*ಮುಂದುವರೆದ ಸಚಿವ ಸತೀಶ್ ಜಾರಕಿಹೊಳಿ ಮತ್ತು ಆಪ್ತರ ಮೇಲಿನ ಇಡಿ ದಾಳಿ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಮತ್ತು ಅವರ ಆಪ್ತರ ಮೇಲಿನ ಜಾರಿ ನಿರ್ದೇಶನಾಲಯ ಅಧಿಕಾರಿಗಳ ದಾಳಿ ಪ್ರಕರಣದಲ್ಲಿ ಇಂದು ಶೋಧ ಕಾರ್ಯ ಮುಂದುವರಿದಿದೆ.
ಗೋಕಾಕಿನ ಸಚಿವ ಸತೀಶ ಜಾರಕಿಹೊಳಿ ನಿವಾಸ, ಬಾಮೈದ ಅಬಕಾರಿ ಇಲಾಖೆ ಅಪರ ಆಯುಕ್ತ ಡಾ. ವೈ. ಮಂಜುನಾಥ ಬೆಳಗಾವಿ ನಿವಾಸ, ಸತೀಶ ಜಾರಕಿಹೊಳಿ ಆಪ್ತ ಡಾ. ಗಿರೀಶ್ ಸೋನವಾಲ್ಕರ್ ಮನೆಯಲ್ಲಿ ಇಡಿ ಅಧಿಕಾರಿಗಳು ನಿನ್ನೆ ಬೆಳಿಗ್ಗೆಯಿಂದ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದರು. ಅದು ಇಂದು ಕೂಡ ಮುಂದುವರಿದಿದೆ. ಅದೇರೀತಿ ಡಾ.ವೈ. ಮಂಜುನಾಥ ಆಪ್ತ ಸಹಾಯಕಿ ಪ್ರೀತಿ ಕಾಕತ್ಕರ್ ಅವರ ಮನೆ ಮೇಲೂ ದಾಳಿ ಮಾಡಲಾಗಿದೆ. ಹಣಕಾಸು ವಹಿವಾಟಿನ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.
ಸತೀಶ ಜಾರಕಿಹೊಳಿ ಅವರ ಆಪ್ತರಾದ ವಿಠ್ಠಲ ಪರಸನ್ನವರ, ರಾಜು ಧರಗಶೆಟ್ಟಿ, ಮಲಗೌಡ ಪಾಟೀಲ ನಿವಾಸದ ಮೇಲಿನ ಇಡಿ ದಾಳಿ ಮುಕ್ತಾಯವಾಗಿದ್ದು, ಇಲ್ಲಿ ಸತೀಶ ಅವರಿಗೆ ಸಂಬಂಧಿಸಿದ ಯಾವೆಲ್ಲಾ ದಾಖಲೆಗಳು ಸಿಕ್ಕಿವೆ ಎಂಬುದು ಇಡಿ ಅಧಿಕಾರಿಗಳಿಂದಲೇ ಗೊತ್ತಾಗಬೇಕಿದೆ.
ಕಳೆದ 28 ಗಂಟೆಗಳಿಂದ ಇಡಿ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದು, ನಿನ್ನೆ ರಾಜ್ಯಾದ್ಯಂತ ಬೆಂಗಳೂರು, ಬೆಳಗಾವಿ, ಗೋಕಾಕ್ ಸೇರಿ ಒಟ್ಟು 18 ಕಡೆ ಏಕಕಾಲಕ್ಕೆ ದಾಳಿ ನಡೆಸಲಾಗಿತ್ತು. ದಾಳಿ ಮುಂದುವರಿದಿದ್ದು, ಸದ್ಯ ಸತೀಶ ಜಾರಕಿಹೊಳಿ ಬೆಂಗಳೂರಿನಲ್ಲಿದ್ದಾರೆ. ಗೋಕಾಕಿನಲ್ಲಿ ಅವರ ಪತ್ನಿ ಶಕುಂತಲಾ, ಪುತ್ರಿ ಪ್ರಿಯಾಂಕಾ ಜಾರಕಿಹೊಳಿ, ಪುತ್ರ ರಾಹುಲ್ ಜಾರಕಿಹೊಳಿ ಅವರಿಂದ ಇಡಿ ಅಧಿಕಾರಿಗಳ ತಂಡ ಮಾಹಿತಿ ಕಲೆ ಹಾಕುತ್ತಿದೆ. ಅರೆಸೇನಾ ಪಡೆ ಭದ್ರತೆಯಲ್ಲಿ ದಾಖಲೆಗಳ ಪರಿಶೀಲನೆ ಮಾಡಲಾಗುತ್ತಿದೆ.
ಬೆಳಗಾವಿ ಟಿವ್ಹಿ ಸೆಂಟರ್ ನಲ್ಲಿರುವ ಡಾ.ವೈ. ಮಂಜುನಾಥ ಮನೆಯಿಂದ 28 ಗಂಟೆಯ ಬಳಿಕ ಇಡಿ ಅಧಿಕಾರಿಗಳು ಹೊರಗೆ ಬಂದಿದ್ದಾರೆ. ಮುಖಕ್ಕೆ ಮಾಸ್ಕ್ ಧರಿಸಿ ಹೊರ ಬಂದಿದ್ದು, ಮತ್ತೊಂದು ತಂಡದಿಂದ ಪರಿಶೀಲನೆ ಕಾರ್ಯ ಮುಂದುವರಿದಿದೆ.
ಡಾ.ವೈ.ಮಂಜುನಾಥ ಮನೆಯಿಂದ ಹೊರಗೆ ತೆರಳಿದ 10 ನಿಮಿಷದ ಬಳಿಕ ಇಡಿ ಅಧಿಕಾರಿ ಮತ್ತೆ ವಾಪಸ್ ಬಂದಿದ್ದಾರೆ. ಮುಖಕ್ಕೆ ಮಾಸ್ಕ್ ಧರಿಸಿ ಮನೆಯಿಂದ ಹೊರಹೋಗಿದ್ದ ಇಡಿ ಅಧಿಕಾರಿ, ಮರಳಿ ಮಾಸ್ಕ್ ಧರಿಸಿಯೇ ವಾಪಸ್ ಮನೆಯೊಳಗೆ ಆಗಮಿಸಿದರು. ಇಡಿ ಅಧಿಕಾರಿಗಳ ತಂಡದಿಂದ ದಾಖಲೆ ಪರಿಶೀಲನೆ ಮುಂದುವರಿದಿದೆ.


