Belagavi NewsBelgaum NewsKannada NewsKarnataka NewsPolitics

*ಬರಪಟ್ಟಿಗೆ ಬೆಳಗಾವಿ ಇನ್ನೂ ಸೇರ್ಪಡೆಯಾಗಿಲ್ಲ, ಮಾರ್ಗಸೂಚಿ ಪರಿಷ್ಕರಣೆಗೆ ಮನವಿ :  ಸಚಿವ ಸತೀಶ್ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: “ಬರಪೀಡಿತ ತಾಲೂಕುಗಳ ಪಟ್ಟಿಗೆ ಬೆಳಗಾವಿ ಜಿಲ್ಲೆ ಇನ್ನೂ ಸೇರ್ಪಡೆಯಾಗಿಲ್ಲ. ಕೇಂದ್ರ ಸರ್ಕಾರದ ನಿಯಮಗಳಂತೆ ಬರ ಘೋಷಣೆ ಮಾಡಬೇಕಾಗಿದ್ದು, ಪ್ರಸ್ತುತ ಯರಗಟ್ಟಿ ಹಾಗೂ ಸವದತ್ತಿ ತಾಲೂಕುಗಳು ಕೇಂದ್ರದ ಮಾನದಂಡದ ವ್ಯಾಪ್ತಿಗೆ ಬರುವುದಿಲ್ಲ. ಮುಂದಿನ ವಾರದಲ್ಲಿ ಪರಿಸ್ಥಿತಿ ಬದಲಾಗುವ ಸಾಧ್ಯತೆಯಿದೆ” ಎಂದು ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಶನಿವಾರ   ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬರ ಘೋಷಣೆಗೆ ಸಂಬಂಧಿಸಿದ ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಪರಿಷ್ಕರಿಸುವಂತೆ ಮನವಿ ಮಾಡಲಾಗಿದೆ. ಕೇಂದ್ರದ ಅಧ್ಯಯನ ತಂಡ ಜಿಲ್ಲೆಗೆ ಆಗಮಿಸಿ ಬರ ಪರಿಸ್ಥಿತಿಯನ್ನು ಪರಿಶೀಲಿಸಿ ವರದಿ ಸಲ್ಲಿಸಬೇಕಿದೆ. ಈ ಪ್ರಕ್ರಿಯೆ ಪೂರ್ಣಗೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ. ನಂತರ ಕೇಂದ್ರ ಗೃಹ ಸಚಿವಾಲಯದಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

Home add -Advt

ಬೆಳೆ ವಿಮೆ ಕುರಿತು ಮಾತನಾಡಿದ ಸಚಿವರು, ಕೆಲ ರೈತರು ಬೆಳೆ ವಿಮೆ ಮಾಡಿಸಿಕೊಂಡಿದ್ದು, ಇನ್ನು ಕೆಲವರು ಮಾಡಿಸಿಕೊಂಡಿಲ್ಲ. ಸದ್ಯ ಈ ವಿಚಾರದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಕಳೆದ ಬಾರಿಯೂ ಕೇಂದ್ರ ಸರ್ಕಾರದ ನೆರವಿಗಾಗಿ ಕಾಯದೆ ರಾಜ್ಯ ಸರ್ಕಾರವೇ ರೈತರಿಗೆ ಪರಿಹಾರ ವಿತರಿಸಿತ್ತು. ಈ ಬಾರಿಯೂ ರೈತರ ಹಿತದೃಷ್ಟಿಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸತೀಶ್ ಜಾರಕಿಹೊಳಿ ಹೇಳಿದರು.

ನಾಗೇಂದ್ರ ರಾಜೀನಾಮೆಗೆ ಬಿಜೆಪಿಯ ಹೋರಾಟವೇ ಕಾರಣ

ಮಾಜಿ ಸಚಿವ ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಸತೀಶ ಜಾರಕಿಹೊಳಿ, ಬಿಜೆಪಿಯವರ ಹಠ ಹಾಗೂ ನಿರಂತರ ಧರಣಿ, ಹೋರಾಟದಿಂದಾಗಿ ನಾಗೇಂದ್ರ ಅವರು ರಾಜೀನಾಮೆ ನೀಡಿದ್ದಾರೆ. ಈಗಾಗಲೇ ಅವರಿಗೆ ಕ್ಲೀನ್‌ಚಿಟ್ ನೀಡಲಾಗಿದ್ದರೂ, ರಾಜಕೀಯ ಒತ್ತಡದಿಂದ ರಾಜೀನಾಮೆ ನೀಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

ನಾಗೇಂದ್ರ ರಾಜೀನಾಮೆ ನೀಡಿರುವುದರಿಂದ ಪ್ರಕರಣಕ್ಕೆ ತೆರೆ ಬಿದ್ದಿದೆ. ಈ ಪ್ರಕರಣದಿಂದ ಪಕ್ಷಕ್ಕೆ ಮುಜುಗರ ಉಂಟಾಗಿರುವುದು ನಿಜ. ಆದರೆ ರಾಜೀನಾಮೆ ನೀಡಿದ ಬಳಿಕ ಈ ವಿಚಾರವನ್ನು ಮುಂದುವರಿಸಿ ಚರ್ಚಿಸುವ ಅಗತ್ಯವಿಲ್ಲ ಎಂದರು.

ನಾಗೇಂದ್ರ ಅವರು ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, “ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಸಂದರ್ಭ ಬರುವುದಿಲ್ಲ. ನಮಗೆಲ್ಲ ಐದು ವರ್ಷಗಳ ಅವಧಿಗೆ ಜನರು ಆಯ್ಕೆ ಮಾಡಿದ್ದಾರೆ” ಎಂದು ಹೇಳಿದರು.

ನಾಗೇಂದ್ರ ಅವರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಪಕ್ಷದ ತೀರ್ಮಾನವಾಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ವಿಚಾರ ಎರಡು ವರ್ಷಗಳ ಹಿಂದೆಯೇ ಮುಗಿದಿದೆ. ಇದೀಗ ತೆರವಾಗಿರುವ ಸಚಿವ ಸ್ಥಾನವನ್ನು ವಾಲ್ಮೀಕಿ ಸಮಾಜಕ್ಕೆ ನೀಡುವ ಕುರಿತು ಪಕ್ಷ ತೀರ್ಮಾನ ಕೈಗೊಳ್ಳಲಿದೆ ಎಂದರು.

ಡಿಸಿಎಂ ಹುದ್ದೆ ವಿಚಾರ: ಅದು ಮುಗಿದ ಕಥೆ, ಮುಂದಿನ ಸಮಯವರೆಗೂ ಕಾದು ನೋಡೋಣ

“ಸಿದ್ದರಾಮಯ್ಯ ಅವರು ಮನಸ್ಸು ಮಾಡಿದರೆ ನೀವು ಡಿಸಿಎಂ ಆಗಬಹುದಿತ್ತು” ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಅದು ಮುಗಿದ ಕಥೆ. ಅದಕ್ಕೂ ಒಂದು ಟೈಮ್ ಬರಲಿದೆ, ಕಾದು ನೋಡೋಣ” ಎಂದು ಹೇಳಿದರು.

ನನಗೆ ಇನ್ನೂ ಸಮಯವಿದೆ. ಎರಡು ಸಲ ಸ್ಪರ್ಧೆ ಮಾಡುತ್ತೇನೆ. ನಾಲ್ಕು ನಾಲ್ಕು ಡಿಸಿಎಂ ಮಾಡಿದರೆ ಅದರ ಅರ್ಥ ಇರುವುದಿಲ್ಲ ಎಂಬ ಕಾರಣಕ್ಕೆ ಡಿಸಿಎಂ ಹುದ್ದೆ ಮಾಡಿಲ್ಲ” ಎಂದು ಹೇಳಿದರು.

ಸಿದ್ದರಾಮಯ್ಯ–ರಮೇಶ ಜಾರಕಿಹೊಳಿ ಭೇಟಿ ಸಾಮಾನ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರನ್ನು ಭೇಟಿಯಾಗುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಿದ್ದರಾಮಯ್ಯ ಹಾಗೂ ರಮೇಶ ಜಾರಕಿಹೊಳಿ ಭೇಟಿಯಾಗುವುದು ಸರ್ವೇ ಸಾಮಾನ್ಯ. ರಮೇಶ ಜಾರಕಿಹೊಳಿ ಅವರು ಎಲ್ಲರನ್ನೂ ಭೇಟಿಯಾಗುತ್ತಾರೆ. ಇದರಲ್ಲಿ ಯಾವುದೇ ವಿಶೇಷತೆ ಇಲ್ಲ ಎಂದರು.

ಎರಡು ಸಚಿವ ಸ್ಥಾನ ಭರ್ತಿ ಮಾಡುವ ಕುರಿತು ಚರ್ಚೆ

ಸರ್ಕಾರದಲ್ಲಿ ಖಾಲಿಯಾಗಿರುವ ಎರಡು ಸಚಿವ ಸ್ಥಾನಗಳನ್ನು ಭರ್ತಿ ಮಾಡುವ ಕುರಿತು ಚರ್ಚೆ ನಡೆಯುತ್ತಿದೆ. ಅದು ನನ್ನ ವ್ಯಾಪ್ತಿಯಲ್ಲಿ ಇಲ್ಲ. ಈ ಬಗ್ಗೆ  ಸರ್ಕಾರ ಶೀಘ್ರದಲ್ಲೇ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಸತೀಶ ಜಾರಕಿಹೊಳಿ ತಿಳಿಸಿದರು.

Related Articles

Back to top button