Belagavi NewsBelgaum NewsKannada NewsKarnataka News

*ಸೆ.28ರಂದು ಗುರ್ಲಾಪುರದಲ್ಲಿ ಲಕ್ಷಾಂತರ ರೈತರ ಬೃಹತ್ ಸಮಾವೇಶ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘದ ಮುಖಂಡ ಗಣೇಶ ಇಳಿಗೇರ್ ನೇತೃತ್ವದಲ್ಲಿ ರೈತರು ಬೆಳಗಾವಿ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಸರ್ಕಾರ ಹಾಗೂ ಸಕ್ಕರೆ ಕಾರ್ಖಾನೆಗಳ ವಿರುದ್ಧ ಘೋಷಣೆಗಳನ್ನು ಕೂಗಿದ ರೈತರು, ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿ, ಕಾರ್ಖಾನೆಗಳ ತ್ವರಿತ ಆರಂಭ ಹಾಗೂ ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿದರು.

ಸೆಪ್ಟೆಂಬರ್ 28ರಂದು ಬೆಳಗಾವಿ ಜಿಲ್ಲೆಯ ಗುರ್ಲಾಪುರದಲ್ಲಿ ಲಕ್ಷಾಂತರ ರೈತರನ್ನು ಸೇರಿಸಿ ಬೃಹತ್ ಸಭೆ ನಡೆಸಲಾಗುವುದು ಎಂದು ಗಣೇಶ ಇಳಿಗೇರ್ ಘೋಷಿಸಿದರು. ಈ ಸಭೆಗೆ ಸರ್ಕಾರದ ಪ್ರತಿನಿಧಿಗಳು, ಜಿಲ್ಲೆಯ ಸಚಿವರು ಹಾಗೂ ಸಂಬಂಧಿಸಿದ ಜನಪ್ರತಿನಿಧಿಗಳು ಆಗಮಿಸಿ ರೈತರ ಸಮಸ್ಯೆಗಳನ್ನು ನೇರವಾಗಿ ಆಲಿಸಬೇಕು ಎಂದು ಆಗ್ರಹಿಸಿದರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಕ್ಕರೆ ಸಚಿವರು ಸೇರಿದಂತೆ ಸಂಬಂಧಿಸಿದ ಸಚಿವರು ಸಭೆಯಲ್ಲಿ ಭಾಗವಹಿಸಬೇಕು. ರೈತರು ಸಭೆಯಲ್ಲಿ ಕೈಗೊಳ್ಳುವ ನಿರ್ಣಯಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಸಕ್ಕರೆ ಕಾರ್ಖಾನೆಗಳನ್ನು ಕೂಡಲೇ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕಬ್ಬು ಖರೀದಿ, ಕಟಾವು, ಸಾಗಣೆ ಸೇರಿದಂತೆ ಹಲವು ಹಂತಗಳಲ್ಲಿ ರೈತರು ಸಮಸ್ಯೆ ಎದುರಿಸುತ್ತಿದ್ದಾರೆ. ರೈತರ ಕಬ್ಬಿನಿಂದ ಕಾರ್ಖಾನೆಗಳು ಉತ್ಪಾದನೆ ನಡೆಸುತ್ತಿದ್ದರೂ, ರೈತರಿಗೆ ಸೂಕ್ತ ಬೆಲೆ ಹಾಗೂ ಸಕಾಲದಲ್ಲಿ ಹಣ ಪಾವತಿಯಾಗಬೇಕು ಎಂದು ಗಣೇಶ ಇಳಿಗೇರ್ ಹೇಳಿದರು.

ರೈತರು ನಿಗದಿಪಡಿಸುವ ದರಕ್ಕೆ ಅನುಗುಣವಾಗಿ ಕಬ್ಬಿಗೆ ಬೆಲೆ ನೀಡಬೇಕು. ಈ ಬಾರಿ ಕಾರ್ಖಾನೆ ಮಾಲೀಕರ ಏಕಪಕ್ಷೀಯ ನಿರ್ಧಾರಗಳನ್ನು ರೈತರು ಒಪ್ಪಿಕೊಳ್ಳುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು.

ಪ್ರತಿ ಟನ್ ಕಬ್ಬಿಗೆ ₹6,000 ಬಿಲ್ ನೀಡಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟ ಗಣೇಶ ಇಳಿಗೇರ್, ಕಾರ್ಖಾನೆಗಳನ್ನು ತಕ್ಷಣ ಆರಂಭಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಎಚ್ಚರಿಕೆ ನೀಡಿದರು.

ರೈತರ ಹೋರಾಟಕ್ಕೆ ವಿವಿಧ ರೈತ ಸಂಘಟನೆಗಳು, ಮಠಾಧೀಶರು ಹಾಗೂ ಸಾರ್ವಜನಿಕರು ಬೆಂಬಲ ನೀಡಬೇಕು ಎಂದು ಮನವಿ ಮಾಡಿದ ಅವರು, “ರೈತ ಉಳಿದರೆ ರೈತಕುಲ ಉಳಿಯುತ್ತದೆ, ರೈತ ಉಳಿದರೆ ರಾಜ್ಯ ಉಳಿಯುತ್ತದೆ, ರೈತ ಉಳಿದರೆ ದೇಶ ಉಳಿಯುತ್ತದೆ” ಎಂದು ಹೇಳಿದರು.

Related Articles

Back to top button