
ಪ್ರಗತಿವಾಹಿನಿ ಸುದ್ದಿ: ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ನೇಮಕಾತಿ ಅಕ್ರಮ ಆರೋಪಕ್ಕೆ ಸಂಬಂಧಪಟ್ಟಂತೆ ಸಂಸ್ಥೆಯ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಗೆ ಬಿಗ್ ಶಾಕ್ ಎದುರಾಗಿದೆ.
ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ ಆದೇಶಿಸಿದೆ. ಈ ಆದೇಶದಿಂದ ಶಿವಶಂಕರಪ್ಪಗೆ ಬಂಧನ ಭೀತಿ ಎದುರಾಗಿದೆ.
ಕೆಪಿಎಸ್ಸಿ ನೇಮಕಾತಿ ಅಕ್ರಮ ಆರೋಪ ಸಂಬಂಧ ಬಂಧನ ಭೀತಿಯಲ್ಲಿದ್ದು ಶಿವಶಂಕರಪ್ಪ ಸಾಅಹುಕಾರ್ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರ ಏಕಸದಸ್ಯ ಪೀಠ ನಡೆಸಿತು. ಅಲ್ಲದೇ, ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.
ನೀಟ್ ಪರೀಕ್ಷೆಯಲ್ಲಿ ನಡೆದಿದ್ದ ಅಕ್ರಮದಿಂದ ಕೆಲ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂತಹ ಕೃತ್ಯಗಳಿಂದಾಗಿಯೇ ದೇಶದಲ್ಲಿ ಇತ್ತೀಚೆಗೆ ಭಾರಿ ಪ್ರತಿಭಟನೆ ನಡೆದಿದೆ. ಹೀಗಾದಲ್ಲಿ ರಾತ್ರಿ ಹಗಲು ಕುಳಿತು ಪರೀಕ್ಷೆಗಳಿಗಾಗಿ ಓದಿದವರ ಕತೆ ಏನಾಗಬೇಕು ಎಂದು ಪ್ರಶ್ನಿಸಿತು. ಅಲ್ಲದೇ, ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಗಳು ಕೆಪಿಎಸ್ಸಿ ಮೇಲಿನ ವಿಶ್ವಾಸ ಕಳೆದುಕೊಳ್ಳುವಂತಾಗಿದೆ ಎಂದು ತಿಳಿಸಿತು.
ಅಷ್ಟೇ ಅಲ್ಲದೆ ಅರ್ಜಿದಾರರ ಕುಟುಂಬಸ್ಥರೇ ಅಕ್ರಮದಲ್ಲಿ ಭಾಗಿಯಾಗಿರುವ ಆರೋಪವಿದೆ. ಇದೊಂದು ವ್ಯವಸ್ಥಿತ ವಂಚನೆಯಾಗಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ ಅರ್ಜಿಯನ್ನು ವಜಾಗೊಳಿಸಿದೆ.
ಅರ್ಜಿ ಸಂಬಂಧ ಈ ಹಿಂದೆ ನಡೆದ ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ಮುಚ್ಚಿದ ಲಕೋಟೆಯಲ್ಲಿ ಕೆಲವು ದಾಖಲೆಗಳನ್ನು ಸಲ್ಲಿಸಿದರು. ಇದನ್ನು ಪರಿಶೀಲಿಸಿದ ಪೀಠ, ಈ ದುಷ್ಕೃತ್ಯದಲ್ಲಿ ನಿಮ್ಮ ಪಾತ್ರವೂ ಪತ್ತೆಯಾಗಿದೆ. ಸರ್ಕಾರವು ಒಂದಷ್ಟು ದಾಖಲೆ ನೀಡಿದೆ. ನಿಮ್ಮ ಪುತ್ರಿಯ ನೇಮಕಾತಿಗೆ ಸಂಬಂಧಿಸಿದ ವಾಸ್ತವಿಕ ವಿಚಾರವನ್ನು ನೀವು ಮರೆಮಾಚಿದ್ದೀರಿ. ಮುಚ್ಚಿದ ಲಕೋಟೆಯಲ್ಲಿನ ಅಂಶಗಳು ಗೌಪ್ಯ ವಿಚಾರಗಳಾಗಿದ್ದು, ನಿಮಗೆ ಅದನ್ನು ಬಹಿರಂಗಪಡಿಸಲಾಗದು ಎಂದು ಪೀಠ ತಿಳಿಸಿತು.




