*ಅತ್ಯುತ್ತಮ ಸಕ್ಕರೆ ಇಳುವರಿ: ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಗೆ ರಾಷ್ಟ್ರಮಟ್ಟದ ಪ್ರಥಮ ಪ್ರಶಸ್ತಿ*

ಪ್ರಗತಿವಾಹಿನಿ ಸುದ್ದಿ: ಸಕ್ಕರೆ ಇಳುವರಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಚಿಕ್ಕೋಡಿ ತಾಲೂಕಿನ ನಂದಿ ಗ್ರಾಮದ ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಗೆ ರಾಷ್ಟ್ರಮಟ್ಟದ ಪ್ರಥಮ ಪ್ರಶಸ್ತಿ ಲಭಿಸಿದೆ.
ನವದೆಹಲಿಯಲ್ಲಿ ಮಂಗಳವಾರ ನಡೆದ ರಾಷ್ಟ್ರೀಯ ಸಹಕಾರಿ ಸಕ್ಕರೆ ಕಾರ್ಖಾನೆಗಳ ಮಹಾಮಂಡಳಿಯ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಮಹಾರಾಷ್ಟ್ರದ ಸಹಕಾರ ಸಚಿವ ಬಾಬಾಸಾಹೇಬ ಪಾಟೀಲ ಹಾಗೂ ರಾಷ್ಟ್ರೀಯ ಸಹಕಾರಿ ಸಕ್ಕರೆ ಕಾರ್ಖಾನೆಗಳ ಮಹಾಮಂಡಳಿ ಅಧ್ಯಕ್ಷ ಹರ್ಷವರ್ಧನ ಪಾಟೀಲ ಅವರು ಪ್ರಶಸ್ತಿ ನೀಡಿ ಗೌರವಿಸಿದರು.
ಸಹಕಾರಿ ತಳಹದಿಯ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಕ್ಕರೆ ಕಾರ್ಖಾನೆಗಳ ಕಾರ್ಯಕ್ಷಮತೆಯನ್ನು ಪ್ರತಿ ವರ್ಷ ವಿವಿಧ ಮಾನದಂಡಗಳ ಆಧಾರದ ಮೇಲೆ ರಾಷ್ಟ್ರೀಯ ಸಹಕಾರಿ ಸಕ್ಕರೆ ಕಾರ್ಖಾನೆಗಳ ಮಹಾಮಂಡಳಿ ಮೌಲ್ಯಮಾಪನ ಮಾಡುತ್ತದೆ. ವಿವಿಧ ವಿಭಾಗಗಳಲ್ಲಿ ಉತ್ತಮ ಸಾಧನೆ ಮಾಡಿದ ಕಾರ್ಖಾನೆಗಳಿಗೆ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ನೀಡಲಾಗುತ್ತದೆ. ಈ ಬಾರಿ ಸಕ್ಕರೆ ಇಳುವರಿ ವಿಭಾಗದಲ್ಲಿ ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಪ್ರಥಮ ಸ್ಥಾನ ಪಡೆದುಕೊಂಡಿದೆ.
ಕಾರ್ಖಾನೆಯ ರಾಷ್ಟ್ರೀಯ ಸಹಕಾರಿ ಸಕ್ಕರೆ ಕಾರ್ಖಾನೆಗಳ ಮಹಾಮಂಡಳಿ ನಿರ್ದೇಶಕ ಹಾಗೂ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಅಮಿತ ಕೋರೆ, ಕಾರ್ಖಾನೆಯ ನಿರ್ದೇಶಕ ಅಣ್ಣಾಸಾಹೇಬ ಜೊಲ್ಲೆ ಹಾಗೂ ಅಧಿಕಾರಿಗಳು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಈ ಸಾಧನೆ ಕುರಿತು ಕಾರ್ಖಾನೆಯ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ ಮಾತನಾಡಿ, ಕಾರ್ಖಾನೆಯ ರೂವಾರಿಗಳಾದ ಪದ್ಮಶ್ರೀ ಡಾ. ಪ್ರಭಾಕರ ಕೋರೆ ಅವರ ಮಾರ್ಗದರ್ಶನ, ಅಮಿತ ಕೋರೆ ಅವರ ನೇತೃತ್ವ, ಆಡಳಿತ ಮಂಡಳಿಯ ಸೂಕ್ತ ನಿರ್ಣಯಗಳು, ರೈತರ ಸಹಕಾರ ಹಾಗೂ ಅಧಿಕಾರಿಗಳು ಮತ್ತು ಕಾರ್ಮಿಕರ ನಿರಂತರ ಪರಿಶ್ರಮದಿಂದ ಈ ಪ್ರಶಸ್ತಿ ದೊರೆತಿದೆ ಎಂದು ಹೇಳಿದರು.
ರಾಷ್ಟ್ರಮಟ್ಟದ ಈ ಗೌರವವು ಕಾರ್ಖಾನೆಯ ಆಡಳಿತ ಮಂಡಳಿ, ಕಾರ್ಮಿಕರು ಹಾಗೂ ರೈತರಲ್ಲಿ ಸಂತಸ ಮೂಡಿಸಿದೆ ಎಂದು ಅವರು ತಿಳಿಸಿದರು.




