*ಭಟ್ಕಳದಲ್ಲಿ ಮಸೀದಿ ಮೇಲೆ ಕಲ್ಲು ತೂರಾಟದ ಆರೋಪ; ಪರಿಸ್ಥಿತಿ ನಿಯಂತ್ರಿಸಲು ಖಾಕಿ ಹರಸಾಹಸ*
ಪ್ರಗತಿವಾಹಿನಿ ಸುದ್ದಿ: ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಸಾಗುತ್ತಿದ್ದ ವೇಳೆ ಮಸೀದಿ ಹಾಗೂ ಮದರಸಾ ಕಟ್ಟಡದ ಮೇಲೆ ಕಲ್ಲುತೂರಾಟ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ.
ಈ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಡೆದಿದೆ. ಭಟ್ಕಳದ ಗುಳ್ಳಿ ರೈಲ್ವೆ ಸ್ಟೇಷನ್ ರಸ್ತೆಯಲ್ಲಿ ಬುಧವಾರ ರಾತ್ರಿ ಘಟನೆ ನಡೆದಿದ್ದು, ಕಟ್ಟಡದ ಕಿಟಕಿ ಗಾಜುಗಳಿಗೆ ಹಾನಿಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಘಟನೆ ಬಳಿಕ ಸ್ಥಳದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ತಲಾಂದ್ ಪ್ರದೇಶದಿಂದ ಗಣೇಶ ಮೂರ್ತಿ ವಿಸರ್ಜನೆಗಾಗಿ ಮೆರವಣಿಗೆ ಆರಂಭವಾಗಿತ್ತು. ರೈಲ್ವೆ ನಿಲ್ದಾಣದತ್ತ ಸಾಗುವ ಗುಳ್ಳಿ ರಸ್ತೆಯ ಮೂಲಕ ಮೆರವಣಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಮಸೀದಿ ಮತ್ತು ಮದರಸಾ ಮೇಲೆ ಕಲ್ಲು ಬಿದ್ದಿದೆ ಎನ್ನಲಾಗಿದೆ. ಈ ವೇಳೆ ಗುಳ್ಳಿ ರಸ್ತೆಯಲ್ಲಿರುವ ಮಸೀದಿಯ ಕಿಟಕಿ ಗಾಜುಗಳು ಒಡೆದಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಸಂಬಂಧ ಸ್ಥಳೀಯ ನಿವಾಸಿ ಅಬ್ದುಲ್ ಆಲಿಂ ಅವರು ಭಟ್ಕಳ ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬಳಿಕ ಹಲವು ಮಂದಿ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದ್ದರು. ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸದಂತೆ ಪೊಲೀಸರು ಜನರನ್ನು ಸಮಾಧಾನಪಡಿಸಿ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದ್ದಾರೆ. ಆರೋಪಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಬಳಿಕ ಠಾಣೆಯ ಮುಂದೆ ಸೇರಿದ್ದವರು ಅಲ್ಲಿಂದ ತೆರಳಿದ್ದಾರೆ.
ಘಟನೆಯ ಹಿನ್ನೆಲೆಯಲ್ಲಿ ಭಟ್ಕಳದಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಲಭ್ಯವಿರುವ ದೃಶ್ಯಾವಳಿಗಳು ಸೇರಿದಂತೆ ವಿವಿಧ ಸಾಕ್ಷ್ಯಗಳನ್ನು ಪರಿಶೀಲಿಸುತ್ತಿದ್ದಾರೆ. ಸದ್ಯ ಭಟ್ಕಳದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಕಲ್ಲುತೂರಾಟ ನಡೆಸಿದವರು ಯಾರು ಎಂಬುದು ಇನ್ನಷ್ಟೇ ಖಚಿತವಾಗಬೇಕಿದೆ.


