Belagavi NewsBelgaum NewsCrimeKannada NewsKarnataka News

*ಮನೆಗಳ್ಳತನ ಪ್ರಕರಣ ಭೇದಿಸಿದ ಬೆಳಗಾವಿ ಪೊಲೀಸರು: ನಾಲ್ವರ ಬಂಧನ*

ಪ್ರಗತಿವಾಹಿನಿ ಸುದ್ದಿ: ನಂದಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆಗಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. 

ಬಂಧಿತರಿಂದ 29 ಗ್ರಾಂ ಚಿನ್ನಾಭರಣ, 220 ಗ್ರಾಂ ಬೆಳ್ಳಿ ಆಭರಣ ಹಾಗೂ ಕಳ್ಳತನಕ್ಕೆ ಬಳಸಿದ್ದ ಎರಡು ಮೋಟಾರ್‌ಸೈಕಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಭಾಗ್ಯನಗರ-ಹಿಡಕಲ ಗ್ರಾಮದ ಕೆಂಪಣ್ಣ ಸತ್ಯೆಪ್ಪ ಚಿಕ್ಕೋಡಿ ಪಾಟೀಲ ಅವರು ಜೂನ್ 29ರಂದು ರಾತ್ರಿ ಮನೆಗೆ ಬೀಗ ಹಾಕಿಕೊಂಡು ಮಗನ ಮನೆಗೆ ತೆರಳಿದ್ದರು. ಜೂನ್ 29ರ ರಾತ್ರಿ 9 ಗಂಟೆಯಿಂದ ಜೂನ್ 30ರ ಬೆಳಗ್ಗೆ 7 ಗಂಟೆಯೊಳಗೆ ಕಳ್ಳರು ಮನೆಯ ಬೀಗ ಮುರಿದು ಒಳನುಗ್ಗಿ ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ ನಗದು ಕಳವು ಮಾಡಿದ್ದರು.

ಈ ಕುರಿತು ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿತ್ತು. ಬೈಲಹೊಂಗಲ ಡಿವೈಎಸ್ಪಿ ಡಾ. ವೀರಯ್ಯ ಹಿರೇಮಠ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ನಂದಗಡ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ರವಿಕುಮಾರ್ ಧರ್ಮಟ್ಟಿ ಹಾಗೂ ಪಿಎಸ್‌ಐ ಎ.ಬಿ. ಬಳಗಾರ ನೇತೃತ್ವದಲ್ಲಿ ಪೊಲೀಸರು ತನಿಖೆ ನಡೆಸಿದರು.

ತನಿಖೆಯಿಂದ ಲಭ್ಯವಾದ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಸೆಪ್ಟೆಂಬರ್ 15ರಂದು ಬೆಳಗಿನ ಜಾವ 2.15ರ ಸುಮಾರಿಗೆ ಬೀಡಿ ಗ್ರಾಮದ ಪಾರಿಶ್ವಾಡ ಕ್ರಾಸ್ ಬಳಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಮಂಜುನಾಥ ಬಾದಲಗಿ, ಶಂಕರ ಕರಿ, ಹನಂಮತ ಕೊಂಚಿಕೊರವರ ಸೇರಿದಂತೆ ನಾಲ್ವರು ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರಿಂದ 29 ಗ್ರಾಂ ಚಿನ್ನಾಭರಣ, 220 ಗ್ರಾಂ ಬೆಳ್ಳಿ ಆಭರಣ ಹಾಗೂ ಕಳ್ಳತನಕ್ಕೆ ಬಳಸಿದ್ದ ಎರಡು ಮೋಟಾರ್‌ಸೈಕಲ್‌ಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳ ವಿಚಾರಣೆಯಲ್ಲಿ ನಂದಗಡ ಹಾಗೂ ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಇತರೆ ಮನೆಗಳ್ಳತನ ಪ್ರಕರಣಗಳಲ್ಲೂ ಅವರ ಕೈವಾಡವಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಾಲ್ವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

Related Articles

Back to top button