*ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ:* *ಅಭ್ಯರ್ಥಿಗಳಿಂದ ಲಕ್ಷ ಲಕ್ಷ ಹಣ, ರೆಸಾರ್ಟ್‌ನಲ್ಲಿ ತರಬೇತಿ!*
Saram Sibawi Riantuannak Hlennak: Candidate hna sin in tangka ting tampi an lak; resort ah biahalnak cauk cawnnak an tuah!

ಪ್ರಗತಿವಾಹಿನಿ ಸುದ್ದಿ: ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶುವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ ಪ್ರಕರಣದ ತನಿಖೆ ಮತ್ತಷ್ಟು ತೀವ್ರಗೊಂಡಿದ್ದು, ಸಿಐಡಿ ತನಿಖೆಯಲ್ಲಿ ಹಣದ ವಹಿವಾಟು, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಅಭ್ಯರ್ಥಿಗಳನ್ನು ರೆಸಾರ್ಟ್‌ಗಳಲ್ಲಿ ಇರಿಸಿ ತರಬೇತಿ ನೀಡಿದ ಆರೋಪಗಳ ಹಲವು ಅಂಶಗಳು ಬೆಳಕಿಗೆ ಬಂದಿವೆ. ಪ್ರಕರಣದಲ್ಲಿ ಮಧ್ಯವರ್ತಿ ಬಸವರಾಜ್ ಕನ್ನಾಳೆ ಸೇರಿದಂತೆ ಪ್ರಮುಖ ಆರೋಪಿಗಳ ಹಣಕಾಸು ವ್ಯವಹಾರಗಳನ್ನೂ ತನಿಖಾ ತಂಡ ಪರಿಶೀಲಿಸುತ್ತಿದೆ.
400 ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಅಕ್ರಮದಲ್ಲಿ ಕೆಲವು ಅಭ್ಯರ್ಥಿಗಳು ಮಧ್ಯವರ್ತಿಗಳಿಗೆ ₹35 ಲಕ್ಷದಿಂದ ₹80 ಲಕ್ಷದವರೆಗೆ ಹಣ ಪಾವತಿಸಿದ್ದಾರೆ ಎಂಬುದು CID ತನಿಖೆಯಲ್ಲಿ ದಾಖಲಾಗಿದೆ. 11 ಅಭ್ಯರ್ಥಿಗಳು ಬಸವರಾಜ್ ಕನ್ನಾಳೆಗೆ ಸುಮಾರು ₹70 ಲಕ್ಷವನ್ನು RTGS ಮೂಲಕ ವರ್ಗಾಯಿಸಿರುವುದನ್ನು ತನಿಖಾಧಿಕಾರಿಗಳು ಪತ್ತೆಹಚ್ಚಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ.
ಅಭ್ಯರ್ಥಿಗಳಿಂದ ಬಂದ ಹಣವನ್ನು ವಿವಿಧ ಬ್ಯಾಂಕ್ ಖಾತೆಗಳ ಮೂಲಕ ವರ್ಗಾಯಿಸಿ, ಬಳಿಕ ಅದರ ಬಳಕೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಹಣದ ಮೂಲ ಹಾಗೂ ಅದು ಅಂತಿಮವಾಗಿ ಯಾರಿಗೆ ತಲುಪಿದೆ ಎಂಬುದನ್ನು ಪತ್ತೆಹಚ್ಚಲು CID ಅಧಿಕಾರಿಗಳು ಬ್ಯಾಂಕ್ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ತನಿಖೆಯಲ್ಲಿ ಮತ್ತೊಂದು ಮಹತ್ವದ ಅಂಶ ಬೆಳಕಿಗೆ ಬಂದಿದೆ. KPSCಯ ಪರೀಕ್ಷಾ ನಿಯಂತ್ರಕರಾಗಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ತಮ್ಮ ಆಪ್ತ ಮಹಿಳೆಗೆ ಚಿನ್ನ ಮತ್ತು ವಜ್ರದ ಆಭರಣ ಖರೀದಿಸಲು ನೇಮಕಾತಿ ಆಕಾಂಕ್ಷಿಗಳಿಂದ ಸಂಗ್ರಹಿಸಲಾದ ಹಣದ ಒಂದು ಭಾಗವನ್ನು ನೀಡಿದ್ದರು ಎಂಬ ಆರೋಪವನ್ನು CID ನ್ಯಾಯಾಲಯದ ಮುಂದೆ ಪ್ರಸ್ತಾವನೆಯಾಗಿದೆ.
CID ಪ್ರಕಾರ, ಸುಮಾರು ₹52 ಲಕ್ಷ ಮೌಲ್ಯದ ಚಿನ್ನ ಮತ್ತು ವಜ್ರದ ಆಭರಣಗಳನ್ನು ಖರೀದಿಸಲು ಹಣ ಬಳಸಲಾಗಿದೆ ಎನ್ನಲಾಗಿದೆ. ಈ ಹಣದ ಜಾಡು ಪತ್ತೆಹಚ್ಚಲು ಬ್ಯಾಂಕ್ ವಹಿವಾಟು, ಸಿಸಿಟಿವಿ ದೃಶ್ಯಗಳು ಹಾಗೂ ಕರೆ ದಾಖಲೆಗಳನ್ನು ಪರಿಶೀಲಿಸಲಾಗಿದೆ ಎಂದು ವರದಿಯಾಗಿದೆ.
ಪ್ರಕರಣದ ತನಿಖೆಯಲ್ಲಿ ಮಧ್ಯವರ್ತಿಗಳು, ಅಭ್ಯರ್ಥಿಗಳು ಹಾಗೂ KPSC ಅಧಿಕಾರಿಗಳ ನಡುವಿನ ಸಂವಹನವೂ ತನಿಖಾ ಸಂಸ್ಥೆಗಳ ಗಮನ ಸೆಳೆದಿದೆ. ಪರೀಕ್ಷೆಯ ದಿನಗಳಲ್ಲೂ ಅಭ್ಯರ್ಥಿಗಳು, ಮಧ್ಯವರ್ತಿಗಳು ಹಾಗೂ ಅಧಿಕಾರಿಗಳ ನಡುವೆ ಇಂಟರ್‌ನೆಟ್ ಆಧಾರಿತ ಕರೆಗಳು ನಡೆದಿರುವುದನ್ನು ತನಿಖೆಯಲ್ಲಿ ಗೊತ್ತಾಗಿದೆ.
ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ಪರೀಕ್ಷಾ ಪ್ರಕ್ರಿಯೆಯ ವಿವಿಧ ಹಂತಗಳಲ್ಲಿದ್ದ ಅಧಿಕಾರಿಗಳ ಸಂಪರ್ಕ ಮತ್ತು ಸಂವಹನದ ವಿವರಗಳನ್ನು ಕೂಡ ಪರಿಶೀಲಿಸಲಾಗುತ್ತಿದೆ.
ಹಣ ಪಾವತಿಸಿದ್ದ ಕೆಲವು ಅಭ್ಯರ್ಥಿಗಳನ್ನು ಪರೀಕ್ಷೆಗೆ ಮುನ್ನ ದೇವನಹಳ್ಳಿ ಸಮೀಪದ ರೆಸಾರ್ಟ್‌ನಲ್ಲಿ ಇರಿಸಿ ಅಲ್ಲಿ ಅವರಿಗೆ ಸೋರಿಕೆಯಾದ ಪ್ರಶ್ನೆಪತ್ರಿಕೆ ನೀಡಲಾಗಿತ್ತು ಎನ್ನಲಾಗಿದ್ದು, OMR ಉತ್ತರ ಪತ್ರಿಕೆಯಲ್ಲಿ ಉತ್ತರಗಳನ್ನು ಹೇಗೆ ದಾಖಲಿಸಬೇಕು ಎಂಬುದರ ಕುರಿತು ತರಬೇತಿ ನೀಡಲಾಗಿದೆ ಎಂಬ ಮಾಹಿತಿಯೂ ತನಿಖೆಯಲ್ಲಿ ಹೊರಬಂದಿದೆ. ಪರೀಕ್ಷಾ ಕೇಂದ್ರಗಳಿಗೆ ತೆರಳುವ ಮುನ್ನ ಅಭ್ಯರ್ಥಿಗಳನ್ನು ಸಿದ್ಧಪಡಿಸಿ ಕಳುಹಿಸಲಾಗಿತ್ತು ಎನ್ನಲಾಗಿದೆ.
400 ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆ ಜನವರಿ 8 ಮತ್ತು 9ರಂದು ನಡೆದಿತ್ತು. ಪರೀಕ್ಷೆಗೆ ಮುನ್ನವೇ ಆಯ್ದ ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆ ತಲುಪಿತ್ತು ಎಂಬ ಆರೋಪದ ಹಿನ್ನೆಲೆಯಲ್ಲಿ CID ತನಿಖೆ ನಡೆಸುತ್ತಿದೆ. ಪರೀಕ್ಷಾ ನಿಯಂತ್ರಕರಾಗಿದ್ದ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರು ಪ್ರಶ್ನೆಪತ್ರಿಕೆಗೆ ಪ್ರವೇಶ ಹೊಂದಿದ್ದ ಹಿನ್ನೆಲೆಯಲ್ಲಿ ಅವರ ಪಾತ್ರದ ಬಗ್ಗೆಯೂ ತನಿಖೆ ನಡೆದಿದೆ. ಪ್ರಮುಖ ಮಧ್ಯವರ್ತಿಯಾಗಿರುವ ಬಸವರಾಜ್ ಕನ್ನಾಳೆ ಅವರೊಂದಿಗೆ ಅವರ ಸಂಪರ್ಕದ ಕುರಿತು ತನಿಖಾ ಸಂಸ್ಥೆಗಳು ಸಾಕ್ಷ್ಯ ಸಂಗ್ರಹಿಸಿವೆ.




