*ಭೀಕರ ಪ್ರವಾಹ: 16 ಜನರು ಸಾವು; ಭದ್ರತಾ ಸಿಬ್ಬಂದಿಗಳು, ಭಾರತೀಯರು ಸೇರಿ 200ಕ್ಕೂ ಹೆಚ್ಚು ಜನರು ನಾಪತ್ತೆ*

ಪ್ರಗತಿವಾಹಿನಿ ಸುದ್ದಿ: ನೇಪಾಳದಲ್ಲಿ ಹಠಾತ್ ಪ್ರವಾಹ ಸಂಭವಿಸಿದ್ದು, 16 ಜನರು ಮೃತಪಟ್ಟಿದ್ದಾರೆ. ನೂರಾರು ಭಾರತೀಯರು ಸೇರಿದಂತೆ 200ಕ್ಕೂ ಹೆಚ್ಚು ಪ್ರವಾಸಿಗರು ನಾಪತ್ತೆಯಾಗಿದ್ದಾರೆ.
ಉತ್ತರ ನೇಪಾಳದ ರಸುವಾ ಜಿಲ್ಲೆಯಲ್ಲಿ ಭೋಟೆ ಕೋಶಿ ನದಿಯಲ್ಲಿ ಭೀಕರ ಪ್ರವಾಹ ಸಂಭವಿಸಿದ್ದು, ಈ ದುರಂತ ಸಂಭವಿಸಿದೆ. 41 ಭದ್ರತಾ ಸಿಬ್ಬಂದಿ ಸೇರಿದಂತೆ 200ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ.
ಟಿಬೆಟ್ ಗಡಿಗೆ ಹೊಂದಿಕೊಂಡಿರುವ ತಿಮುರೆ ಮತ್ತು ಸಯಾಪ್ರು ಬೆಸಿ ಪ್ರದೇಶಗಳಲ್ಲಿ ಪ್ರವಾಹವು ವಿನಾಶವನ್ನೇ ಸೃಷ್ಟಿಸಿದ್ದು, ನೂರಾರು ಮನೆಗಳು, ರಸ್ತೆಗಳು, ಪ್ರಮುಖ ಸೇತುವೆಗಳು ಹಾಗೂ ಜಲವಿದ್ಯುತ್ ಯೋಜನೆಗಳ ಮೂಲಸೌಕರ್ಯಗಳು ನೀರಿನಲ್ಲಿ ಕೊಚ್ಚಿಹೋಗಿವೆ.
ಪ್ರವಾಹ ಪೀಡಿತ ಪ್ರದೇಶದಲ್ಲಿ ರಕ್ಷಣಾ ಮತ್ತು ಗಡಿ ಕರ್ತವ್ಯದಲ್ಲಿದ್ದ 32 ನೇಪಾಳ ಪೊಲೀಸರು ಹಾಗೂ 9 ಮಂದಿ ಸಶಸ್ತ್ರ ಪೊಲೀಸ್ ಪಡೆ (APF) ಸಿಬ್ಬಂದಿ ನೀರಿನ ರಭಸಕ್ಕೆ ಕೊಚ್ಚಿಹೋಗಿದ್ದು, ಅವರ ಪತ್ತೆಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ.
ನೇಪಾಳ ಸೇನೆ, ಪೊಲೀಸ್ ಪಡೆಗಳು, ವೈದ್ಯಕೀಯ ತಂಡಗಳು ಮತ್ತು ಹೆಲಿಕಾಪ್ಟರ್‌ಗಳನ್ನು ಯುದ್ಧೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. ನದಿ ತೀರದ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರನ್ನು ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಸ್ಥಳೀಯ ಆಡಳಿತಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಭೋಟೆ ಕೋಶಿ ನದಿಯು ಟಿಬೆಟ್‌ನಲ್ಲಿ ಹುಟ್ಟಿ ನೇಪಾಳವನ್ನು ಪ್ರವೇಶಿಸುತ್ತದೆ. ಟಿಬೆಟ್ ಪ್ರಸ್ಥಭೂಮಿಯಲ್ಲಿರುವ ಸೂಪರ್‌ಗ್ಲೇಶಿಯಲ್ ಸರೋವರವೊಂದು ದಿಢೀರ್ ಒಡೆದು ನೀರು ನುಗ್ಗಿದ್ದೇ ಹಠಾತ್ ಪ್ರವಾಹಕ್ಕೆ ಕಾರಣ ಎಂದು ಹವಾಮಾನ ತಜ್ಞರು ಶಂಕಿಸಿದ್ದಾರೆ.



