EducationLatestNational

*ಮಕ್ಕಳ ಶಿಕ್ಷಣಕ್ಕಾಗಿ ಮ್ಯಾರಥಾನ್ ಗೆದ್ದ ತಾಯಿ*

ಸೀರೆಯುಟ್ಟು ಬರಿಗಾಲಲ್ಲೇ ಓಟ; ಮಹಾರಾಷ್ಟ್ರದ 47 ವರ್ಷದ ನಾರಿಯ ಸಾಹಸ

ಪ್ರಗತಿವಾಹಿನಿ ಸುದ್ದಿ: ಕಾಲಿಗೆ ಚುಚ್ಚುವ ಕಲ್ಲುಗಳ ನೋವಿಗಿಂತ ಮಕ್ಕಳ ಭವಿಷ್ಯದ ಚಿಂತೆಯೇ ದೊಡ್ಡದು ಎಂದು ಭಾವಿಸಿದ 47 ವರ್ಷದ ತಾಯಿ, ಸೀರೆಯುಟ್ಟು ಬರಿಗಾಲಲ್ಲೇ ಮ್ಯಾರಥಾನ್ ಓಡಿ ಪ್ರಥಮ ಸ್ಥಾನ ಪಡೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.


ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಅಂಬಾಜೋಗಾಯಿ ಮೂಲದ ರಮಾಬಾಯಿ ರಣವೀರ್ ಅವರೇ ಈ ಸಾಹಸಗಾಥೆಯ ನಾಯಕಿ. ಮಕ್ಕಳ ಶಿಕ್ಷಣದ ಖರ್ಚು ಭರಿಸುವ ಉದ್ದೇಶದಿಂದ ಅವರು ಮ್ಯಾರಥಾನ್‌ನಲ್ಲಿ ಪಾಲ್ಗೊಂಡು, ತಮ್ಮ ಛಲ ಮತ್ತು ಆತ್ಮವಿಶ್ವಾಸದಿಂದ ಗೆಲುವು ಸಾಧಿಸಿದ್ದಾರೆ.


ಪತಿಯನ್ನು ಕಳೆದುಕೊಂಡಿರುವ ರಮಾಬಾಯಿ ಅವರಿಗೆ ಇಬ್ಬರು ಹೆಣ್ಣುಮಕ್ಕಳೇ ಬದುಕಿನ ಆಶಾಕಿರಣ. ಹೊಲಗಳಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಅವರು, ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂಬ ಕನಸನ್ನು ಹೊಂದಿದ್ದರು. ಮಕ್ಕಳ ಉನ್ನತ ವ್ಯಾಸಂಗಕ್ಕಾಗಿ ಅಂಬಾಜೋಗಾಯಿಯಲ್ಲಿರುವ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವೊಂದರಲ್ಲಿ ಅಡುಗೆ ಕೆಲಸವನ್ನೂ ಮಾಡುತ್ತಿದ್ದರು.


₹3 ಸಾವಿರ ಬಹುಮಾನಕ್ಕಾಗಿ ಓಟ
‘ಅಮೃತ್ ಧಾವ್’ ಮ್ಯಾರಥಾನ್‌ನಲ್ಲಿ ಪ್ರಥಮ ಬಹುಮಾನವಾಗಿ ₹3,000 ನೀಡಲಾಗುತ್ತದೆ ಎಂಬುದು ತಿಳಿದ ತಕ್ಷಣ ರಮಾಬಾಯಿ ಸ್ಪರ್ಧೆಯಲ್ಲಿ ಭಾಗವಹಿಸಲು ನಿರ್ಧರಿಸಿದರು. ಆ ಹಣದಿಂದ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಸಿದ್ಧತಾ ಪುಸ್ತಕಗಳನ್ನು ಕೊಡಿಸಬೇಕು ಎಂಬುದು ಅವರ ಉದ್ದೇಶವಾಗಿತ್ತು.


ಮ್ಯಾರಥಾನ್‌ನಲ್ಲಿ ಯುವಕರು ಟ್ರ್ಯಾಕ್‌ಸೂಟ್‌, ಶೂ ಧರಿಸಿ ಓಡುತ್ತಿದ್ದರೆ, ರಮಾಬಾಯಿ ಮಾತ್ರ ಸೀರೆಯುಟ್ಟು ಓಟಕ್ಕೆ ಇಳಿದಿದ್ದರು. ಓಟದ ವೇಗ ಹೆಚ್ಚಾದಂತೆ ಕಾಲಿನಲ್ಲಿದ್ದ ಸಾಮಾನ್ಯ ಚಪ್ಪಲಿಗಳು ಜಾರಲಾರಂಭಿಸಿದವು. ಆದರೆ ಓಟವನ್ನು ನಿಲ್ಲಿಸಿದರೆ ತಮ್ಮ ಮಕ್ಕಳ ಕನಸಿಗೂ ಅಡ್ಡಿಯಾಗುತ್ತದೆ ಎಂಬ ದೃಢಸಂಕಲ್ಪದಿಂದ ಅವರು ಚಪ್ಪಲಿಗಳನ್ನು ಕಳಚಿ ಕೈಯಲ್ಲಿ ಹಿಡಿದುಕೊಂಡು ಬರಿಗಾಲಲ್ಲೇ ಓಡಿದರು.


ರಸ್ತೆಯ ಕಲ್ಲುಗಳು ಕಾಲಿಗೆ ಚುಚ್ಚಿದರೂ ನೋವನ್ನು ಲೆಕ್ಕಿಸದೆ, ಸೀರೆಯ ಅಂಚನ್ನು ಸರಿಪಡಿಸಿಕೊಳ್ಳುತ್ತಾ ಗುರಿಯತ್ತ ಮುನ್ನುಗ್ಗಿದರು. ಕೊನೆಗೆ ಎಲ್ಲ ಸ್ಪರ್ಧಿಗಳನ್ನು ಹಿಂದಿಕ್ಕಿ ಪ್ರಥಮ ಸ್ಥಾನ ಪಡೆದು ಫಿನಿಶ್‌ ಲೈನ್‌ ದಾಟಿದರು.


ಗೆಲುವಿನ ಬಳಿಕ ಮಾತನಾಡಿದ ರಮಾಬಾಯಿ, “ನಾನು ಓಡುತ್ತಿರುವಾಗ ದಾರಿಯ ಕಲ್ಲುಗಳು, ಕಾಲಿನ ನೋವು ಯಾವುದೂ ಗಮನಕ್ಕೆ ಬರಲಿಲ್ಲ. ಕೇವಲ ನನ್ನ ಹೆಣ್ಣುಮಕ್ಕಳ ಭವಿಷ್ಯ ಮಾತ್ರ ಕಾಣುತ್ತಿತ್ತು” ಎಂದು ಭಾವುಕರಾಗಿ ಹೇಳಿದರು.


ಮಗಳೂ ಓಟದಲ್ಲಿ; ಪೊಲೀಸ್‌ ಅಧಿಕಾರಿಯಾಗುವ ಸಂಕಲ್ಪ
ಈ ಮ್ಯಾರಥಾನ್‌ನಲ್ಲಿ ರಮಾಬಾಯಿ ಅವರ ಮಗಳು ಪೂಜಾ ಕೂಡ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿರುವುದು ವಿಶೇಷ. ತಾಯಿಯ ಸಾಹಸದಿಂದ ಪ್ರೇರಿತರಾದ ಪೂಜಾ, “ಅಮ್ಮನೇ ನನ್ನ ಸ್ಫೂರ್ತಿ. ಅವರ ಕಷ್ಟಕ್ಕೆ ಬೆಲೆ ತಂದುಕೊಡಲು ನಾನು ಪೊಲೀಸ್‌ ಅಧಿಕಾರಿಯಾಗಿಯೇ ತೀರುತ್ತೇನೆ” ಎಂದು ಸಂಕಲ್ಪ ಮಾಡಿದ್ದಾರೆ.
ಮತ್ತೊಬ್ಬ ಮಗಳು ಬ್ಯಾಂಕಿಂಗ್‌ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಪೂಜಾಳ ಶ್ರದ್ಧೆ ಹಾಗೂ ರಮಾಬಾಯಿ ಅವರ ತ್ಯಾಗವನ್ನು ಮೆಚ್ಚಿದ ತರಬೇತಿ ಅಕಾಡೆಮಿಯ ನಿರ್ದೇಶಕರು ಪೂಜಾಳ ತರಬೇತಿ ಶುಲ್ಕವನ್ನು ಸಂಪೂರ್ಣವಾಗಿ ಮನ್ನಾ ಮಾಡಿದ್ದಾರೆ.


ಮಕ್ಕಳ ಭವಿಷ್ಯಕ್ಕಾಗಿ ತಾಯಿ ತನ್ನ ನೋವನ್ನು ಮರೆತು ಬರಿಗಾಲಲ್ಲಿ ಓಡಿದ ಈ ಘಟನೆ, ತಾಯಿಯ ಸಂಕಲ್ಪಕ್ಕೆ ಅಸಾಧ್ಯವೆಂಬುದೇ ಇಲ್ಲ ಎಂಬುದನ್ನು ಮತ್ತೊಮ್ಮೆ ಸಾರಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button