Belagavi NewsBelgaum NewsKarnataka NewsLatest

*ಸಾಮಾಜಿಕ ಸಾಮರಸ್ಯಕ್ಕೆ ರಕ್ಷಾಬಂಧನದ ಸಂದೇಶ: ಸ್ವಚ್ಛತಾ ಮಿತ್ರರಿಗೆ ರಕ್ಷೆ ಕಟ್ಟಿದ ಪ್ರಮುಖರು*

ಪ್ರಗತಿವಾಹಿನಿ ಸುದ್ದಿ:ಬೆಳಗಾವಿ: ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿನದ ಅಂಗವಾಗಿ ಸಾಮಾಜಿಕ ಸಾಮರಸ್ಯದ ಸಂದೇಶ ಸಾರುವ ಉದ್ದೇಶದಿಂದ ವಿಶ್ವ ಹಿಂದೂ ಪರಿಷತ್, ರಾಷ್ಟ್ರೀಯ ಸ್ವಯಂಸೇವಕ ಸಂಘ, ಜೀವನ ವಿದ್ಯಾ ಮಿಷನ್ ಹಾಗೂ ಸಮಾಜದ ಪ್ರಮುಖರ ನೇತೃತ್ವದಲ್ಲಿ ಶುಕ್ರವಾರ ಬೆಳಗ್ಗೆ ರಕ್ಷಾಬಂಧನ ಕಾರ್ಯಕ್ರಮ ಆಯೋಜಿಸಲಾಯಿತು.


ನಗರದ ಶಾಹುನಗರ ಹಾಗೂ ಸದಾಶಿವನಗರ ಪ್ರದೇಶಗಳಲ್ಲಿ ಬೆಳಗ್ಗೆ 6.30ರ ಸುಮಾರಿಗೆ ನಡೆದ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಸ್ವಚ್ಛತಾ ಮಿತ್ರ ಪರಿವಾರದ ಸಹೋದರ–ಸಹೋದರಿಯರಿಗೆ ರಕ್ಷೆ ಕಟ್ಟುವ ಮೂಲಕ ಸಾಮಾಜಿಕ ಸಮಾನತೆ ಮತ್ತು ಸಾಮರಸ್ಯದ ಸಂದೇಶ ನೀಡಲಾಯಿತು.
‘ನಾವೆಲ್ಲರೂ ಬಂಧು–ಬಗಿನಿಯರು; ಯಾರೂ ಮೇಲು–ಕೀಳು ಎಂಬ ಭಾವನೆ ಇಲ್ಲದೆ ಪರಸ್ಪರ ಪ್ರೀತಿ, ಗೌರವದಿಂದ ಬದುಕಬೇಕು’ ಎಂಬ ಆಶಯವನ್ನು ಕಾರ್ಯಕ್ರಮದಲ್ಲಿ ವ್ಯಕ್ತಪಡಿಸಲಾಯಿತು.

Home add -Advt


ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಮುಖರು, ಬಸವಣ್ಣ, ಸಂತ ರವಿದಾಸ, ಕನಕದಾಸ, ಡಾ. ಬಿ.ಆರ್. ಅಂಬೇಡ್ಕರ್, ಸ್ವಾಮಿ ವಿವೇಕಾನಂದ ಹಾಗೂ ಛತ್ರಪತಿ ಶಿವಾಜಿ ಮಹಾರಾಜರು ಕಾಯಕ ಮಾಡುವ ಪ್ರತಿಯೊಬ್ಬರಲ್ಲೂ ಪರಮಾತ್ಮನ ಸ್ವರೂಪವನ್ನು ಕಂಡು ಗೌರವಿಸುವ ಸಂದೇಶ ನೀಡಿದ್ದಾರೆ. ‘ಕಾಯಕವೇ ಕೈಲಾಸ’ ಎಂಬ ತತ್ವದ ಮೂಲಕ ಸಮಾಜದಲ್ಲಿ ದುಡಿಯುವ ವರ್ಗದ ಗೌರವವನ್ನು ಎತ್ತಿಹಿಡಿಯಲಾಗಿದೆ ಎಂದು ಹೇಳಿದರು.


ಪ್ರತಿದಿನ ಬೆಳಗಾಗುವ ಮೊದಲೇ ನಮ್ಮ ಮನೆಗಳ ಕಸವನ್ನು ಸಂಗ್ರಹಿಸಿ, ಮಳೆ–ಚಳಿ ಎನ್ನದೆ ಇಡೀ ನಗರವನ್ನು ಸ್ವಚ್ಛವಾಗಿಡಲು ಶ್ರಮಿಸುವ ಸ್ವಚ್ಛತಾ ಮಿತ್ರರ ಸೇವೆ ಅತ್ಯಂತ ಮಹತ್ವದ್ದಾಗಿದೆ. ಅವರ ಕಾಯಕವನ್ನು ಗೌರವಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ತಿಳಿಸಿದರು.


ಸ್ವಚ್ಛತಾ ಸಿಬ್ಬಂದಿಯನ್ನು ಕೇವಲ ಕೆಲಸಗಾರರೆಂದು ನೋಡದೆ, ನಮ್ಮ ಮನೆಯ ಸದಸ್ಯರಂತೆ ಪ್ರೀತಿ ಮತ್ತು ಗೌರವದಿಂದ ಕಾಣಬೇಕು. ಕುಟುಂಬದ ವಿಶೇಷ ಕಾರ್ಯಕ್ರಮಗಳಿಗೆ ಅವರನ್ನು ಆಹ್ವಾನಿಸಿ, ಅವರೊಂದಿಗೆ ಸಂತೋಷ ಹಂಚಿಕೊಳ್ಳಬೇಕು ಎಂಬ ಸಂದೇಶವನ್ನು ರಕ್ಷಾಬಂಧನದ ಮೂಲಕ ನೀಡಲಾಯಿತು.
ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ವಿಶ್ವ ಹಿಂದೂ ಪರಿಷತ್ ಸಮಾಜದ ವಿವಿಧ ವರ್ಗಗಳ ಜನರನ್ನು ಒಗ್ಗೂಡಿಸುವ ಮತ್ತು ಸಾಮಾಜಿಕ ಸಾಮರಸ್ಯ ಬೆಳೆಸುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿವೆ. ಇದೇ ಆಶಯದೊಂದಿಗೆ ಸಮಾಜದ ಪ್ರಮುಖರು ಒಂದು ಹೆಜ್ಜೆ ಮುಂದೆ ಬಂದು ಶಾಹುನಗರ ಹಾಗೂ ಸದಾಶಿವನಗರದ ಸ್ವಚ್ಛತಾ ಮಿತ್ರ ಪರಿವಾರದವರಿಗೆ ರಕ್ಷೆ ಕಟ್ಟಿದರು. ‘ನಾವು ನಿಮ್ಮೊಂದಿಗೆ ಇದ್ದೇವೆ’ ಎಂಬ ಭರವಸೆಯೊಂದಿಗೆ ನಡೆದ ಈ ಕಾರ್ಯಕ್ರಮ ರಕ್ಷಾಬಂಧನದ ಸಂಭ್ರಮಕ್ಕೆ ವಿಶೇಷ ಅರ್ಥ ನೀಡಿತು.


ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ಪ್ರಮುಖರಾದ ಕೃಷ್ಣ ಭಟ್, ಪ್ರಾಂತ ಉಪಾಧ್ಯಕ್ಷ ಶ್ರೀಕಾಂತ ಕದಮ್, ಜಿಲ್ಲಾ ಉಪಾಧ್ಯಕ್ಷ ಮುನಿಸ್ವಾಮಿ ಭಂಡಾರಿ, ಮಾಜಿ ಉಪಮೇಯರ್ ರೇಷ್ಮಾ ಪಾಟೀಲ, ಜೀವನ ವಿದ್ಯಾ ಮಿಷನ್ ಸಂಚಾಲಕ ಶಂಕರ ಬಾಂದೇಕರ್, ಡಾ. ಸುಭಾಷ ಪಾಟೀಲ, ಪಂಕಜಾ ಭಟ್, ಆನಂದ ಕರಲಿಂಗಣ್ಣವರ್ ಸೇರಿದಂತೆ ಸಮಾಜದ ಹಲವು ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Related Articles

Back to top button