Kannada NewsLatestNational

*ವಂದೇ ಮಾತರಂ ಗೀತೆ ವಿವಾದ: ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ*

ಪ್ರಗತಿವಾಹಿನಿ ಸುದ್ದಿ: ವಂದೇ ಮಾತರಂ ಗೀತೆ ವಿಚಾರವಾಗಿ ಉಂಟಾಗಿದ್ದ ಗೊಂದಲ, ವಿವಾದಗಳಿಗೆ ಸುಪ್ರೀಂ ಕೋರ್ಟ್ ತೆರೆ ಎಳೆದಿದೆ. ವಂದೇ ಮಾತರಂ ಗೀತೆ ವಿಚಾರವಾಗಿ ಸರ್ಕಾರಕ್ಕೆ ಮಹತ್ವದ ಸೂಚನೆ ನೀಡಿದೆ.

ವಂದೇ ಮಾತರಂ ಹಾಡುವುದನ್ನು ಕಡ್ಡಾಯಗೊಳಿಸಿರುವ ನಿಯಮ ಹಾಗೂ ಅದನ್ನು ಉಲ್ಲಂಘಿಸಿದರೆ ಶಿಕ್ಷೆ ವಿಧಿಸುವ ಕಾನೂನಿನ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಆತ್ಮಸಾಕ್ಷಿಯ ಆಧಾರದ ಮೇಲೆ ಅಥವಾ ಧಾರ್ಮಿಕ ನಂಬಿಕೆಯ ಕಾರಣಕ್ಕೆ ಯಾರಾದರೂ ವಂದೇ ಮಾತರಂ ಹಾಡಲು ನಿರಾಕರಿಸಿದರೆ ಅವರನ್ನು ದಂಡನಾತ್ಮಕ ಕ್ರಮಗಳಿಗೆ ಗುರಿಪಡಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.

ಪ್ರಸಿದ್ಧ ಕರ್ನಾಟಕ ಸಂಗೀತ ಗಾಯಕ ಟಿ.ಎಂ. ಕೃಷ್ಣ ಅವರು, ವಂದೇ ಮಾತರಂನ ಎಲ್ಲಾ ಆರು ಚರಣಗಳನ್ನು ಕಡ್ಡಾಯವಾಗಿ ಹಾಡಬೇಕು ಎಂದು ಕೇಂದ್ರ ಸರ್ಕಾರ ಜಾರಿಗೆ ತಂದ ನಿಯಮವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. 2026ರಲ್ಲಿ ತಿದ್ದುಪಡಿ ಮಾಡಲಾದ ‘ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆ, 1971’ ರ ಸೆಕ್ಷನ್ 3 ಹಾಗೂ ಗೃಹ ಸಚಿವಾಲಯದ ಸುತ್ತೋಲೆಗಳನ್ನು ಅವರು ಪ್ರಶ್ನಿಸಿದ್ದರು.

ತಿದ್ದುಪಡಿ ಮಾಡಿದ ನಿಯಮದ ಪ್ರಕಾರ, ರಾಷ್ಟ್ರೀಯ ಗೀತೆ ಹಾಡುವುದನ್ನು ತಡೆದರೆ 3 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿತ್ತು. ವಂದೇ ಮಾತರಂನ ಕೊನೆಯ ನಾಲ್ಕು ಚರಣಗಳು ದೇಶದ ಜಾತ್ಯತೀತ ಸ್ವರೂಪಕ್ಕೆ ಮತ್ತು ಸಂವಿಧಾನದ 25 ಹಾಗೂ 26ನೇ ವಿಧಿಗಳ (ಧಾರ್ಮಿಕ ಸ್ವಾತಂತ್ರ್ಯ) ಆಶಯಕ್ಕೆ ವಿರುದ್ಧವಾಗಿವೆ ಎಂಬುದು ಅರ್ಜಿದಾರರ ಪ್ರಮುಖ ವಾದವಾಗಿತ್ತು.

ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿ. ಮೋಹನ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿತು. ಈ ವೇಳೆ ನ್ಯಾಯಮೂರ್ತಿ ಬಾಗ್ಚಿ ಅವರು, 1986ರ ಪ್ರಸಿದ್ಧ ‘ಬಿಜೋ ಇಮ್ಯಾನುಯೆಲ್ ವಿರುದ್ಧ ಕೇರಳ ರಾಜ್ಯ’ ಪ್ರಕರಣದ ತೀರ್ಪನ್ನು ಉಲ್ಲೇಖಿಸಿದರು. ಆ ಪ್ರಕರಣದಲ್ಲಿ, ತಮ್ಮ ಧಾರ್ಮಿಕ ನಂಬಿಕೆಗೆ ವಿರುದ್ಧವೆಂಬ ಕಾರಣಕ್ಕೆ ರಾಷ್ಟ್ರಗೀತೆಯನ್ನು ಬಾಯಲ್ಲಿ ಹಾಡದೆ, ಎದ್ದು ನಿಂತು ಗೌರವ ಸೂಚಿಸಿದ್ದ ಶಾಲಾ ಮಕ್ಕಳನ್ನು ಸುಪ್ರೀಂ ಕೋರ್ಟ್ ರಕ್ಷಿಸಿತ್ತು. ಅದೇ ಸಾಂವಿಧಾನಿಕ ತತ್ವವು ಪ್ರಸ್ತುತ ತಿದ್ದುಪಡಿಗೂ ಅನ್ವಯವಾಗುತ್ತದೆ ಎಂದು ಪೀಠ ಒತ್ತಿಹೇಳಿತು.

ಅಂತಿಮವಾಗಿ ಪೀಠವು, ರಾಷ್ಟ್ರೀಯ ಭಾವನೆಗಳನ್ನು ನಿರ್ಧರಿಸುವುದು ಸಂಸತ್ತಿನ ಕೆಲಸವಾದರೂ, ಧಾರ್ಮಿಕ ಸ್ವಾತಂತ್ರ್ಯ ಹಾಗೂ ಆತ್ಮಸಾಕ್ಷಿಯ ಹಕ್ಕುಗಳ ರಕ್ಷಣೆಗೆ ನ್ಯಾಯಾಲಯ ಬದ್ಧವಾಗಿದೆ ಎಂದು ಹೇಳಿದೆ. ಒಟ್ಟಾರೆ ವಂದೇ ಮಾತರಂ ಹಾಡುವುದು ಕಡ್ಡಾಯವಲ್ಲ, ಹಾಡದಿದ್ದರೆ ಶಿಕ್ಷೆ ಇಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ಕರ್ನಾಟಕದಲ್ಲಿ ವಂದೇ ಮಾತರಂ ಹಾಡಿನ ವಿಚಾರವಾಗಿ ರಾಜ್ಯ ಸರ್ಕಾರ 2 ಚರಣಗಳಿಗೆ ಸೀಮಿತಗೊಳಿಸಿ ಆದೇಶ ಹೊರಡಿಸಿರುವ ಬೆನ್ನಲ್ಲೇ ವಿಪಕ್ಷ ಬಿಜೆಪಿ ನಾಯಕರು ಸರ್ಕಾರದ ಆದೇಶಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೇ ವಂದೇ ಮಾತರಂ ಸಂಪೂರ್ಣ ಹಾಡು ಹಾಡಬೇಕು ಎಂದು ಆಗ್ರಹಿಸುತ್ತಿದ್ದಾರೆ. ಇದೇ ವಿಚಾರ ವಿಧಾನಮಂಡಲ ಅಧಿವೇಶನದಲ್ಲಿಯೂ ಭಾರಿ ವಾಗ್ವಾದಕ್ಕೆ ಕಾರಣವಾಗಿತ್ತು. ಈ ಸಂದರ್ಭದಲ್ಲೇ ಸುಪ್ರೀಂ ಕೋರ್ಟ್ ಅಭಿಪ್ರಾಯ ಮಹತ್ವ ಪಡೆದಿದೆ.


Related Articles

Back to top button