*ಗೂಡ್ಸ್ ವಾಹನದಲ್ಲಿ ಕದ್ದುಮುಚ್ಚಿ ಸಾಗಿಸುತ್ತಿದ್ದ 400 ಲೀಟರ್ ಗೋವಾ ಮದ್ಯ ವಶ*

ಪ್ರಗತಿವಾಹಿನಿ ಸುದ್ದಿ: ಖಾನಾಪುರ: ಅಬಕಾರಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಖಚಿತ ಮಾಹಿತಿ ಮೇರೆಗೆ ನಡೆಸಿದ ಕಾರ್ಯಾಚರಣೆಯಲ್ಲಿ ಗೂಡ್ಸ್ ವಾಹನದಲ್ಲಿ ಕದ್ದುಮುಚ್ಚಿ ಸಾಗಿಸುತ್ತಿದ್ದ 400 ಲೀಟರ್ ಗೋವಾ ಮದ್ಯವನ್ನು ವಾಹನ ಸಮೇತ ವಶಕ್ಕೆ ಪಡೆದು ಇಬ್ಬರನ್ನು ಬಂಧಿಸಿದ ಘಟನೆ ಗುರುವಾರ ತಾಲ್ಲೂಕಿನ ಕಣಕುಂಬಿ ಬಳಿ ಕರ್ನಾಟಕ ಗೋವಾ ಗಡಿಯಲ್ಲಿ ವರದಿಯಾಗಿದೆ.
ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆ ಸಂದರ್ಭದಲ್ಲಿ ಕಣಕುಂಬಿ ತನಿಖಾ ಠಾಣೆಯ ಹತ್ತಿರ ಗೋವಾದಿಂದ ಬೆಳಗಾವಿಗೆ ಬರುತ್ತಿದ್ದ ಭಾರತ ಬೆಂಜ್ ಆರು ಚಕ್ರದ ಗೂಡ್ಸ್ ವಾಹನದ ಹಿಂಭಾಗದಲ್ಲಿ ಪಾರ್ಟಿಷನ್ ಮಾಡಿ ಅಪಾರ ಪ್ರಮಾಣದ ಮದ್ಯವನ್ನು ಅಡಗಿಸಿಟ್ಟಿದ್ದು ಪತ್ತೆಯಾಗಿದೆ. ಈ ಘಟನೆಗೆ ಕಾರಣರಾದ ಯರಗಟ್ಟಿ ತಾಲ್ಲೂಕಿನ ಮಾಡಮಗೇರಿಯ ಸಿದ್ದಪ್ಪ ಮಾರುತಿ ಬೆಳ್ಳಿಕುಂಪಿ ಮತ್ತು ಸವದತ್ತಿ ತಾಲ್ಲೂಕು ಕಡಬಿ ಗ್ರಾಮದ ಮಂಜುನಾಥ ಹನಮಂತಪ್ಪ ದೇಸಾಯಿ ಅವರನ್ನು ಮಾಲು ಸಮೇತ ವಶಕ್ಕೆ ಪಡೆದಿದ್ದು, ಇವರ ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆ 1965ರ ಅನ್ವಯ ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.
ವಶಕ್ಕೆ ಪಡೆದ ಮದ್ಯ ಹಾಗೂ ವಾಹನದ ಅಂದಾಜು ಮೌಲ್ಯ ರೂ. 10 ಲಕ್ಷ 40 ಸಾವಿರರಷ್ಟಿದೆ ಎಂದು ಹೇಳಲಾಗಿದ್ದು, ಖಾನಾಪುರದ ಅಬಕಾರಿ ನಿರೀಕ್ಷಕ ಮಲ್ಲೇಶಿ ಉಪ್ಪಾರ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅಬಕಾರಿ ಸಬ್ ಇನ್ಸಪೆಕ್ಟರ್ ಗಳಾದ ನೂರುಲ್ಲಾ ಖಾನ್, ಬಾಳಗೌಡ ಪಾಟೀಲ ಹಾಗೂ ಸಿಬ್ಬಂದಿ ಗುಂಡು ಪೂಜೇರಿ, ಬಸವರಾಜ ವಿವೇಕಿ, ಪ್ರಕಾಶ್ ನಂದಿಯವರ ಹಾಗೂ ಗೃಹ ರಕ್ಷಕದವರು ಭಾಗವಹಿಸಿದ್ದರು. ಖಾನಾಪುರ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




