Kannada NewsKarnataka NewsLatest

*ನೇಪಾಳ ಪ್ರವಾಹ: ನಾಪತ್ತೆಯಾದ ಕನ್ನಡಿಗರ ಡಿಎನ್ಎ ಸಂಗ್ರಹಕ್ಕೆ ಬೌರಿಂಗ್ ಆಸ್ಪತ್ರೆ ನೋಡಲ್ ಕೇಂದ್ರವಾಗಿ ಆಯ್ಕೆ*

ಪ್ರಗತಿವಾಹಿನಿ ಸುದ್ದಿ: ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ನೂರಾರು ಕನ್ನಡಿಗರು ನಾಪತ್ತೆಯಾಗಿದ್ದು, ಕಾಣೆಯಾದ ಕನ್ನಡಿಗರ ಡಿಎನ್‌ಎ ಮಾದರಿ ಸಂಗ್ರಹಕ್ಕೆ ಬೆಂಗಳೂರಿನ ಬೌರಿಂಗ್ ಆಸ್ಪತ್ರೆ ನೋಡಲ್ ಕೇಂದ್ರವಾಗಿ ಆಯ್ಕೆಯಾಗಿದೆ.

ನೇಪಾಳದಲ್ಲಿ ನಾಪತ್ತೆಯಾದ ಕರ್ನಾಟಕದ ಸಂತ್ರಸ್ತರ ಪ್ರಥಮ ಹಂತದ ರಕ್ತಸಂಬಂಧಿಗಳ ಗುರುತು ಪತ್ತೆ ಹಚ್ಚಲು ಮತ್ತು ಡಿಎನ್‌ಎ (DNA) ಮಾದರಿ ಸಂಗ್ರಹಕ್ಕಾಗಿ ಬೆಂಗಳೂರಿನ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯನ್ನು ‘ನೋಡಲ್ ಕೇಂದ್ರ’ವನ್ನಾಗಿ ನಿಯೋಜಿಸಲಾಗಿದೆ. ಈ ಕುರಿತು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (KSDMA) ಮತ್ತು ಕಂದಾಯ ಇಲಾಖೆ ಆದೇಶ ಹೊರಡಿಸಿದೆ.

Home add -Advt

​ನೇಪಾಳದಲ್ಲಿ ಪತ್ತೆಯಾಗಿರುವ ಮೃತದೇಹಗಳ ಗುರುತು ಪತ್ತೆಹಚ್ಚಲು ಮತ್ತು ಅವುಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲು ನೇಪಾಳ ಸರ್ಕಾರ ಹಾಗೂ ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸೂಚನೆ ನೀಡಿದೆ.

ನೇಪಾಳದಲ್ಲಿ ಸದ್ಯ ಫೋಟೋ ಹಾಗೂ ಇತರ ವಿವರಗಳಿಂದ ಗುರುತು ಹಿಡಿಯಲಾಗದ ಮೃತದೇಹಗಳ ಡಿಎನ್‌ಎ ಪ್ರೊಫೈಲ್ ತಯಾರಿಸಲಾಗುತ್ತಿದ್ದು, ಅದನ್ನು ಪರಿಶೀಲಿಸಲು ಸಂತ್ರಸ್ತರ ರಕ್ತಸಂಬಂಧಿಗಳ ಡಿಎನ್‌ಎ ಮಾದರಿಯ ಅಗತ್ಯವಿದೆ.

ಡಿಎನ್‌ಎ ಮಾದರಿ ಸಂಗ್ರಹ ಮತ್ತು ಸಂಬಂಧಿಕರ ಪರಿಶೀಲನೆಗಾಗಿ ಬೌರಿಂಗ್ ಹಾಗೂ ಲೇಡಿ ಕರ್ಜನ್ ಆಸ್ಪತ್ರೆಯಲ್ಲಿ ​ಡಾ. ನಾಗೇಶ್ ಕುಪ್ಪಸ್ಟ್‌ (ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥರು) ಮೊಬೈಲ್ ಸಂ. 9742707500 ಮತ್ತು ಡಾ. ವಾಡಿರಾಜ್ ಬಿ. ಪೊಕ್ಕನ್ (ಆರ್.ಎಮ್.ಒ) – ಮೊಬೈಲ್ ಸಂ. 94484086 ಅವರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ.

ನೇಪಾಳದಲ್ಲಿ ಕಾಣೆಯಾದವರ ಪ್ರಥಮ ಹಂತದ ಸಂಬಂಧಿಕರು (ತಂದೆ, ತಾಯಿ, ಮಗ, ಮಗಳು ಅಥವಾ ಸಂಗಾತಿ) ಡಿಎನ್‌ಎ ಪರೀಕ್ಷೆಗೆ ಆಗಮಿಸುವಾಗ ತಮ್ಮ ಇತ್ತೀಚಿನ ಒಂದು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಸರ್ಕಾರದಿಂದ ನೀಡಲಾದ ಗುರುತಿನ ಚೀಟಿ (ಉದಾಹರಣೆಗೆ ಆಧಾರ್ ಕಾರ್ಡ್) ಹಾಗೂ ಸಂಬಂಧವನ್ನು ಸಾಬೀತುಪಡಿಸುವ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು.

ಜಿಲ್ಲಾಡಳಿತ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ ಪರಿಶೀಲಿಸಲ್ಪಟ್ಟ ನಂತರ ಈ ಮಾದರಿಗಳನ್ನು ರಾಜ್ಯ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ, ನಂತರ ನೇಪಾಳದ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಲಾಗುತ್ತದೆ. ಕಾಣೆಯಾದವರ ಬಗ್ಗೆ ಮಾಹಿತಿ ನೀಡಲು ಅಥವಾ ನೆರವು ಪಡೆಯಲು ಕೆಎಸ್‌ಡಿಎಮ್‌ಎ ಹೆಲ್ಪ್‌ಲೈನ್ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ನೇಪಾಳದಲ್ಲಿ ಸಂಭವಿಸಿದ ಪ್ರವಾಹದಲ್ಲಿ ಸಾವನ್ನಪ್ಪಿದವರ ಸಂಖ್ಯೆ 1,295ಕ್ಕೆ ಏರಿದೆ. 32,000ಕ್ಕೂ ಹೆಚ್ಚು ಜನರು ತೊಂದರೆಗೊಳಗಾಗಿದ್ದು, ರಸ್ತೆಗಳು, ಸೇತುವೆಗಳು, ಶಾಲೆಗಳು ಮತ್ತು ಆರೋಗ್ಯ ಸೌಲಭ್ಯಗಳು ಹಾನಿಗೊಳಗಾಗಿವೆ. 5 ಸಾವ್ರಕ್ಕೂ ಹೆಚ್ಚು ಜನರು ಕಣ್ಮರೆಯಾಗಿದ್ದಾರೆ.

Related Articles

Back to top button