*ಪೊಲೀಸ್ ಅಧಿಕಾರಿ ಹೆಸರಿನಲ್ಲಿ ಕೋಟಿ ಕೋಟಿ ವಂಚನೆ*: *ನಕಲಿ ಲೇಡಿ ಪಿಎಸ್ಐ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ತಾನು ಪೊಲೀಸ್ ಅಧಿಕಾರಿ ಎಂದು ಪರಿಚಯಿಸಿಕೊಂಡು ಯುವಕರು ಹಾಗೂ ಮಹಿಳೆಯರನ್ನು ನಂಬಿಸಿ ಹಣ, ಚಿನ್ನಾಭರಣ ಹಾಗೂ ಐಷಾರಾಮಿ ಕಾರುಗಳ ವಿಚಾರದಲ್ಲಿ ವಂಚಿಸುತ್ತಿದ್ದ ಮಹಿಳೆಯೊಬ್ಬಳನ್ನು ಪೊಲೀಸರು ಬಂಧಿಸಿದ್ದಾರೆ. ತಾನು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಎಂದು ಹೇಳಿಕೊಂಡು ಹಲವು ಮಂದಿಗೆ ಮೋಸದ ಬಲೆ ಬೀಸಿದ್ದ ನಕಲಿ ಲೇಡಿ ಪಿಎಸ್ಐ ಕೊನೆಗೂ ಅರೆಸ್ಟ್ ಆಗಿದ್ದಾಳೆ.
ತನ್ನನ್ನು ಬೆಂಗಳೂರಿನ ರಾಜಗೋಪಾಲನಗರ ಪೊಲೀಸ್ ಠಾಣೆಯ ಪಿಎಸ್ಐ ಎಂದು ಪರಿಚಯಿಸಿಕೊಂಡಿದ್ದ ನಿವೇದಿತಾ ಗೌಡ, ಪ್ರಸ್ತುತ ರಜೆಯಲ್ಲಿದ್ದೇನೆ ಎಂದು ಜನರನ್ನು ನಂಬಿಸುತ್ತಿದ್ದಳು. ಪೊಲೀಸ್ ಅಧಿಕಾರಿಯಂತೆ ಕಾಣಿಸಿಕೊಳ್ಳಲು ವಿಶೇಷವಾಗಿ ಕೂದಲು ಕಟ್ ಮಾಡಿಸಿಕೊಂಡು ವೇಷ ಧರಿಸಿ ಹಲವು ಮಂದಿಗೆ ವಂಚಿಸಿರೋದು ತನಿಖೆಯಲ್ಲಿ ಬೆಳಕಿಗೆ ಬಂಧಿದೆ.
ಮೂಲತಃ ರಾಮನಗರ ಜಿಲ್ಲೆಯವಳಾದ ನಿವೇದಿತಾ ಗೌಡ ಚಿಕ್ಕಮಗಳೂರು ನಗರದಲ್ಲಿ ಕೆಫೆಯೊಂದನ್ನು ನಡೆಸುತ್ತಿದ್ದು, ಕೆಫೆಗೆ ಬರುವ ಗ್ರಾಹಕರನ್ನೇ ಗುರಿಯಾಗಿಸಿಕೊಂಡು ಪರಿಚಯ ಬೆಳೆಸುತ್ತಿದ್ದಳು. ಬಳಿಕ ತಾನು ಪೊಲೀಸ್ ಅಧಿಕಾರಿ ಎಂಬ ಪರಿಚಯದ ಮೂಲಕ ನಂಬಿಕೆ ಗಳಿಸುತ್ತಿದ್ದಳು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಪರಿಚಯವಾದವರಿಂದ ಐಷಾರಾಮಿ ಕಾರುಗಳನ್ನು ಓಡಾಟಕ್ಕಾಗಿ ಪಡೆದು, ಬಳಿಕ ಮತ್ತೊಬ್ಬರಿಗೆ ಮಾರಾಟ ಮಾಡುತ್ತಿದ್ದಳು ಎನ್ನಲಾಗಿದೆ.
ಈ ರೀತಿಯಲ್ಲಿ ಚಿಕ್ಕಮಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ 25ಕ್ಕೂ ಹೆಚ್ಚು ಮಂದಿಗೆ ಕೋಟ್ಯಂತರ ರೂಪಾಯಿ ವಂಚಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಹಣದ ಜೊತೆಗೆ ಚಿನ್ನಾಭರಣವನ್ನೂ ಪಡೆದುಕೊಂಡಿದ್ದಳು ಎಂದು ದೂರುಗಳಲ್ಲಿ ಉಲ್ಲೇಖಿಸಲಾಗಿದೆ.
ವಂಚನೆಗೊಳಗಾದ 20ಕ್ಕೂ ಹೆಚ್ಚು ಮಂದಿ ಈಕೆಯ ವಿರುದ್ಧ ದೂರು ನೀಡಿದ್ದಾರೆ. ಚಿಕ್ಕಮಗಳೂರಿನ ಬಸವನಹಳ್ಳಿ ಹಾಗೂ ನಗರ ಪೊಲೀಸ್ ಠಾಣೆಗಳಲ್ಲಿ ನಿವೇದಿತಾ ವಿರುದ್ಧ ವಂಚನೆ ಪ್ರಕರಣ ದಾಖಲಾಗಿವೆ. ದೂರುಗಳ ಆಧಾರದಲ್ಲಿ ತನಿಖೆ ನಡೆಸಿದ ಪೊಲೀಸರು ನಿವೇದಿತಾ ಗೌಡಳನ್ನು ಬಂಧಿಸಿದ್ದಾರೆ.
ಪೊಲೀಸರ ವಿಚಾರಣೆ ವೇಳೆ ವಂಚನೆಯಿಂದ ಪಡೆದ ಹಣ ಹಾಗೂ ಚಿನ್ನಾಭರಣವನ್ನು ಪ್ರಿಯಕರ ದೇವುಗೆ ನೀಡಿರುವುದಾಗಿ ನಿವೇದಿತಾ ತಿಳಿಸಿದ್ದಾಳೆ. ಸದ್ಯ ದೇವು ತಲೆಮರೆಸಿಕೊಂಡಿದ್ದು ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಇನ್ನೂ ನಿವೇದಿತಾ ಬಳಿಯಿದ್ದ ಮೊಬೈಲ್ ಪರಿಶೀಲಿಸಿದಾಗ ಬೇರೆ ಬೇರೆ ಹೆಸರುಗಳಲ್ಲಿ ಸಿದ್ಧಪಡಿಸಿರುವ ನಕಲಿ ಆಧಾರ್ ಕಾರ್ಡ್ಗಳು ಪತ್ತೆಯಾಗಿವೆ. ಈ ದಾಖಲೆಗಳನ್ನು ಯಾವ ಉದ್ದೇಶಕ್ಕೆ ಬಳಸಲಾಗುತ್ತಿತ್ತು ಎಂಬ ಬಗ್ಗೆಯೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಸದ್ಯ ನಿವೇದಿತಾ ಗೌಡ ಪೊಲೀಸರ ವಶದಲ್ಲಿದ್ದು, ವಂಚನೆ ಪ್ರಕರಣಗಳ ಕುರಿತು ವಿಚಾರಣೆ ಮುಂದುವರಿದಿದೆ. ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಪ್ರಿಯಕರ ದೇವುಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದು ಆತನ ಬಂಧನದ ಬಳಿಕ ಇನ್ನಷ್ಟು ಮಾಹಿತಿ ಹೊರ ಬರಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



