*ಪ್ರತಿಭಾ ಪುರಸ್ಕಾರ ವೇದಿಕೆಯ ಮಾತು ಸಾಕಾರ; ಸೃಷ್ಟಿಯ ಸಾಧನೆಗೆ ಲಕ್ಷ್ಮೀ ಹೆಬ್ಬಾಳಕರ್ ಮೆಚ್ಚುಗೆ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಎರಡು ವರ್ಷಗಳ ಹಿಂದೆ ವೇದಿಕೆಯ ಮೇಲೆ ನಿಂತು, “ನಿಮ್ಮ ಆಶಯದಂತೆ ನಾನು ಡಾಕ್ಟರ್ ಆಗುತ್ತೇನೆ, MBBS ಸೀಟ್ ಪಡೆದೇ ತೀರುತ್ತೇನೆ” ಎಂದು ಆತ್ಮವಿಶ್ವಾಸದಿಂದ ಹೇಳಿದ್ದ ಪ್ರತಿಭಾವಂತ ವಿದ್ಯಾರ್ಥಿನಿ ಇಂದು ತನ್ನ ಮಾತನ್ನು ಉಳಿಸಿಕೊಂಡು ವೈದ್ಯಕೀಯ ಶಿಕ್ಷಣದತ್ತ ಹೆಜ್ಜೆ ಇಟ್ಟಿರುವುದು ಸಂತಸಕ್ಕೆ ಕಾರಣವಾಗಿದೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಎರಡು ವರ್ಷಗಳ ಹಿಂದೆ ಲಕ್ಷ್ಮೀತಾಯಿ ಫೌಂಡೇಷನ್ ವತಿಯಿಂದ ಆಯೋಜಿಸಲಾಗಿದ್ದ ‘ಪ್ರತಿಭಾ ಪುರಸ್ಕಾರ’ ಕಾರ್ಯಕ್ರಮದಲ್ಲಿ ಸುಮಾರು 600 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗಿತ್ತು. ಈ ಸಂದರ್ಭದಲ್ಲಿ ಮುತಗಾ ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿನಿ ಸೃಷ್ಟಿ ನಾರಾಯಣ ಅಪ್ಟೇಕರ್ ಅವರು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ.99 ಅಂಕ ಗಳಿಸಿದ್ದಕ್ಕಾಗಿ ಸನ್ಮಾನ ಸ್ವೀಕರಿಸಿದ್ದರು.
ಅಂದು ವೇದಿಕೆಯಲ್ಲೇ ಲಕ್ಷ್ಮೀ ಹೆಬ್ಬಾಳಕರ್ ಅವರ ಬಳಿ ತೆರಳಿದ್ದ ಸೃಷ್ಟಿ, “ನಿಮ್ಮ ಆಶಯದಂತೆ ನಾನು ಡಾಕ್ಟರ್ ಆಗುತ್ತೇನೆ. MBBS ಸೀಟ್ ಪಡೆದೇ ತೀರುತ್ತೇನೆ” ಎಂದು ದೃಢ ವಿಶ್ವಾಸದಿಂದ ಹೇಳಿದ್ದಳು.
ಇಂದು ಆ ಮಾತನ್ನು ನಿಜವಾಗಿಸಿರುವ ಸೃಷ್ಟಿ, ಬಾಗಲಕೋಟೆಯ ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನಲ್ಲಿ MBBS ಸೀಟ್ ಪಡೆದುಕೊಂಡಿದ್ದಾಳೆ. ತನ್ನ ಈ ಸಂತಸದ ಸುದ್ದಿಯನ್ನು ಹಂಚಿಕೊಂಡು, ಕೃತಜ್ಞತೆ ಸಲ್ಲಿಸಲು ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಭೇಟಿಯಾದ ಸೃಷ್ಟಿಯನ್ನು ಕಂಡು ಅಪಾರ ಸಂತೋಷ ಹಾಗೂ ಹೆಮ್ಮೆ ಉಂಟಾಯಿತು ಎಂದು ಹೆಬ್ಬಾಳಕರ್ ಹೇಳಿದ್ದಾರೆ.

“ಎರಡು ವರ್ಷಗಳ ಹಿಂದೆ ನನ್ನ ಮುಂದೆ ಆತ್ಮವಿಶ್ವಾಸದಿಂದ ಹೇಳಿದ್ದ ಮಾತನ್ನು ಸೃಷ್ಟಿ ಇಂದು ಉಳಿಸಿಕೊಂಡಿದ್ದಾಳೆ. ಪ್ರತಿಭೆ, ಪರಿಶ್ರಮ ಮತ್ತು ದೃಢ ಸಂಕಲ್ಪವಿದ್ದರೆ ಯಾವುದೇ ಗುರಿಯನ್ನು ಸಾಧಿಸಬಹುದು ಎಂಬುದಕ್ಕೆ ಆಕೆ ಉತ್ತಮ ಉದಾಹರಣೆ. ಆಕೆಯ ಸಾಧನೆ ನನಗೆ ವಿಶೇಷ ಸಂತೋಷ ತಂದಿದೆ,” ಎಂದು ಲಕ್ಷ್ಮೀ ಹೆಬ್ಬಾಳಕರ್ ಹರ್ಷ ವ್ಯಕ್ತಪಡಿಸಿದ್ದಾರೆ.
ಕಳೆದ 20 ವರ್ಷಗಳಿಂದ ಶಿಕ್ಷಕರಾಗಿ ಜ್ಞಾನ ದಾಸೋಹ ಮಾಡುತ್ತಿರುವ ಸೃಷ್ಟಿಯ ತಂದೆ ನಾರಾಯಣ ಅಪ್ಟೇಕರ್ ಅವರ ಪರಿಶ್ರಮವೂ ಮಗಳ ಈ ಸಾಧನೆಯ ಹಿಂದೆ ಮಹತ್ವದ್ದಾಗಿದೆ. ಮಗಳ ಸಾಧನೆ ಹಾಗೂ ತಂದೆಯ ಪರಿಶ್ರಮಕ್ಕೆ ಲಕ್ಷ್ಮೀ ಹೆಬ್ಬಾಳಕರ್ ಅಭಿನಂದನೆ ಸಲ್ಲಿಸಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಪ್ರತಿಯೊಬ್ಬ ಪ್ರತಿಭಾವಂತ ವಿದ್ಯಾರ್ಥಿ-ವಿದ್ಯಾರ್ಥಿನಿಯ ಸಾಧನೆಯನ್ನು ಗುರುತಿಸಿ, ಗೌರವಿಸಿ, ಅವರ ಉನ್ನತ ಶಿಕ್ಷಣ ಹಾಗೂ ಉಜ್ವಲ ಭವಿಷ್ಯದ ಕನಸುಗಳಿಗೆ ಲಕ್ಷ್ಮೀತಾಯಿ ಫೌಂಡೇಷನ್ ಸದಾ ಆಸರೆಯಾಗಿ ನಿಲ್ಲಲಿದೆ ಎಂದು ಅವರು ಭರವಸೆ ನೀಡಿದ್ದಾರೆ.
“ಸೃಷ್ಟಿ ಉತ್ತಮ ವೈದ್ಯೆಯಾಗಿ ಬೆಳೆದು, ಸಮಾಜದ ಅದರಲ್ಲೂ ಬಡವರ ಸೇವೆ ಮಾಡುವಂತಾಗಲಿ. ಆಕೆಯ ಮುಂದಿನ ವೈದ್ಯಕೀಯ ಶಿಕ್ಷಣದ ಪಯಣ ಯಶಸ್ವಿಯಾಗಲಿ ಎಂಬುದು ನನ್ನ ಹೃದಯಪೂರ್ವಕ ಹಾರೈಕೆ ಹಾಗೂ ಆಶೀರ್ವಾದ,” ಎಂದು ಲಕ್ಷ್ಮೀ ಹೆಬ್ಬಾಳಕರ್ ಶುಭ ಹಾರೈಸಿದ್ದಾರೆ.
ಎರಡು ವರ್ಷಗಳ ಹಿಂದೆ ಸನ್ಮಾನಿತಳಾದ ಪ್ರತಿಭೆ, ಇಂದು ವೈದ್ಯೆಯಾಗುವ ಕನಸಿನ ಮೊದಲ ಹೆಜ್ಜೆ ಇಟ್ಟಿರುವುದು ‘ಪ್ರತಿಭಾ ಪುರಸ್ಕಾರ’ದ ಆಶಯಕ್ಕೆ ಮತ್ತೊಂದು ಅರ್ಥಪೂರ್ಣ ಸಾಕ್ಷಿಯಾಗಿದೆ.


