*ಬೆಳಗಾವಿ ಪೊಲೀಸ್ ಕಮೀಷನರ್ ವರ್ಗಾವಣೆ ಸರ್ಕಾರದ ನಿರ್ಧಾರ: ಸತೀಶ್ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರ ಪೊಲೀಸ್ ಆಯುಕ್ತರ ವರ್ಗಾವಣೆ ಕುರಿತು ನಡೆಯುತ್ತಿರುವ ಚರ್ಚೆ ಇದೀಗ ರಾಜಕೀಯ ಬಣ್ಣ ಪಡೆದುಕೊಂಡಿದ್ದು, ಈ ವಿಚಾರವನ್ನು ಮುಖ್ಯಮಂತ್ರಿ ಅವರ ಗಮನಕ್ಕೆ ತಂದು ಚರ್ಚಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಇಂದು ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಗರ ಪೊಲೀಸ್ ಆಯುಕ್ತರು ಅಧಿಕಾರ ವಹಿಸಿಕೊಂಡು ಕೇವಲ 12-13 ತಿಂಗಳು ಮಾತ್ರ ಕಳೆದಿದೆ. ಹೀಗಾಗಿ ಕನಿಷ್ಠ ವಿಧಾನಮಂಡಲ ಅಧಿವೇಶನ ನಡೆಯುವವರೆಗೆ ಆಯುಕ್ತರನ್ನು ಮುಂದುವರಿಸಬೇಕು ಎಂಬ ಬೇಡಿಕೆ ಕೇಳಿಬಂದಿದೆ. ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ತರದೇ ನಿರ್ಧಾರ ಕೈಗೊಳ್ಳಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅಧಿಕಾರಿಗಳ ವರ್ಗಾವಣೆ ಹಾಗೂ ನೇಮಕಾತಿ ಸರ್ಕಾರದ ನಿರ್ಧಾರವಾಗಿದ್ದು, ಈ ಕುರಿತು ಮುಖ್ಯಮಂತ್ರಿ ಅವರೊಂದಿಗೆ ಮಾತನಾಡಿ ಮಾಹಿತಿ ಪಡೆಯುವುದಾಗಿ ಹೇಳಿದರು.
ಜಿಲ್ಲೆಗೆ ಸಂಬಂಧಿಸಿದಂತೆ ಚರ್ಚೆ ನಡೆದಿದ್ದು, ಅಂತಿಮ ನಿರ್ಧಾರ ಸರ್ಕಾರದ್ದಾಗಿದೆ. ಬೆಳಗಾವಿ ನಗರ ಪೊಲೀಸ್ ಆಯುಕ್ತರ ವರ್ಗಾವಣೆ ವಿಚಾರದಲ್ಲಿ ಸರ್ಕಾರದ ನಿರ್ಧಾರವೇ ಅಂತಿಮವಾಗಿದ್ದು, ತಮ್ಮ ಗಮನಕ್ಕೆ ಬಾರದೇ ಯಾವುದೇ ಪ್ರಕ್ರಿಯೆ ನಡೆದಿದೆಯೇ ಎಂಬ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.




