*1.5 ಕೋಟಿ ರೂ.ಗೂ ಅಧಿಕ ಹಣ ದುರ್ಬಳಕೆ: ಪಿಡಿಒ ಸಸ್ಪೆಂಡ್*

ಪ್ರಗತಿವಾಹಿನಿ ಸುದ್ದಿ: 1.5 ಕೋಟಿ ರೂಪಾಯಿಗೂ ಅಧಿಕ ಹಣ ದುರ್ಬಳಕೆ ಆರೋಪದ ಮೇಲೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಓರ್ವರನ್ನು ಅಮಾನತುಗೊಳಿಸಲಾಗಿದೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಆತಗೂರು ಗ್ರಾಮ ಪಂಚಾಯತ್ ಪಿಡಿಒ ಶಶಿಧರ್ ಅಮಾನತುಗೊಂಡವರು. ಕರ್ತವ್ಯಲೋಪ ಮತ್ತು 1.5 ಕೋಟಿ ರೂಪಾಯಿಗೂ ಅಧಿಕ ಹಣ ದುರ್ಬಳಕೆ ಆರೋಪದ ಮೇಲೆ ಅಮಾನತುಗೊಳಿಸಲಾಗಿದೆ.
ಮಂಡ್ಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್. ನಂದಿನಿ ಅವರು ಈ ಕುರಿತು ಆದೇಶ ಹೊರಡಿಸಿದ್ದಾರೆ. ಪಿಡಿಒ ಶಶಿಧರ್ ಅವರ ವಿರುದ್ಧ ಎರಡು ಪ್ರಮುಖ ಆರೋಪಗಳು ಕೇಳಿಬಂದಿದ್ದವು. ಮೊದಲನೆಯದಾಗಿ, 15ನೇ ಹಣಕಾಸು ಆಯೋಗದ ಅನುದಾನದ ವೆಚ್ಚ ನಿರ್ವಹಣೆಯಲ್ಲಿ ನಿಯಮಾವಳಿಗಳನ್ನು ಪಾಲಿಸಿಲ್ಲ ಎನ್ನಲಾಗಿದೆ. ಅಲ್ಲದೆ, ಅಗತ್ಯ ದಾಖಲೆಗಳನ್ನು ಸರಿಯಾಗಿ ನಿರ್ವಹಿಸದೆ ಮತ್ತು ಕಾರ್ಯವಿಧಾನದ ಲೋಪಗಳನ್ನು ಎಸಗಿರುವುದೂ ದೂರಿನಲ್ಲಿ ಉಲ್ಲೇಖವಾಗಿದೆ.
ಮುಖ್ಯವಾಗಿ 13.10 ಲಕ್ಷ ರೂಪಾಯಿಗಳಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ನಿರ್ವಹಿಸದಿರುವ ಆರೋಪವಿದೆ. ಈ ಹಣಕ್ಕೆ ಸಂಬಂಧಿಸಿದ ಸುಮಾರು 11 ರಿಂದ 12 ಪ್ರಮುಖ ಕಡತಗಳು ಕಾಣೆಯಾಗಿವೆ 27 ಲಕ್ಷ ರೂಪಾಯಿಗಳ ಮೊತ್ತಕ್ಕೆ ಸಂಬಂಧಿಸಿದಂತೆ ಅಕ್ರಮಗಳು ನಡೆದಿರುವ ಬಗ್ಗೆಯೂ ದೂರುಗಳು ಬಂದಿವೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ, ಮಂಡ್ಯ ಜಿ.ಪಂ. ಸಿಇಒ, ಪಿಡಿಒ ಅಮಾನತುಗೊಳಿಸಿ ಕ್ರಮ ಕೈಗೊಂಡಿದ್ದಾರೆ.



