*ರೇಣುಕಾಸ್ವಾಮಿ ಹತ್ಯೆ ಪ್ರಕರಣ: ದರ್ಶನ್ ಅರ್ಜಿ ವಜಾ* *ಪ್ರದೋಷ್ ‘ಮಾಫಿ ಸಾಕ್ಷಿ’ ಆದೇಶ ಎತ್ತಿಹಿಡಿದ ಹೈಕೋರ್ಟ್*

ಪ್ರಗತಿವಾಹಿನಿ ಸುದ್ದಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಅವರಿಗೆ ಹೈಕೋರ್ಟ್ನಲ್ಲಿ ಹಿನ್ನಡೆಯಾಗಿದೆ. ಪ್ರಕರಣದ 14ನೇ ಆರೋಪಿ ಪ್ರದೋಷ್ ರಾವ್ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಲು 59ನೇ ಸಿಸಿಹೆಚ್ ನ್ಯಾಯಾಲಯ ನೀಡಿದ್ದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ. ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ಹೈಕೋರ್ಟ್ ಪೀಠ ಈ ಆದೇಶ ನೀಡಿದ್ದು, ಪ್ರದೋಷ್ ಅವರನ್ನು ಕ್ರಾಸ್ ಎಗ್ಸಾಮಿನೇಷನ್ ವೇಳೆ ಪ್ರಶ್ನಿಸುವ ಹಕ್ಕು ಆರೋಪಿಗಳಿಗೆ ಇದೆ. ಹೀಗಾಗಿ ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುವ ವಿಚಾರಣಾ ನ್ಯಾಯಾಲಯದ ಆದೇಶದಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ಪೀಠ ಹೇಳಿದೆ.
ಪ್ರದೋಷ್ ಪರ ಹಿರಿಯ ವಕೀಲ ಕೆ. ದಿವಾಕರ್ ವಾದ ಮಂಡಿಸಿ, ದರ್ಶನ್ ಪರ ವಕೀಲರು ವಿಚಾರಣೆಯನ್ನು ವಿಳಂಬಗೊಳಿಸುತ್ತಿದ್ದಾರೆ ಎಂದು ಆರೋಪಿಸಿದರು. ಸುಪ್ರೀಂಕೋರ್ಟ್ನಲ್ಲಿ ದರ್ಶನ್ ಅವರ ಜಾಮೀನು ರದ್ದತಿ ವಿಚಾರಣೆ ನಡೆದಾಗಲೂ ತಾವು ವಾದಿಸಿದ್ದಾಗಿ ತಿಳಿಸಿದ ಅವರು, ಪ್ರದೋಷ್ ಅವರಿಗೆ ಪ್ರಕರಣದಲ್ಲಿ ತಮ್ಮ ತಪ್ಪಿಲ್ಲದಿದ್ದರೆ ಅಪ್ರೂವರ್ ಆಗುವಂತೆ ನ್ಯಾಯಾಲಯ ಸೂಚಿಸಿತ್ತು ಎಂದು ವಾದಿಸಿದರು. ಪ್ರದೋಷ್ ಅಪ್ರೂವರ್ ಆಗಲು ಅರ್ಜಿ ಸಲ್ಲಿಸಿದ ಬಳಿಕವೂ ಒಂದಲ್ಲೊಂದು ಆಕ್ಷೇಪಣೆ ಸಲ್ಲಿಸಲಾಗುತ್ತಿದೆ ಎಂದು ಹೇಳಿದರು.
ಜೈಲು ಕೈಪಿಡಿಯಲ್ಲಿ ಅವಕಾಶವಿರುವಂತೆ ಪ್ರದೋಷ್ ದೂರವಾಣಿ ಮೂಲಕ ಮಾತನಾಡಿದ್ದಾರೆ ಎಂದು ಅವರ ಪರ ವಕೀಲರು ವಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, “ನಾನು ಅಪ್ರೂವರ್ ಆಗುತ್ತೇನೆ ಎಂದು ದೂರವಾಣಿಯಲ್ಲಿ ಮಾತನಾಡಿದ್ದರೂ ತಪ್ಪೇನು? ಗಂಡ ಹೆಂಡತಿಗೆ ಅಭಿಪ್ರಾಯ ಕೇಳಿದರೆ ತಪ್ಪೇನಿದೆ? ಬೇರೆಯವರ ಚಿತಾವಣೆಯ ದಾಖಲೆ ಇದ್ದರೆ ಅದು ಬೇರೆ ವಿಚಾರ” ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಕರಣದ 10ನೇ ಆರೋಪಿ ವಿನಯ್ ಕೂಡ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ್ದು, ಅವರ ಅರ್ಜಿಯನ್ನು ಪರಿಗಣಿಸದೆ ಪ್ರದೋಷ್ ಅವರ ಅರ್ಜಿಯನ್ನು ಮಾತ್ರ ಪರಿಗಣಿಸಲಾಗಿದೆ ಎಂದು ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ವಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, “ಅದನ್ನು 10ನೇ ಆರೋಪಿ ಹೇಳಬೇಕು. ನೀವು ವಾದಿಸುವಂತಿಲ್ಲ” ಎಂದು ಹೇಳಿದರು.
ಚಿತ್ರದುರ್ಗದ ರೇಣುಕಾಸ್ವಾಮಿ ಅವರು 2024ರ ಜೂನ್ನಲ್ಲಿ ನಟ ದರ್ಶನ್ ಅವರ ಆಪ್ತೆ ಪವಿತ್ರಾ ಗೌಡ ಅವರಿಗೆ ಇನ್ಸ್ಟಾಗ್ರಾಮ್ನಲ್ಲಿ ಅಶ್ಲೀಲ ಸಂದೇಶ ಕಳುಹಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ರೇಣುಕಾಸ್ವಾಮಿಯನ್ನು ಬೆಂಗಳೂರಿನ ಪಟ್ಟಣಗೆರೆ ಶೆಡ್ಗೆ ಕರೆತಂದು ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ ಎಂದು ತನಿಖೆಯಲ್ಲಿ ಆರೋಪಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಒಟ್ಟು 17 ಆರೋಪಿಗಳನ್ನು ಪೊಲೀಸರು ಬಂಧಿಸಿ ತನಿಖೆ ನಡೆಸಿದ್ದರು. ಪ್ರಕರಣದ 14ನೇ ಆರೋಪಿ ಪ್ರದೋಷ್ ರಾವ್ ವಿರುದ್ಧ ಸಾಕ್ಷ್ಯ ನಾಶಪಡಿಸಲು ಹಾಗೂ ಹಣಕಾಸಿನ ವ್ಯವಹಾರಕ್ಕೆ ನೆರವಾದ ಆರೋಪಗಳಿವೆ.
ಪ್ರಕರಣದ ಸಂಪೂರ್ಣ ಸತ್ಯಾಸತ್ಯತೆಯನ್ನು ನ್ಯಾಯಾಲಯದ ಮುಂದೆ ಬಹಿರಂಗಪಡಿಸುವುದಾಗಿ ತಿಳಿಸಿ ಪ್ರದೋಷ್ ಅವರು ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ್ದರು. ಬೆಂಗಳೂರಿನ ಸಿಸಿಹೆಚ್ ನ್ಯಾಯಾಲಯ ಈ ಅರ್ಜಿಯನ್ನು ಪುರಸ್ಕರಿಸಿತ್ತು. ಇದೀಗ ಆ ಆದೇಶವನ್ನು ಪ್ರಶ್ನಿಸಿ ದರ್ಶನ್ ಪರವಾಗಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ್ದು, ವಿಚಾರಣಾ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದೆ.




