕಾಲಕ್ಕೆ ತಲುಪಿಸಬೇಕು, ಯಾವುದೇ ಕಾರಣಕ್ಕೂ ಸಾರ್ವಜನಿಕರನ್ನು ಅಲೆದಾಡಿಸಬಾರದು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.



