*ಮೊಬೈಲ್, ಟಿವಿಗೆ ಸಮಯ ವ್ಯರ್ಥ ಮಾಡದೆ ಜ್ಞಾನಾರ್ಜನೆಗೆ ಆದ್ಯತೆ ನೀಡಿ: ವಿದ್ಯಾರ್ಥಿಗಳಿಗೆ ಲಕ್ಷ್ಮೀ ಹೆಬ್ಬಾಳಕರ್ ಕರೆ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ವಿದ್ಯಾರ್ಥಿಗಳು ಜೀವನದಲ್ಲಿ ಸ್ಪಷ್ಟವಾದ ಗುರಿ ಇಟ್ಟುಕೊಂಡು, ಅದನ್ನು ಸಾಧಿಸುವ ನಿಟ್ಟಿನಲ್ಲಿ ನಿರಂತರವಾಗಿ ಪ್ರಯತ್ನಿಸಬೇಕು. ವಿದ್ಯಾರ್ಥಿ ಜೀವನ ಅತ್ಯಂತ ಅಮೂಲ್ಯವಾದ ಘಟ್ಟವಾಗಿದ್ದು, ಈ ಸಮಯವನ್ನು ವ್ಯರ್ಥ ಮಾಡಿಕೊಳ್ಳದೆ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಮಾಜಿ ಸಚಿವೆ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಕರೆ ನೀಡಿದರು.
ಬೆಳಗಾವಿಯ ಶಿವಬಸವ ನಗರದ ಕೆಪಿಟಿಸಿಎಲ್ ಸಮುದಾಯ ಭವನದಲ್ಲಿ ನಡೆದ “ಶ್ರೀರಾಮ್ ಸೇವಾ ಸಂಕಲ್ಪ” ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಿ ಅವರು ಮಾತನಾಡಿದರು.

ಶ್ರಮಿಕರು ಹಾಗೂ ಸಾಮಾನ್ಯ ಜನರಿಗೆ ಹಣಕಾಸಿನ ನೆರವು ಒದಗಿಸುವ ಉದ್ದೇಶದಿಂದ ಶ್ರೀರಾಮ್ ಫೈನಾನ್ಸ್ ಆರಂಭಗೊಂಡಿದ್ದು, ಒಳ್ಳೆಯ ಉದ್ದೇಶದಿಂದ ಬಿತ್ತಿದ ಬೀಜ ಇಂದು ಹೆಮ್ಮರವಾಗಿ ಬೆಳೆದಿದೆ. ಸಂಸ್ಥೆಯ ಸ್ಥಾಪಕ ತ್ಯಾಗರಾಜನ್ ಅವರ ದೂರದೃಷ್ಟಿ ಹಾಗೂ ಸೇವಾ ಮನೋಭಾವದಿಂದ ಶ್ರೀರಾಮ್ ಫೈನಾನ್ಸ್ ಈ ಮಟ್ಟಕ್ಕೆ ಬೆಳೆದಿದೆ. ಅವರ ಮಹತ್ವದ ಕೊಡುಗೆ ಮತ್ತು ಸೇವೆಯನ್ನು ಗುರುತಿಸಿ ದೇಶದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾದ ಪದ್ಮ ವಿಭೂಷಣ ಪ್ರಶಸ್ತಿ ದೊರೆತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಇಂದಿನ ಸಂದರ್ಭದಲ್ಲಿ ಸಾಮಾಜಿಕ ಬದ್ಧತೆ ಹಾಗೂ ಕಾಳಜಿಯಿಂದ ಕೆಲಸ ಮಾಡುವವರು ಕಡಿಮೆ. ಆದರೆ ಶ್ರೀರಾಮ್ ಫೈನಾನ್ಸ್ ತನ್ನ ಸಾಮಾಜಿಕ ಜವಾಬ್ದಾರಿಯನ್ನು ಅರಿತುಕೊಂಡು ಬದ್ಧತೆಯಿಂದ ಸೇವಾ ಕಾರ್ಯಗಳನ್ನು ನಡೆಸುತ್ತಿರುವುದು ಶ್ಲಾಘನೀಯ ಎಂದು ಹೆಬ್ಬಾಳಕರ್ ಮೆಚ್ಚುಗೆ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳು ತಮ್ಮ ತಂದೆ-ತಾಯಿಯ ಕನಸುಗಳನ್ನು ನನಸು ಮಾಡುವ ಸಂಕಲ್ಪ ಮಾಡಬೇಕು. ಮಕ್ಕಳು ಯಶಸ್ವಿಯಾಗಬೇಕು, ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ತಂದೆ-ತಾಯಿಗಳು ದೇವರಲ್ಲಿ ಪ್ರಾರ್ಥಿಸುತ್ತಾರೆ. ಅವರ ತ್ಯಾಗ ಹಾಗೂ ಪರಿಶ್ರಮವನ್ನು ಸದಾ ಸ್ಮರಿಸಿಕೊಂಡು, ಜೀವನದಲ್ಲಿ ಯಶಸ್ಸು ಸಾಧಿಸುವ ಮೂಲಕ ಅವರ ಕನಸು ನನಸು ಮಾಡಬೇಕು ಎಂದರು.

“ನಾನೂ ವಿದ್ಯಾರ್ಥಿಯಾಗಿದ್ದಾಗ ಹಿರಿಯರ ಮಾತುಗಳನ್ನು ಕೇಳಿಕೊಂಡು, ಅವರ ಮಾರ್ಗದರ್ಶನದಲ್ಲಿ ಮುನ್ನಡೆದಿದ್ದೇನೆ. ಇಂದು ಈ ಹಂತಕ್ಕೆ ಬರಲು ಅವರ ಆಶೀರ್ವಾದ ಹಾಗೂ ಮಾರ್ಗದರ್ಶನವೂ ಕಾರಣವಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಹಿರಿಯರ ಸಲಹೆಗಳನ್ನು ಗೌರವಿಸಿ, ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು” ಎಂದು ಹೇಳಿದರು.
ಇಂದಿನ ಎಐ ಯುಗದಲ್ಲಿ ಜಗತ್ತು ವೇಗವಾಗಿ ಬದಲಾಗುತ್ತಿದೆ. ವಿದ್ಯಾರ್ಥಿಗಳು ಹೊಸ ತಂತ್ರಜ್ಞಾನ ಹಾಗೂ ಜ್ಞಾನವನ್ನು ನಿರಂತರವಾಗಿ ಕಲಿತು ತಮ್ಮನ್ನು ತಾವು ‘ಅಪ್ಡೇಟ್’ ಮಾಡಿಕೊಳ್ಳಬೇಕು. ಟಿವಿ ಹಾಗೂ ಮೊಬೈಲ್ ಮುಂದೆ ಅನಗತ್ಯವಾಗಿ ಸಮಯ ಕಳೆಯದೆ, ಪುಸ್ತಕ ಓದುವ ಮತ್ತು ಜ್ಞಾನ ಸಂಪಾದಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜೀವನದಲ್ಲಿ ಸಾಧನೆ ಮಾಡಿದವರೆಲ್ಲರೂ ಹುಟ್ಟುತ್ತಲೇ ಶ್ರೀಮಂತರಾಗಿರಲಿಲ್ಲ. ಬಹುತೇಕರು ಕಷ್ಟಪಟ್ಟು, ಹಲವು ಸವಾಲುಗಳನ್ನು ಎದುರಿಸಿ ತಮ್ಮದೇ ಆದ ಸ್ಥಾನವನ್ನು ಗಳಿಸಿದ್ದಾರೆ. ಪ್ರಯತ್ನಿಸುವಾಗ ಸೋಲು ಎದುರಾದರೂ ಧೃತಿಗೆಡಬಾರದು. ಸೋಲಿನಿಂದ ಪಾಠ ಕಲಿತು ಮತ್ತೆ ಪ್ರಯತ್ನಿಸಬೇಕು. ಜೀವನವನ್ನು ಗಂಭೀರವಾಗಿ ಪರಿಗಣಿಸಿ, ಶಿಸ್ತು ಮತ್ತು ಪರಿಶ್ರಮದೊಂದಿಗೆ ಗುರಿಯತ್ತ ಸಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಮೊಬೈಲ್ ಬಿಟ್ಟು ಪುಸ್ತಕ ಹಿಡಿಯಿರಿ: ರವಿ ಭಜಂತ್ರಿ
ಬೆಳಗಾವಿ ಕ್ಷೇತ್ರ ಶಿಕ್ಷಣಾಧಿಕಾರಿ ರವಿ ಭಜಂತ್ರಿ ಮಾತನಾಡಿ, “ಸಿರಿತನ ಬದುಕನ್ನು ಬದಲಿಸುತ್ತದೆ, ಬಡತನ ಬದುಕಲು ಕಲಿಸುತ್ತದೆ” ಎಂಬ ಮಾತನ್ನು ಉಲ್ಲೇಖಿಸಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮುನ್ನಡೆಯಬೇಕು ಎಂದರು.
ತಂದೆ-ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವ ಗುಣವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ ಪುಸ್ತಕ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಆಟದ ಮೈದಾನಕ್ಕೆ ತೆರಳಿ ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕು. ಮೊಬೈಲ್ಗೆ ಅತಿಯಾದ ಸಮಯ ನೀಡುವುದರಿಂದ ವಿದ್ಯಾರ್ಥಿಗಳ ಅಮೂಲ್ಯ ಸಮಯ ವ್ಯರ್ಥವಾಗುತ್ತದೆ ಎಂದು ಎಚ್ಚರಿಸಿದರು.

ಕಾರಂಜಿಮಠದ ಶ್ರೀ ಗುರುಸಿದ್ಧ ಮಹಾಸ್ವಾಮಿಗಳು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಕಾಡಾ ಅಧ್ಯಕ್ಷ ಯುವರಾಜ ಕದಂ, ಉಚಗಾಂವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಳು ದೇಸೂರಕರ್, ವಕೀಲ ಸಂಜಯ್ ಕುಚನೂರೆ, ಶ್ರೀರಾಮ್ ಫೈನಾನ್ಸ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಶ್ರೀಧರ್ ಮಠ್, ಜೋನಲ್ ಹೆಡ್ ರಾಮಲಿಂಗೇಗೌಡ, ಎಚ್ಆರ್ ಹೆಡ್ ಉದಯ ಚನ್ನವರ್, ವಿಜಯಕುಮಾರ್ ಪಿ.ಜಿ., ಶಿವಾನಂದ ಸವದತ್ತಿ, ಆದಿತ್ಯ ಕೆ.ಎ., ಈರಣ್ಣ ದಾಡಿಭಾವಿ, ವಿನಯ ಚನ್ನವರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.




