Kannada NewsKarnataka News

*ಪ್ರೀತಿಸಿ ಯುವತಿಗೆ ಕೈಕೊಟ್ಟಿದ್ದ ಯುವಕನಿಗೆ ಮದುವೆ ಮಾಡಿಸಿದ ಪೊಲೀಸರು*

ಪ್ರಗತಿವಾಹಿನಿ ಸುದ್ದಿ: ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ಮಗು ಹುಟ್ಟಿದ ಬಳಿಕ ಆಕೆಯನ್ನು ತೊರೆದು ವಂಚಿಸಲು ಯತ್ನಿಸಿದ್ದ ಯುವಕನಿಗೆ ಪೊಲೀಸರೆ ಮುಂದೆ ನಿಂತು ಮದುವೆ ಮಾಡಿಸಿರುವ ಘಟನೆ ನಡೆದಿದೆ.

ಹಾಸನ ಜಿಲ್ಲೆಯ ಬೀರಕನಹಳ್ಳಿ ಗ್ರಾಮದ ರಾಜು ಮತ್ತು ನಿಲುವಾಗಿಲು ಗ್ರಾಮದ ಅನ್ನಪೂರ್ಣ ನಡುವೆ ಪ್ರೀತಿ ಇತ್ತು. ಒಂದು ವರ್ಷದಿಂದ ಇಬ್ಬರೂ ಒಟ್ಟಿಗಿದ್ದರು. ಮದುವೆಯಾಗುವುದಾಗಿ ರಾಜು ಅನ್ನಪೂರ್ಣಗೆ ಭರವಸೆ ನೀಡಿದ್ದ. ಈ ನಡುವೆ ಅನ್ನಪೂರ್ಣ ಗರ್ಭಿಣಿಯಾಗಿ ಒಂದು ಮಗುವಿಗೆ ಜನ್ಮ ನೀಡಿದ್ದಾಳೆ. ಮಗು ಜನಿಸಿದ ಬಳಿಕ ರಾಜು ಪ್ರಿಯತಮೆ ಹಾಗೂ ಮಗುವನ್ನು ಬಿಟ್ಟು ತಲೆಮರೆಸಿಕೊಂಡಿದ್ದ.

ಯುವಕನ ಈ ಕೃತ್ಯದಿಂದ ನ್ಯಾಯ ವಂಚಿತಳಾಗಿದ್ದ ಯುವತಿಯ ಪರವಾಗಿ ಪೊಲೀಸರು ಮತ್ತು ಡಿಎಸ್‌ಎಸ್‌ ಮುಖಂಡರು ಮಧ್ಯಪ್ರವೇಶಿಸಿದ್ದಾರೆ.  ರಾಜುವನ್ನು ಪತ್ತೆ ಹಚ್ಚಿ ಆತನಿಗೆ ಮನವೊಲಿಸಿ ಬುದ್ಧಿವಾದ ಹೇಳಿದ್ದಾರೆ. 

ತಮಗೆ ಆದ ಅನ್ಯಾಯದ ವಿರುದ್ಧ ನೊಂದ ಯುವತಿ ಹಾಗೂ ಆಕೆಯ ಕುಟುಂಬಸ್ಥರು ಹಾಸನ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ತಕ್ಷಣವೇ ಯುವಕ ಹಾಗೂ ಆತನ ಕುಟುಂಬಸ್ಥರನ್ನು ಠಾಣೆಗೆ ಕರೆಸಿ ಕೌನ್ಸೆಲಿಂಗ್ ನಡೆಸಿ, ಕಾನೂನಿನ ಪರಿಣಾಮಗಳ ಕುರಿತು ಎಚ್ಚರಿಕೆ ನೀಡಿದರು.

ಪೊಲೀಸರ ಸಮಾಲೋಚನೆ ಹಾಗೂ ಮಧ್ಯಸ್ಥಿಕೆಯಿಂದ ಮನವೊಲಿದ ಯುವಕ ತನ್ನ ತಪ್ಪಿನ ಅರಿವು ಮಾಡಿಕೊಂಡು ಮದುವೆಯಾಗಲು ಒಪ್ಪಿಕೊಂಡಿದ್ದಾನೆ. ಬಳಿಕ ಎರಡೂ ಕುಟುಂಬಗಳ ಸಮ್ಮುಖದಲ್ಲಿ ಯುವಕ-ಯುವತಿಯ ಮದುವೆ ನೆರವೇರಿಸಲಾಗಿದ್ದು, ತಾಯಿ-ಮಗುವಿನ ಬಾಳಿಗೆ ಹೊಸ ಬೆಳಕು ನೀಡಿದ ಪೊಲೀಸರ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button