ಪ್ರಗತಿವಾಹಿನಿ ಸುದ್ದಿ: ₹50 ಲಕ್ಷ ನಗದು ಲಂಚ ಸ್ವೀಕರಿಸುತ್ತಿದ್ದ ವೇಳೆ ಧಾರವಾಡ ತಹಸೀಲ್ದಾರ್ ಸಚ್ಚಿದಾನಂದ ಕುಚನೂರ್ ಅವರು ಲೋಕಾಯುಕ್ತ ಅಧಿಕಾರಿಗಳ ಕೈಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ.
ಧಾರವಾಡ ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತ ಅಧಿಕಾರಿಗಳು ಬೃಹತ್ ಕಾರ್ಯಾಚರಣೆ ನಡೆಸಿ ತಹಸೀಲ್ದಾರ್ ಅವರನ್ನು ಲಾಕ್ ಮಾಡಿದ್ದಾರೆ. ಜಮೀನಿನ ದಾಖಲೆ ಸರಿಪಡಿಸುವ ಕೆಲಸಕ್ಕಾಗಿ ಈ ಬೃಹತ್ ಮೊತ್ತದ ಲಂಚದ ಬೇಡಿಕೆ ಇಡಲಾಗಿತ್ತು.
ಯರಿಕೊಪ್ಪ ಗ್ರಾಮದ ಬಳಿ ಜಮೀನು ಹೊಂದಿದ್ದರಿಯಲ್ ಎಸ್ಟೇಟ್ ಡೆವಲಪರ್ ಒಬ್ಬರು, ಭೂಮಿಯ ‘ಅ’ ಖರಾಬ್ ಭಾಗವನ್ನು ಅಧಿಕೃತವಾಗಿ ತೆಗೆದುಹಾಕಿ ಪೋಡಿ ಮಾಡಿಕೊಡುವಂತೆ ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಈ ಕೆಲಸ ಪೂರ್ಣಗೊಳಿಸಲು ತಹಸೀಲ್ದಾರ್ ಸಚ್ಚಿದಾನಂದ ಅವರು ₹1 ಕೋಟಿ ನಗದು ಹಾಗೂ 1 ಎಕರೆ ಜಮೀನು ನೀಡುವಂತೆ ಲಂಚದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಅಧಿಕಾರಿಯ ಲಂಚದ ಕಿರುಕುಳದಿಂದ ಬೇಸತ್ತ ಸಂತ್ರಸ್ತ ಡೆವಲಪರ್, ಈ ಕುರಿತು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಲೋಕಾಯುಕ್ತ ಎಸ್‌ಪಿ ಸಿದ್ದಲಿಂಗಪ್ಪ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ಕಾರ್ಯಾಚರಣೆಗೆ ಇಳಿದು, ಮೊದಲ ಕಂತಿನ ರೂಪದಲ್ಲಿ ₹50 ಲಕ್ಷ ಹಣ ಸ್ವೀಕರಿಸುವ ವೇಳೆ ತಹಸೀಲ್ದಾರ್‌ಗೆ ಬಲೆ ಬೀಸಲು ಪಕ್ಕಾ ಯೋಜನೆ ರೂಪಿಸಿತ್ತು.
ಧಾರವಾಡದ ಕೆಸಿಡಿ ಮೈದಾನದ ಬಳಿ ಹಣದ ಬ್ಯಾಗ್ ಸ್ವೀಕರಿಸುತ್ತಿದ್ದಂತೆಯೇ ನಿಗಾ ವಹಿಸಿದ್ದ ಲೋಕಾಯುಕ್ತ ತಂಡ ದಿಢೀರ್ ದಾಳಿ ನಡೆಸಿ ಅಧಿಕಾರಿಯನ್ನು ಬಂಧಿಸಿದೆ.
ವಶಪಡಿಸಿಕೊಂಡ ನಗದು ಹಣದೊಂದಿಗೆ ತಹಸೀಲ್ದಾರ್ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಅವರ ಕಚೇರಿ ಹಾಗೂ ನಿವಾಸಗಳ ಮೇಲೆಯೂ ಲೋಕಾಯುಕ್ತ ತನಿಖೆ ಮುಂದುವರಿದಿದೆ.


